ಆಲೆಟ್ಟಿ ಗ್ರಾಮ ಸಭೆಯಲ್ಲಿ ಮತ್ತೆ ಭುಗಿಲೆದ್ದ ಕಲ್ಚೆರ್ಪೆ ವಿಚಾರ

0

ವೇದಿಕೆಯ ಎದುರು ನೆಲದಲ್ಲಿ ಕುಳಿತು ಪ್ರತಿಭಟಿಸಿದ ನಿವಾಸಿಗಳು

ಆಲೆಟ್ಟಿ ಗ್ರಾಮ ಸಭೆಯಲ್ಲಿ ಸುಳ್ಯ ನಗರ ಪಂಚಾಯತಿನಿಂದ ಕಲ್ಚೆರ್ಪೆ ಯಲ್ಲಿ ತ್ಯಾಜ್ಯ ಸುರಿಯುತ್ತಿದ್ದು ಅವೈಜ್ಞಾನಿಕ ನಿರ್ವಹಣೆಯಿಂದಾಗಿ ಬೇಸತ್ತು ಆಕ್ರೋಶಭರಿತರಾಗಿ ಕಲ್ಚೆರ್ಪೆ ಪರಿಸರದ ನಿವಾಸಿಗಳು ಫೆ.25 ರಂದು ನಡೆದ ಗ್ರಾಮ ಸಭೆಯಲ್ಲಿ ಪಂಚಾಯತ್ ಆಡಳಿತ ಮಂಡಳಿಯ ಸದಸ್ಯರನ್ನು ತರಾಟೆ ಗೆತ್ತಿಕೊಂಡರಲ್ಲದೆ ಪ್ರತಿಭಟಿಸಿ ಸಭೆಯಿಂದ ಹೊರ ನಡೆದ ಘಟನೆ ನಡೆಯಿತು.

ಈ ಸಭೆಯಲ್ಲಿ ಇಂಜಿನಿಯರ್ ಮತ್ತು ಅಧಿಕಾರಿಗಳು ಬಂದು ಸಮರ್ಪಕವಾದ ಉತ್ತರ ನೀಡುವುದಿದ್ದರೆ ಮಾತ್ರ ನಾವು ಈ ಸಭೆಯಲ್ಲಿ ಭಾಗವಹಿಸುತ್ತೇವೆ. ಇಲ್ಲವಾದಲ್ಲಿ ಸಭೆಯಿಂದ ಹೊರ ನಡೆಯುತ್ತೇವೆಂದು ವೇದಿಕೆಯ ಎದುರು ನೆಲದಲ್ಲಿ ಕುಳಿತು ಪರಿಸರದವರು ಪ್ರತಿಭಟಿಸಿದರು.

ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸಿಕೊಂಡು ಬದುಕುತ್ತಿದ್ದೇವೆ. ಇನ್ನು ಕೂಡ ನಮಗೆ ಸರಿಯಾದ ವ್ಯವಸ್ಥೆ ಗ್ರಾಮ ಪಂಚಾಯತಿನಿಂದಾಗಲಿ ಅಥವಾ ನಗರ ಪಂಚಾಯತ್ ನವರಿಂದ ಆಗಿರುವುದಿಲ್ಲ. ಜಿಲ್ಲಾಮಟ್ಟದ ಅಧಿಕಾರಿಗಳು ಇಲಾಖೆಯವರು ಬಂದು ಹೋಗಿರುವುದಲ್ಲದೆ ಹೇಳಿದ ರೀತಿಯಲ್ಲಿ ಯಾವುದೇ ವ್ಯವಸ್ಥೆ ಮಾಡಲಿಲ್ಲ. ಕಲುಷಿತ ನೀರು ಕುಡಿದು ಪರಿಸರದ ಮನೆ ಮಂದಿಗಳು ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಇಲ್ಲಿಯ ತನಕ ಈ ಪರಿಸರದ ನೀರಿನ ಪರೀಕ್ಷೆ ಮಾಡಿಸಿಲ್ಲ. ಈ ಭಾಗದ ಜನರ ಬಗ್ಗೆ ನಿರ್ಲಕ್ಷ್ಯ ಧೋರಣೆ ಪಂಚಾಯತ್ ಮಾಡುತ್ತಿದೆ. ಅಧಿಕಾರಿಗಳು ಬಾರದೇ ಇರುವ ಈ ಸಭೆಯಲ್ಲಿ ಕುಳಿತು ಚರ್ಚಿಸುವುದಿಲ್ಲ ಬದಲಾಗಿ ನಾವು ಸಭೆಯಲ್ಲಿ ಪ್ರತಿಭಟನೆ ನಡೆಸಿ ಹೊರಡುವುದಾಗಿ
ಆಕ್ರೋಶಭರಿತರಾದ ಕಲ್ಚೆರ್ಪೆ ನಿವಾಸಿಗಳಾದ ಗೋಕುಲ್ ದಾಸ್, ನಾರಾಯಣ ಜಬಳೆ, ಅಶೋಕ ಪೀಚೆ ಬಾಲಚಂದ್ರ ಕಲ್ಚೆರ್ಪೆ, ರಾಧಾಕೃಷ್ಣ ಪರಿವಾರಕಾನ
ವೇದಿಕೆಯ ಎದುರು ನೆಲದಲ್ಲಿ ಕುಳಿತು ಪ್ರತಿಭಟಿಸಿದರಲ್ಲದೆ ಸಭೆಯಿಂದ ಹೊರ ನಡೆದರು.

ಈ ಹಿಂದೆಯೂ ಪತ್ರ ಮುಖೇನ ಮಾತ್ರ ನಿರ್ಣಯ ತೀರ್ಮಾನ ಮಾಡಿರುವುದಲ್ಲದೆ ಹೇಳಿದ ಕೆಲಸ ಕಾರ್ಯಗಳು ಆಗಿಲ್ಲ ಎಂದು ಆರೋಪಿಸಿದರು.
ಅಧಿಕಾರಿಗಳು
ಉಡಾಫೆ ಉತ್ತರ
ನೀಡಿ ನಮ್ಮನ್ನು ಯಾಮರಿಸಿರಿವುದಲ್ಲದೆ ನಮ್ಮ ಬಗ್ಗೆ ಗ್ರಾಮ ಪಂಚಾಯತ್ ನವರು ಕಾಳಜಿ ತೋರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಅಧ್ಯಕ್ಷ ಪುರುಷೋತ್ತಮ ಕೋಲ್ಚಾರು ರವರು ಕಲ್ಚೆರ್ಪೆ ಸಮಸ್ಯೆ ಇಂದು ನಿನ್ನೆಯದಲ್ಲ ಕಳೆದ ಹತ್ತು ವರ್ಷಗಳಿಂದ ಇದೇ ರೀತಿ ಸುದ್ದಿಯಾಗುತ್ತಲೇ ಇದೆ. ಇದಕ್ಕೆ ಸರಿಯಾದ ವ್ಯವಸ್ಥೆ ಮಾಡಲೇಬೇಕು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ಗ್ರಾಮ ಸಭೆಗೆ ಮುಂಚಿತವಾಗಿ ಪರಿಹಾರದ ವ್ಯವಸ್ಥೆ ಆಗಬೇಕು ಎಂದು ಒತ್ತಾಯಿಸಿದರು.

