ಸ್ಥಳಕ್ಕೆ ಬಂದ ಜನಪ್ರತಿನಿಧಿಗಳಿಂದ ಇಂಜಿನಿಯರ್ ಗಳಿಗೆ ತರಾಟೆ
ನಿನ್ನೆ ಕಾಂಕ್ರೀಟ್ ರಸ್ತೆ ಕತ್ತರಿಸಿ ಹೊರ ಬಂದ ಕಬ್ಬಿಣ ತಾಗಿ ಬಿದ್ದ ವಿದ್ಯಾರ್ಥಿನಿ : ಆ ಕಬ್ಬಿಣ ಇನ್ನೂ ಹಾಗೇ ಇದೆ

ಸುಳ್ಯ ನಗರದಲ್ಲಿ ಕುಡಿಯುವ ನೀರಿನ ಕಾಮಗಾರಿ ನಡೆಯುತ್ತಿದ್ದು ಜನರಿಗೆ ದಿನಕ್ಕೊಂದು ಸಮಸ್ಯೆ ಎದುರಾಗುತ್ತಿದೆ. ಎ.15ರಂದು ಸಂಜೆ ಸುಳ್ಯ ಎ.ಪಿ.ಎಂ.ಸಿ. ಬಳಿ ರಸ್ತೆ ಕತ್ತರಿಸಿದಲ್ಲಿಂದ ಹೊರ ಬಂದಿರುವ ಕಬ್ಬಿಣ ತಾಗಿ ವಿದ್ಯಾರ್ಥಿನಿಯೊಬ್ಬರು ರಸ್ತೆಗೆ ಬಿದ್ದರೆ, ಎ.16ರಂದು ಸಂಜೆ ಸುಳ್ಯ ಸದರ್ನ್ ರೆಸಿಡೆನ್ಸಿ ಬಳಿಯ ರಸ್ತೆಯಲ್ಲಿ ಕಾರೊಂದು ಚರಂಡಿಗಿಳಿದ ಘಟನೆ ನಡೆಯಿತು.
ಸುಳ್ಯ ಸದರ್ನ್ ರೆಸಿಡೆನ್ಸಿ ಎದುರಿನ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ನಡೆಯುತಿದ್ದು, ಅಲ್ಲಿ ಕಾಮಗಾರಿ ನಡೆಯುತ್ತಿರುವ ಬಗ್ಗೆ ಯಾವುದೇ ಸೂಚನಾ ಫಲಕ ಅಳವಡಿಸಿಲ್ಲ. ಆ ರಸ್ತೆಯಲ್ಲಿ ವಾಹನಗಳು ಕೂಡಾ ಹೆಚ್ಚಾಗಿ ಓಡಾಟ ನಡೆಸುತ್ತಿರುತ್ತವೆ. ಎ.16ರಂದು ಸಂಜೆ ಸುಮಾರು 4.30ರ ವೇಳೆಗೆ ಕಾರೊಂದು ಈ ರಸ್ತೆಯಲ್ಲಿ ಬಂತು. ಒಂದು ಕಡೆಯಲ್ಲಿ ಪೈಪ್ ಕಾಮಗಾರಿ ಗೆ ತೆಗೆದ ಮಣ್ಣು ರಸ್ತೆಯ ಮೇಲೆ ಹಾಕಿದ್ದರು. ಎದುರಿನಿಂದ ಬರುವ ವಾಹನಕ್ಕೆ ಸೈಡ್ ಕೊಡುವ ಭರದಲ್ಲಿ ಕಾರು ಚರಂಡಿಗೆ ವಾಲಿತು. ಅದೇ ವೇಳೆಗೆ ಆ ರಸ್ತೆಯಾಗಿ ಬಂದ ನ.ಪಂ. ಸದಸ್ಯ ಸುಧಾಕರ ಕುರುಂಜಿಭಾಗ್ ಹಾಗೂ ಇತರರು ಸೇರಿ ಕಾರನ್ನು ಮೇಲಕ್ಕೆತ್ತಿದರು. ಕಾರಿನ ಅಡಿಭಾಗ ಜಖಂಗೊಂಡಿದೆ.
