ಲೈಕನ್ ಪ್ಲ್ಯಾನಸ್ ಎಂಬುದು ಕ್ಯಾನ್ಸರ್ ಪೂರ್ವ ಸ್ಥಿತಿಯಾಗಿದ್ದು ಯಾವುದೇ ನಿರ್ದಿಷ್ಠ ಕಾರಣಗಳು ಇಲ್ಲದೆ ಬರುವ ರೋಗವಾಗಿರುತ್ತದೆ. ಈ ಕ್ಯಾನ್ಸರ್ ಪೂರ್ವ ಸ್ಥಿತಿ ಚರ್ಮದಲ್ಲಿ ಮತ್ತು ಬಾಯಿ ಕುಹರದ ಒಳಭಾಗದ ಪದರಗಳಲ್ಲಿ ಕಂಡು ಬರುತ್ತವೆ. ಬಾಯಿಯೊಳಗೆ ಬಿಳಿ, ಕೆಂಪು, ಮಚ್ಚೆಗಳಂತೆ, ಬಲೆಗಳಂತೆ ಕಂಡು ಬರುವ ಅಪಾಯ ರಹಿತ ಕ್ಯಾನ್ಸರ್ ಅಲ್ಲದ ರೋಗ ಇದಾಗಿರುತ್ತ್ತದೆ. ಬಾಯಿಯೊಳಗೆ ಈ ರೀತಿ ಬರುವಾಗ ಅದನ್ನು ಓರಲ್ ಲೈಕನ್ ಪ್ಲ್ಯಾನಸ್ ಎಂದು ಕರೆಯಲಾಗುತ್ತದೆ. ಇದು ಸೋಂಕು ರೋಗವೂ ಅಲ್ಲ ಮತ್ತು ಇನ್ನೊಬ್ಬರಿಗೆ ಹರಡುವ ಸಾದ್ಯತೆ ಇರುವುದಿಲ್ಲ. ಯಾವುದೇ ನಿರ್ದಿಷ್ಟ ನಿಖರ ಕಾರಣಗಳು ಇಲ್ಲದೆ ಈ ರೋಗ ಬರುತ್ತದೆ. ನಮ್ಮ ದೇಹದ ಪ್ರತಿರೋದಕ ಶಕ್ತಿ ಕುಗ್ಗಿದಾಗ ಈ ರೋಗ ಬರುವ ಸಾದ್ಯತೆ ಹೆಚ್ಚಾಗಿರುತ್ತದೆ. ನಮ್ಮ ದೇಹದ ರಕ್ಷಣಾ ವ್ಯವಸ್ಥೆಯಲ್ಲಿ ಉಂಟಾಗುವ ಸಂಕೀರ್ಣ ಪ್ರಕ್ರಿಯೆಗಳಿಂದ ಪ್ರತಿರೋಧಕ ಶಕ್ತಿ ಕುಗ್ಗಿ ಹೋಗಿ ಈ ಕ್ಯಾನ್ಸರ್ ಪೂರ್ವ ಸ್ಥಿತಿ ಬರುವ ಸಾದ್ಯತೆ ಇದೆ ಎಂದು ರೋಗ ರಚನಾ ಶಾಸ್ತ್ರದ ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.
