ನಿಧನರಾದ ತಂದೆಯ ಅಂತಿಮ ಕಾರ್ಯಕ್ರಮಕ್ಕೆ ವಿದೇಶದಿಂದ ಮರಳಲು ಸಾಧ್ಯವಾಗದ ಯುವಕ

0

ಮಡಪ್ಪಾಡಿಯ ಯುವಕನ‌ ನೆರವಿಗೆ ಬಂದ ನೂತನ ಸಂಸದ ಕ್ಯಾ.ಬ್ರಿಜೇಶ್ ಚೌಟ

ಸಂಸದರ ನೆರವಿನಿಂದ ಊರಿಗೆ ಮರಳಿದ ಯುವಕ

ವಿದೇಶದಲ್ಲಿ ಉದ್ಯೋಗದಲ್ಲಿದ್ದ ಯುವಕನೊಬ್ಬನ ತಂದೆ ಊರಿನಲ್ಲಿ ನಿಧನರಾದರೂ, ಉದ್ಯೋಗ ಮಾಡುತ್ತಿದ್ದಲ್ಲಿ ಪಾಸ್ ಪೋರ್ಟ್ ತೆಗೆದಿಟ್ಟ ಕಾರಣ ತಂದೆಯ ಸದ್ಗತಿ ಕಾರ್ಯಕ್ಕೆ ಬರಲು ಅನಾನೂಲವಾದ ಹಿನ್ನೆಲೆಯಲ್ಲಿ ಊರಿಗೆ ಮರಳಲು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ವಿದೇಶಾಂಗ ಇಲಾಖೆ ಮತ್ತು ಮಾಲ್ಮೀಲ್ಸ್ ಎಂಬಸ್ಸಿ ಕಚೇರಿಯನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸಿದ ವಿದ್ಯಮಾನವೊಂದು ವರದಿಯಾಗಿದೆ.

ಮಡಪ್ಪಾಡಿ ಗ್ರಾಮದ ಗುರುಪ್ರಸಾದ್ ಗೋಳ್ಯಾಡಿ ಎಂಬವರು ಜೂ.20ರಂದು ನಿಧನರಾಗಿದ್ದರು. ಇವರ ಮಗ ತ್ರಿಶೂಲ್ ಎರಡು ವರ್ಷಗಳಿಂದ ಮಾಲ್ಡೀವ್ಸ್ ನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸಕ್ಕಿದ್ದರು. ತಂದೆಯ ನಿಧನ ವಿಷಯ ತಿಳಿದು ಊರಿಗೆ ಬರಲು ಪ್ರಯತ್ನ ಮಾಡಿದ್ದರು. ಆದರೆ, ಕಂಪನಿಯವರು ರಜೆಯನ್ನೂ ಕೊಡದೆ ಕೆಲಸ ಬಿಟ್ಟು ಹೋಗದಂತೆ ಪಾಸ್ಪೋರ್ಟ್ ಪ್ರತಿಯನ್ನೇ ತೆಗೆದಿಟ್ಟಿದ್ದರು. ಇತ್ತ ಮನೆಯವರು ಏಕೈಕ ಮಗ ವಿದೇಶದಿಂದ ಬರುತ್ತಾನೆಂದು ಜೂನ್ 20ರದು ಗುರುಪ್ರಸಾದ್ ನಿಧನ ಆಗಿದ್ದರೂ, 24ರ ವರೆಗೂ ಕಾದಿದ್ದರು. ಕೊನೆಗೆ, ತ್ರಿಶೂಲ್ ತನಗೆ ಬರಲಾಗುವುದಿಲ್ಲ, ನೀವು ಅಂತ್ಯಕ್ರಿಯೆ ಪೂರ್ತಿಗೊಳಿಸಿ ಎಂದು ಹೇಳಿದ್ದರಿಂದ ಅಂತ್ಯಕ್ರಿಯೆ ನೆರವೇರಿಸಿದ್ದರು.

ಜೂ.24ರಂದು ಸಂಸದ ಬ್ರಿಜೇಶ್ ಚೌಟ ಪ್ರಮಾಣ ವಚನಕ್ಕಾಗಿ ದೆಹಲಿಗೆ ಹೋಗಿದ್ದಾಗ, ಗುರುಪ್ರಸಾದ್‌ ಅವರ ಹತ್ತಿರದ ಸಂಬಂಧಿ ಬೆಳ್ತಂಗಡಿ ತಾಲೂಕಿನ ಪದ್ಮುಂಜ ಗ್ರಾಮದ ನಿವೃತ್ತ ಉಪನ್ಯಾಸಕ ರುಕ್ಕಯ ಗೌಡರು ಸಂಸದರಿಗೆ ಫೋನ್ ಕರೆ ಮಾಡಿ ವಿಷಯ ತಿಳಿಸಿ, ತ್ರಿಶೂಲ್ ನನ್ನು ಕರೆತರಲು ಸಹಾಯ ಮಾಡುವಂತೆ ಕೇಳಿಕೊಂಡಿದ್ದರು. ಕೂಡಲೇ ಸ್ಪಂದಿಸಿದ ಸಂಸದರು, ವಿದೇಶಾಂಗ ಇಲಾಖೆ ಮತ್ತು ಮಾಲ್ಡೀವ್ಸ್ ಹೈಕಮಿಷನ್ ಗೆ ನೇರವಾಗಿ ಇಮೇಲ್ ಮೂಲಕ ಸಂದೇಶ ಕಳುಹಿಸಿದ್ದರು. ಸಂಸದರ ಮನವಿಗೆ ಮಾಲ್ಡೀವ್ಸ್ ಭಾರತೀಯ ರಾಯಭಾರ ಕಚೇರಿಯಿಂದ ಪ್ರತಿಕ್ರಿಯೆ ಬಂದಿದ್ದು, ಯುವಕನ ಬಿಡುಗಡೆಗೆ ಪ್ರಯತ್ನಿಸುವ ಭರವಸೆ ಲಭಿಸಿತ್ತು.

ರಾಯಭಾರ ಕಚೇರಿಯ ಸೂಚನೆಯಂತೆ, ಖಾಸಗಿ ಕಂಪನಿಯ ಪ್ರತಿನಿಧಿಗಳು ಸ್ಪಂದಿಸಿ, ರಜೆ ಕೊಟ್ಟಿದ್ದಲ್ಲದೆ, ವೇತನ ರಜೆ ಸಹಿತ ಊರಿಗೆ ಕಳುಹಿಸಿಕೊಟ್ಟಿದ್ದಾರೆ. ಅದರಂತೆ, ಜೂ. 27ರ ರಾತ್ರಿ ತ್ರಿಶೂಲ್ ಬೆಂಗಳೂರು ತಲುಪಿದ್ದು, ಅಲ್ಲಿಂದ ರಸ್ತೆ ಮೂಲಕ ಶುಕ್ರವಾರ ಬೆಳಗ್ಗೆ ಊರಿಗೆ ತಲುಪಿರುವುದಾಗಿ ತಿಳಿದು ಬಂದಿದೆ.