ಇದಾದ ಕೆಲವೇ ಸಮಯದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಯವರು ಆ ರಸ್ತೆಯಾಗಿ ಬಂದರು. ರಸ್ತೆ ಬ್ಲಾಕ್ ಆಗಿತ್ತು. ಚರಂಡಿಗೆ ಕಾರು ಬಿದ್ದು ಆಗಿರುವ ಸಮಸ್ಯೆ ಜನರಿಂದ ತಿಳಿದುಕೊಂಡ ಅವರು ಕೂಡಲೇ ಈ ಕಾಮಗಾರಿಯ ಎಇಇ ಅಜಯ್ ಆರ್.ವಿ. ಯವರಿಗೆ ಕರೆ ಮಾಡಿ, ಆದ ಸಮಸ್ಯೆಯನ್ನು ಹೇಳಿದರಲ್ಲದೆ, ಸೂಚನಾ ಫಲಕ ಅಳವಡಿಸದಿರುವ ಮತ್ತು ಸ್ಥಳದಲ್ಲಿ ಇಂಜಿನಿಯರ್ ಇಲ್ಲದಿರುವ ಕುರಿತು ಪ್ರಶ್ನಿಸಿ ಇಂಜಿನಿಯರ್ ರನ್ನು ತರಾಟೆಗೆತ್ತಿಕೊಂಡರು. ಕೆಲವೇ ಸಮಯದಲ್ಲಿ ಸ್ಥಳಕ್ಕೆ ಬಂದ ಇಂಜಿನಿಯರ್ ಒಬ್ಬರಿಗೂ ಸಮಸ್ಯೆ ಆಗದಂತೆ ಕಾಮಗಾರಿ ನಿರ್ವಹಿಸಬೇಕು. ಮತ್ತು ಕಾಮಗಾರಿ ನಡೆಯುವ ಕುರಿತು ಸೂಚನಾ ಫಲಕ ಅಳವಡಿಸುವಂತೆ ಸೂಚನೆ ನೀಡಿದರೆಂದು ತಿಳಿದುಬಂದಿದೆ.















ಹೀಗೆ ನಗರದಲ್ಲಿ ದಿನಕ್ಕೊಂದು ಘಟನೆಗಳು ನಡೆಯುತ್ತಿದೆ. ನಿನ್ನೆ ಎಪಿಎಂಸಿ ಬಳಿ ಕಾಂಕ್ರೀಟ್ ರಸ್ತೆ ಕತ್ತರಿಸಿ ಕಬ್ಬಿಣ ಹೊರ ಬಂದು ಅದು ವಿದ್ಯಾರ್ಥಿನಿ ತಾಗಿ ಆಕೆ ರಸ್ತೆಗೆ ಬಿದ್ದಿದ್ದರು. ಅಲ್ಲೆ ಪಕ್ಕದಲ್ಲಿ ಇನ್ನೊಂದು ಅಪಾಯದ ಗುಂಡಿ ಇದೆ.
ನಿನ್ನೆಯ ಘಟನೆ ನಡೆದು 24 ಗಂಟೆ ಕಳೆದರೂ ಕಾಮಗಾರಿಗೆ ಸಂಬಂಧಿಸಿದ ಇಂಜಿನಿಯರ್ ರಾಗಲೀ ಸಂಬಂಧಿಸಿದ ನ.ಪಂ. ಅಧಿಕಾರಿಗಳಾಗಲೀ ಆ ಗುಂಡಿ ಮುಚ್ಚಿಸುವ, ಕಬ್ಬಿಣ ಕತ್ತರಿಸುವ ಕೆಲಸ ಇನ್ನೂ ಮಾಡಿಲ್ಲ. ಸಂಬಂದವೇ ಇಲ್ಲದಂತೆ ಕುಳಿದ್ದಾರೆ.
ಇಂದು ಸಂಜೆ ಕಾರೊಂದು ರಸ್ತೆ ಬಿಟ್ಟು ಚರಂಡಿಗೆ ಬಿದ್ದಿದೆ.
ಕುರುಂಜಿಗುಡ್ಡೆ ರಸ್ತೆಯಲ್ಲಿ ನಿನ್ನೆ ಮಣ್ಣು ಹಾಕುವುದಾಗಿ ಒಪ್ಪಿಕೊಂಡಿರುವ ಇಂಜಿನಿಯರ್ ಗಳು ಅರ್ಧ ರಸ್ತೆಗೆ ಮಣ್ಣು ಹಾಕಿ ಕೈತೊಳೆದುಕೊಂಡಿದ್ದಾರೆ. ಸಮಸ್ಯೆ ಮಾತ್ರ ಆ ರಸ್ತೆಯಲ್ಲಿ ಹಾಗೆಯೇ ಇದೆ.
ಇದರ ನಡುವೆ ಎ.17ರಂದು ಕುಡಿಯುವ ನೀರಿನ ಕಾಮಗಾರಿ ಕುರಿತು ಚರ್ಚಿಸಲು ನ.ಪಂ. ನಲ್ಲಿ ಸಭೆ ಕರೆಯಲಾಗಿದೆ.
ಈ ಹಿಂದಿನ ಸಭೆಗಳಿಗೂ ಇಂಜಿನಿಯರ್ ಗಳು ಬಂದು ಭರವಸೆ ನೀಡಿ ಹೋದುದಲ್ಲದೆ, ರಸ್ತೆ ಅಗೆದ ಗುಂಡಿಗೆ ಸಿಮೆಂಟ್ ಹಾಕುವುದನ್ನು ಮರೆತಿದ್ದಾರೆ.