40 ವರ್ಷ ದಾಟಿದ ಬಳಿಕ ಈ ರೋಗ ಬರುವ ಸಾದ್ಯತೆ ಹೆಚ್ಚಾಗಿರುತ್ತದೆ. ಮಕ್ಕಳಲ್ಲಿ ಈ ರೋಗ ಬರುವ ಸಾದ್ಯತೆ ಅತ್ಯಂತ ವಿರಳ. ಪುರುಷರಿಗಿಂತ ಮಹಿಳೆಯರಿಗೆ ಈ ರೋಗ ಬರುವ ಸಾದ್ಯತೆ ಹೆಚ್ಚಾಗಿರುತ್ತದೆ. ಹೆಚ್ಚಾಗಿ ಕೆನ್ನೆಯ ಒಳ ಭಾಗ, ನಾಲಗೆಯ ಬದಿಯಲ್ಲಿ ಮತ್ತು ವಸಡುಗಳಲ್ಲಿ ಲೈಕನ್ ಪ್ಲ್ಯಾನಸ್ ಕಂಡು ಬರುತ್ತದೆ. ಹೆಚ್ಚಾಗಿ ಈ ರೋಗ ಮಚ್ಚೆಯ ಪರಿಧಿಯೊಳಗೆ ಹರಡಿದ ಬಿಳಿಯ ಗೆರೆಗಳುಳ್ಳ ಬಿಳಿಯ ಮಚ್ಚೆಗಳ ರೀತಿಯಲ್ಲಿ ಕಂಡು ಬರುತ್ತದೆ. ಕೆಲವೊಮ್ಮೆ ಹೊಲಿದ ಲೇಸ್‍ನಂತೆ ಅಥವಾ ಸೊಳ್ಳೆ ಪರದೆಯ ಲೇಸ್‍ನಂತೆ ವಿಶಿಷ್ಟ ವಿನ್ಯಾಸವಿರಲೂಬಹುದು. ಅತಿ ವಿರಳ ಸಂದರ್ಭಗಳಲ್ಲಿ ಕೆಂಪು ಬಣ್ಣ ಹೊಂದಿರಬಹುದು. ಇನ್ನು ಕೆಲವೊಮ್ಮೆ ಈ ಬಿಳಿ ಮಚ್ಚೆಗಳ ನಡುವೆ ಹುಣ್ಣು ಇರುವ ಸಾಧ್ಯತೆ ಇರುತ್ತದೆ.
ಕಾರಣಗಳು ಏನು ?









೧ ದೇಹದ ಪ್ರತಿರೋಧಕ ಶಕ್ತಿ ಕುಂದಿದಾಗ ಅಥವಾ ಹೆಚ್ಚು ತೀವ್ರವಾಗಿ ಪ್ರತಿಕ್ರಯಿಸಿದಾಗ
೨ ಸ್ಟಿರಾಯ್ಡು ಅಲ್ಲದ ನೋವು ನಿವಾರಕ ಔಷಧಿಗಳು
೩ ರಕ್ತದೊತ್ತಡ ಕಡಮೆ ಮಾಡುವ ಔಷಧಿಗಳ (ಅಟೆನ್‍ವಾಲ್ ಎಂಬ ಬೀಟಾ ಬ್ಲಾಕರ್ ಔಷಧಿ)ಬಳಕೆ.
೪ ಮಲೇರಿಯಾ ಚಿಕಿತ್ಸೆಗೆ ಬಳಸುವ ಔಷಧಿಗಳು.
೫ ಮಧುಮೇಹ ನಿಯಂತ್ರಕ ಔಷಧಿಗಳು.
ಬಾಯಿಯೊಳಗೆ ಇರುವ ದೇಹದ ಕ್ರೌನ್‍ಗಳು ಅಥವಾ ಲೋಹದ ಅಂಶವಿರುವ ಸಿಮೆಂಟುಗಳಿಂದಲೂ ಈ ರೀತಿ ರೋಗ ಬರಲು ಸಾಧ್ಯವಿದೆ. ಈ ರೀತಿಯ ರೋಗ ಸ್ಥಿತಿಗೆ ಓರಲ್ ಲೈಕನಾಯ್ಡ ರಿಯಾಕ್ಷನ್ ಎನ್ನುತ್ತಾರೆ. ಈ ರೀತಿಯ ರೋಗ ಸ್ಥಿತಿ ಹಲ್ಲಿನಲ್ಲಿ ಲೋಹದ ದೇಹದ ಸಾಧನವಿರುವ ಅಥವಾ ಲೋಹದ ಸಿಮೆಂಟ್ ತುಂಬಿದ ಹಲ್ಲಿನ ತಳದ ಪಕ್ಕದಲ್ಲಿ ಮಾತ್ರ ಕಂಡು ಬರುತ್ತದೆ. ಇದು ಬಾಯಿ ಕುಹರದ ಒಂದೇ ಬದಿಯಲ್ಲಿ ಮಾತ್ರ ಕಂಡು ಬರುತ್ತದೆ. ಅದರೆ ಓರಲ್ ಲೈಕನ್ ಪ್ಲಾನಸ್ ಬಾಯಿ ಕುಹರದ ಎರಡೂ ಭಾಗದಲ್ಲಿ ಕಂಡು ಬರುತ್ತದೆ. ಉರಿಯೂತ, ಉರಿತ ಇರುತ್ತದೆ. ಔಷಧಿ ಅಡ್ಡ ಪರಿಣಾಮ ಮತ್ತು ಅಲರ್ಜಿಯಿಂದ ಬಂದ ಲೈಕ್‍ನಾಯ್ಡು ರಿಯಾಕ್ಷನ್ ಕುಹರದ ಒಂದೇ ಭಾಗದಲ್ಲಿ ಇರುತ್ತದೆ.
