ಲೋಕೋಪಯೋಗಿ ಇಲಾಖಾ ಮುಖಾಂತರ ಹರಾಜು ಪ್ರಕ್ರಿಯೆ
ಯೋಗ್ಯ ಬೆಲೆಗೆ ಮರಳು ದೊರೆಯಬಹುದೆಂಬ ನಿರೀಕ್ಷೆ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಸಂದರ್ಭದ ಕುಮಾರಧಾರ ನದಿಯಲ್ಲಿ ಅವಭೃತೋತ್ಸವದ ನೆಪದಲ್ಲಿ ನಡೆಯುತಿದ್ದ ಮರಳುಗಾರಿಕೆ, ಹೂಳು ತೆಗೆಯುವಿಕೆಯನ್ನು ಖಾಸಗಿಯವರಿಗೆ ನೀಡದೆ, ಲೋಕೋಪಯೋಗಿ ಇಲಾಖೆಗೆ ವಹಿಸಿದ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಕಾರ್ಯ ಮೆಚ್ಚುಗೆಗೆ ವ್ಯಕ್ತವಾಗಿದೆ.









ಪ್ರತಿವರ್ಷ ನಡೆಯುವ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವದ ಮರುದಿನ ಕುಮಾರಧಾರ ನದಿಯಲ್ಲಿ ದೇವರ ಅವಭೃತೋತ್ಸವ ಹಾಗೂ ನೌಕಾವಿಹಾರ ನಡೆಯುವ ಕಾರಣ ಜಳಕದ ಗುಂಡಿಯ ಮರಳು ಮತ್ತು ಹೂಳನ್ನು ತೆರವುಗೊಳಿಸಬೇಕಾಗುತ್ತದೆ. ಈ ಅನಿವಾರ್ಯತೆಯನ್ನು ದುರುಪಯೋಗಿಸಿಕೊಡು ಈ ಹಿಂದಿನ ವರ್ಷಗಳಲ್ಲಿ ಅಕ್ರಮ ಮರಳುಗಾರಿಕೆಯ ಆರೋಪ ಕೇಳಿಬರುತ್ತಿತ್ತು. ಲಕ್ಷಾಂತರ ಮೌಲ್ಯದ ಮರಳನ್ನು ಕಳ್ಳ ಸಾಗಾಟ ಮಾಡುವ ಆರೋಪ ವ್ಯಕ್ತವಾಗಿತ್ತು. ಉಚಿತವಾಗಿ ದೊರೆಯುತ್ತಿದ್ದ ಮರಳನ್ನು ಸಾರ್ವಜನಿಕರಿಗೆ, ದುಬಾರಿ ದರದಲ್ಲಿ ಮಾರಾಟ ಮಾಡುತ್ತಿದ್ದರಿಂದ ಸಾರ್ವಜನಿಕರಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಈ ವರ್ಷ ಈ ದಂಧೆಗೆ ಸಂಪೂರ್ಣ ಕಡಿವಾಣ ಬಿದ್ದಿದೆ.

ಜಳಕದ ಗುಂಡಿಯ ಮರಳು ತೆಗೆಯುವ ಜವಾಬ್ದಾರಿಯನ್ನು ಸುಬ್ರಹ್ಮಣ್ಯ ಲೋಕೋಪಯೋಗಿ ಇಲಾಖೆಗೆ ವಹಿಸಿದ ಆಯುಕ್ತರು ಆ ಮೂಲಕ ಉತ್ತಮ ಕಾರ್ಯಕ್ಕೆ ಬುನಾದಿ ಹಾಕಿದ್ದಾರೆ. ಮಾರುಕಟ್ಟೆಯ ಮೌಲ್ಯ ಪ್ರಕಾರ ಸುಮಾರು 20 ಲಕ್ಷಕ್ಕೂ ಮಿಕ್ಕಿ ಬೆಲೆಬಾಳುವ ಮರಳು ಲೋಡನ್ನು ಸುಬ್ರಹ್ಮಣ್ಯದ ಕುಲ್ಕುಂದ ದಲ್ಲಿರುವ ಲೋಕೋಪಯೋಗೆ ಇಲಾಖೆಯ ನಿವೇಶನದಲ್ಲಿ ದಾಸ್ತಾನು ಮಾಡಲಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ಮುಕ್ತ ಪ್ರಶಂಸೆಗಳು ವ್ಯಕ್ತವಾಗಿವೆ.. ಮುಂದಿನ ದಿನಗಳಲ್ಲಿ ಇಲಾಖಾ ಮುಖಾಂತರ ಹರಾಜು ನಡೆದು ಯೋಗ್ಯ ಬೆಲೆಗೆ ಮರಳು ದೊರೆಯಬಹುದೆಂದು ಸುಬ್ರಹ್ಮಣ್ಯ ಆಸುಪಾಸಿನ ನಾಗರಿಕರು ಆಶಾಭಾವನೆಯಲ್ಲಿದ್ದಾರೆ.
ಮರಳು ದಂಧೆಯನ್ನು ಮಟ್ಟ ಹಾಕಿದ ದೇವಸ್ಥಾನದ ಯವ ಆಡಳಿತಾಧಿಕಾರಿ ಜುಬಿನ್ ಮೊಹಾಪಾತ್ರ ಹಾಗೂ ಇಂಜಿನಿಯರ್ ಪ್ರಮೋದ್ ಮತ್ತು ಅಧಿಕಾರಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.