ಕಲ್ಚೆರ್ಪೆ ವಿಚಾರವಾಗಿ ಮುಂದಿನ ದಿನಗಳಲ್ಲಿ ನಾವೆಲ್ಲರೂ ಸೇರಿ ಜಿಲ್ಲಾಧಿಕಾರಿಗಳು ಅಥವಾ ಮಾನ್ಯ ಎ.ಸಿ ಯವರನ್ನು ಸಂಪರ್ಕಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಇಂಜಿನಿಯರ್ ರವರನ್ನು ಕರೆಸಿ ನಗರ ಪಂಚಾಯತ್ ನವರ ಸಮ್ಮುಖದಲ್ಲಿ ಮಾತುಕತೆ ನಡೆಸಿ ಪರಿಸರದ ನಿವಾಸಿಗಳಿಗೆ ಯಾವುದೇ ಸಮಸ್ಯೆ ಬಾರದ ರೀತಿಯಲ್ಲಿ ಘನತ್ಯಾಜ್ಯದ ನಿರ್ವಹಣೆ ಮಾಡುವಂತೆ ಸೂಚಿಸಲಾಗುವುದು ಎಂದು ಪಂಚಾಯತ್ ಅಧ್ಯಕ್ಷೆ ವೀಣಾ ರವರು ಉತ್ತರಿಸಿದರು.
ನಾವು ಯಾವತ್ತಿದ್ದರೂ ಗ್ರಾಮಸ್ಥರ ಪರವಾಗಿ ಮಾತನಾಡುತ್ತೇವೆ. ಹೊರತು ನಗರ ಪಂಚಾಯತ್ ಪರವಾಗಿ ಮಾತನಾಡಿಲ್ಲ. ಘನ ತ್ಯಾಜ್ಯ ನಿರ್ವಹಣೆಯ ಬಗ್ಗೆ ಸಾಕಷ್ಟು ಬಾರಿ ಪತ್ರ ಬರೆದು ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಸರಿಯಾದ ರೀತಿಯಲ್ಲಿ ವ್ಯವಸ್ಥೆ ಮಾಡದಿರುವುದರಿಂದ ದಿನಂಪ್ರತಿ ಸಮಸ್ಯೆ ಎದುರಾಗಿದೆ. ಇದರ ಬಗ್ಗೆ ಪಂಚಾಯತ್ ವತಿಯಿಂದ ಪತ್ರ ಬರೆದು ಎ.ಸಿಯವರ ಗಮನಕ್ಕೆ ತರುವುದಾಗಿ ಪಿ.ಡಿ.ಒ ಸೃಜನ್ ತಿಳಿಸಿದರು.

ಪಂಚಾಯತ್ ಅಧ್ಯಕ್ಷೆ ವೀಣಾ ವಸಂತ ಆಲೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಸಭೆಯು ನಡೆಯಿತು.
ನೋಡೆಲ್ಅಧಿಕಾರಿಯಾಗಿ ಶ್ರೀಮತಿ ಸುಹಾನ ರವರು ಸಭೆಯ ಕಲಾಪ ನಡೆಸಿಕೊಟ್ಟರು.

ವೇದಿಕೆಯಲ್ಲಿ ಉಪಾಧ್ಯಕ್ಷೆ ಕಮಲ ನಾಗಪಟ್ಟಣ,
ದಿನೇಶ್ ಕಣಕ್ಕೂರು,
ಸತ್ಯ ಕುಮಾರ್ ಆಡಿಂಜ, ಗೀತಾ ಕೋಲ್ಚಾರು,
ಚಂದ್ರ ಕಾಂತ್ ನಾರ್ಕೋಡು, ಸತ್ಯ ಪ್ರಸಾದ್ ಗಬ್ಬಲ್ಕಜೆ, ಶಿವಾನಂದ ರಂಗತ್ತಮಲೆ, ರದೀಶನ್ ಅರಂಬೂರು, ವೇದಾವತಿ ನೆಡ್ಚಿಲು, ಸುದೇಶ್ ಅರಂಬೂರು, ಪುಷ್ಪಾವತಿ ಕುಡೆಕಲ್ಲು, ಅನಿತಾ ಎಸ್, ಶಶಿಕಲಾ ದೋಣಿಮೂಲೆ, ಶಂಕರಿ ಕೊಲ್ಲರಮೂಲೆ, ಮೀನಾಕ್ಷಿ ಕುಡೆಕಲ್ಲು, ಕುಸುಮಾವತಿ, ಭಾಗೀರಥಿ ಪತ್ತುಕುಂಜ ಉಪಸ್ಥಿತರಿದ್ದರು.