ರೋಗದ ಲಕ್ಷಣಗಳು
ಬಿಳಿ ಮಚ್ಚೆಗಳು ಬಾಯಿಯೊಳಗೆ ಕಂಡು ಬರುತ್ತದೆ.
ಬಾಯಿಯಲ್ಲಿ ಉರಿತ, ಉರಿಯೂತ ಇರುತ್ತದೆ. ಜಾಸ್ತಿ ಮಸಾಲೆ ಮತ್ತು ಖಾರ ಇರುವ ಆಹಾರ ಮತ್ತು ಆಮ್ಲೀಯ ದ್ರಾವಣ ಸೇವಿಸಿದಾಗ ಉರಿತ ಜಾಸ್ತಿಯಾಗುತ್ತದೆ. ಕಾಳು ಮೆಣಸು, ಮೆಣಸು, ವಿಟಮಿನ್-ಸಿ ಹೆಚ್ಚಿರುವ ಹಣ್ಣುಗಳು, ಆಲ್ಕೋಹಾಲ್ ಟೊಮ್ಯಾಟೊ ಮುಂತಾದ ಆಹಾರ ಸೇವಿಸಿದಾಗ ಉರಿತ ಉಂಟಾಗುತ್ತದೆ.
ಅತೀ ವಿರಳ ಸಂದರ್ಭಗಳಲ್ಲಿ ಬಾಯಿಯಲ್ಲಿ ಹುಣ್ಣು ಇರುವ ಸಾಧ್ಯತೆ ಇದೆ.
ಹೆಚ್ಚು ಸಂದರ್ಭಗಳಲ್ಲಿ ಯಾವುದೇ ನೋವು ಇರುವುದಿಲ್ಲ.
ರೋಗದ ಚಿಕಿತ್ಸೆ ಹೇಗೆ?
ಯಾವುದೇ ನಿರ್ದಿಷ್ಟ ಚಿಕಿತ್ಸೆ ಅಗತ್ಯವಿರುವುದಿಲ್ಲ. ಆದರೆ ಉರಿತ ಇದ್ದಲ್ಲಿ ಸ್ಟಿರಾಯ್ಡ ಲೇಪನ ಅಥವಾ ಇಂಟ್ರಾ ಲೀಸ್‍ನಲ್ ಸ್ಟಿರಾಯ್ಡು ಔಷಧಿ ಚುಚ್ಚುಮುದ್ದು ನೀಡಲಾಗುವುದು. ದೇಹದ ರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುವ ಔಷಧಿಗಳನ್ನು ಬಳಸಲು ಪ್ರಯೋಗಗಳು ನಡೆಯುತ್ತಿದೆ. ತಾಜಾ ಹಸಿ ತರಕಾರಿ, ಹಣ್ಣು ಹಂಪಲು ಸೇವಿಸಿ ದೇಹದ ಆರೋಗ್ಯವನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ನೂರರಲ್ಲಿ ಒಂದು ಶೇಕಡಾ ಲೈಕನ್ ಪ್ಯಾನ್‍ಸ್ ಕ್ಯಾನ್ಸರ್ ಆಗಿ ಪರಿವರ್ತನೆ ಆಗುವ ಸಾದ್ಯತೆ ಇರುತ್ತದೆ. ಹುಣ್ಣು ಉಂಟಾಗಿ ನೋವು ಬಂದು ರಕ್ತ ವಸರುತ್ತಿದ್ದಲ್ಲಿ ಮಾತ್ರ ಬಯಾಪ್ಸಿ ಪರೀಕ್ಷೆ ಅಗತ್ಯವಿರುತ್ತದೆ. ನಿರಂತರವಾಗಿ ದಂತ ವೈದ್ಯರ ಸಲಹೆ ಸಂದರ್ಶನ ಮಾರ್ಗದರ್ಶನ ಮತ್ತು ಆಪ್ತ ಸಮಾಲೋಚನೆ ಅಗತ್ಯವಿರುತ್ತದೆ. ಆಂಟಿ ಆಕ್ಸಿಡೆಂಟ್ ಜಾಸ್ತಿ ಇರುವ ಆಹಾರ ಸೇವಿಸುವುದರ ಅಗತ್ಯ ಇರುತ್ತದೆ. ಇಂತಹಾ ಆಹಾರ ಸೇವಿಸುವುದರಿಂದ ಹಾಳಾದ ಜೀವಕೋಶವನ್ನು ದುರಸ್ತಿ ಮತ್ತು ಪುನರ್ ಸೃಷ್ಟಿಗೆ ಪೂರಕವಾದ ವಾತಾವರಣ ಕಲ್ಪಿಸಲಾಗುತ್ತದೆ. ರೋಗಿಗೆ ಒತ್ತಡ ಮತ್ತು ಇನ್ನಾವುದೇ ಮಾನಸಿಕ ಸಮಸ್ಯೆ ಇದ್ದಲ್ಲಿ ಅದನ್ನು ನಿಯಂತ್ರಿಸಲು ಔಷಧಿ ನೀಡಲಾಗುತ್ತದೆ. ಒಟ್ಟಿನಲ್ಲಿ ಸೊಂಕು ಅಲ್ಲದ, ಕ್ಯಾನ್ಸರ್ ಅಲ್ಲದ, ನೋವು ಇರದ ಈ ಕ್ಯಾನ್ಸ್‍ರ್ ಪೂರ್ವ ಸ್ಥಿತಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವುದಿಲ್ಲ. ಅತಿಯಾದ ಕೆರಳುವ ರೋಗ ನಿರೋಧಕತೆ ಇರುವ ವ್ಯಕ್ತಿಗಳಲ್ಲಿ ರೋಗ ಪ್ರತಿರೋಧಕ ಶಕ್ತಿ ನಿಯಂತ್ರಿಸುವ ಮತ್ತು ಹತ್ತಿಕ್ಕುವ ಸಲುವಾಗಿ ಔಷಧಿ ಬಳಸಲಾಗುತ್ತದೆ. ವೈದ್ಯರ ಸಲಹೆ ಇಲ್ಲದೆ ಯಾವುದೇ ಔಷಧಿ ತೆಗೆದುಕೊಳ್ಳಬಾರದು.
ಕೊನೆ ಮಾತು :-
ಯಾವುದೇ ನಿರ್ದಿಷ್ಟ ಕಾರಣ ಇಲ್ಲದೆ ಬರುವ ರೋಗ ಇದಾದ ಕಾರಣ, ರೋಗ ತಡೆಗಟ್ಟಲು ಸಾಧ್ಯವಿರುವುದಿಲ್ಲ. ಅದರೆ ಒತ್ತಡ ರಹಿತ ಜೀವನ ಶೈಲಿ ಮತ್ತು ಆರೋಗ್ಯ ಪೂರ್ಣ ಪದ್ಧತಿ ಅಳವಡಿಸಿಕೊಂಡು ಬಾಯಿಯ ಆರೋಗ್ಯವನ್ನು ಕಾಪಾಡಿಕೊಂಡಲ್ಲಿ ಈ ರೀತಿಯ ರೋಗವನ್ನು ದೂರವಿಡಲು ಸಾಧ್ಯವಿದೆ. ನಿರಂತರವಾಗಿ ದಂತ ವೈದ್ಯರ ಭೇಟಿ ಸಲಹೆ ಮಾರ್ಗದರ್ಶನ ಮತ್ತು ಸಂದರ್ಶನದಿಂದ ಹೆಚ್ಚಿನ ಎಲ್ಲಾ ರೋಗಗಳನ್ನು ಆರಂಭಿಕ ಹಂತದಲ್ಲಿ ಗುರುತಿಸಿದಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡಲು ವೈದ್ಯರಿಗೆ ಸಾಧ್ಯವಾಗಬಹುದು.
ಡಾ| ಮುರಲೀ ಮೋಹನ್ ಚೂಂತಾರು










