ಹಿರಿಯ ಕಮ್ಯುನಿಸ್ಟ್ ಕಾರ್ಯಕರ್ತ, ಆಟೊ ಚಾಲಕ ರಿಚರ್ಡ್ ಕ್ರಾಸ್ತ ವಿಧಿವಶ

0

ಸುಳ್ಯದ ಹಿರಿಯ ರಿಕ್ಷಾ ಚಾಲಕ ಹಾಗೂ ಹಿರಿಯ ಕಮ್ಯುನಿಸ್ಟ್ ಕಾರ್ಯಕರ್ತ ರಿಚರ್ಡ್ ಕ್ರಾಸ್ತರವರು ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾದರು. ಅವರಿಗೆ ಸುಮಾರು 64 ವರ್ಷ ವಯಸ್ಸಾಗಿತ್ತು.


ಸುಳ್ಯ ಜಯನಗರದಲ್ಲಿರುವ ತಮ್ಮ ಮನೆಯಲ್ಲಿ ಇಂದು ಮುಂಜಾನೆ 5.30 ರ ವೇಳೆಗೆ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದರು. ಅವರನ್ನು ಎತ್ತಿ ಆರೈಕೆ ಮಾಡುತ್ತಿದ್ದಂತೆ ಕೊನೆಯುಸಿರೆಳೆದರೆನ್ನಲಾಗಿದೆ. ಆದರೆ ವೈದ್ಯರಲ್ಲಿ ತೋರಿಸುವುದೊಳ್ಳೆಯದೆಂಬ ಕಾರಣಕ್ಕಾಗಿ ಮಗ ಅಕ್ಷತ್ ಕ್ರಾಸ್ತರವರು ತಂದೆಯನ್ನು ಮೊದಲು ಜ್ಯೋತಿ ಆಸ್ಪತ್ರೆಗೆ, ಬಳಿಕ ಕೆ.ವಿ.ಜಿ. ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ರಿಚ್ಚಿಯವರು ನಿಧನರಾಗಿರುವುದನ್ನು ದೃಢಪಡಿಸಿದರು.

ರಿಚರ್ಡ್ ಕ್ರಾಸ್ತರವರು ನಿನ್ನೆಯವರೆಗೂ ಆಟೋ ಚಾಲಕರಾಗಿ ದುಡಿಯುತ್ತಿದ್ದರು. ಕಮ್ಯುನಿಸ್ಟ್‌ ಕಾರ್ಯಕರ್ತರಾಗಿ ಸಮಾಜಸೇವಕರಾಗಿದ್ದ ಅವರು ಜಯನಗರ ಪ್ರದೇಶದಲ್ಲಿ ಜನಪ್ರಿಯರಾಗಿ ಅಜಾತಶತ್ರುವಾಗಿದ್ದರು.

ಮೃತರು ಪತ್ನಿ ಮಾಜಿ ನ.ಪಂ.ಸದಸ್ಯೆ ಜೂಲಿಯಾನ ಕ್ರಾಸ್ತ ಜಯನಗರ, ಇಬ್ಬರು ಪುತ್ರರು, ಸೊಸೆ ಮತ್ತು ಮೊಮ್ಮಗುವನ್ನು ಅಗಲಿದ್ದಾರೆ.

ರಿಚ್ಚಿಯವರ ಹಿರಿಯ ಪುತ್ರ ಆದರ್ಶ ಕ್ರಾಸ್ತ ಬೆಂಗಳೂರಿನಿಂದ ಹೊರಟಿದ್ದು ಅವರು ಬಂದ ನಂತರ ಅಂತ್ಯಸಂಸ್ಕಾರದ ವಿಧಿವಿಧಾನ ಆರಂಭಗೊಳ್ಳುವುದೆಂದು ತಿಳಿದುಬಂದಿದೆ.