ಕೊಡಗು ಜಿ.ಪಂ. ಸಿ.ಎ.ಒ. ಕಾರು ಆನೆಗುಂಡಿಯಲ್ಲಿ ಅಪಘಾತ

0

ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು

ವಿಟ್ಲದಿಂದ ಮಡಿಕೇರಿಗೆ ಹೋಗುತ್ತಿದ್ದ ಕೊಡಗು ಜಿ.ಪಂ. ಚೀಫ್ ಅಕೌಂಟ್ ಆಫೀಸರ್ ಜೀವಲ್ ಖಾನ್ ರವರ ಕಾರು ಕನಕಮಜಲು ಗ್ರಾಮದ ಆನೆಗುಂಡಿ ಚಡವಿನ ತುದಿಯಲ್ಲಿ ಬರೆಗೆ ಗುದ್ದಿ ರಸ್ತೆಯ ಇನ್ನೊಂದು ಬದಿಯ ಚರಂಡಿಗೆ ಬಿದ್ದ ಘಟನೆ ವರದಿಯಾಗಿದೆ.


ಜೀವಲ್ ಖಾನ್ ರವರು ಇಂದು ಬೆಳಿಗ್ಗೆ ವಿಟ್ಲದ ಮನೆಯಿಂದ ತನ್ನ ಕ್ರೆಟ್ಟಾ ಕಾರಿನಲ್ಲಿ ಪತ್ನಿ, ಮಕ್ಕಳ ಸಮೇತರಾಗಿ ಹೊರಟು ಮಡಿಕೇರಿ ಕಡೆಗೆ ಬರುತ್ತಿದ್ದರು.


ಬೆಳಿಗ್ಗೆ 8.30 ರ ಸುಮಾರಿಗೆ ಕಾರು ಆನೆಗುಂಡಿ ಚಡವಿನ ತುದಿಗೆ ಬರುತ್ತಿದ್ದಂತೆ ನಿದ್ದೆಯ ಮಂಪರು ಆವರಿಸಿದ ಕಾರಣ ಕಾರು ನಿಯಂತ್ರಣ ಕಳೆದುಕೊಂಡು ಎಡಗಡೆಯ ಬರೆಗೆ ಗುದ್ದಿತಲ್ಲದೆ, ಬಲಗಡೆಗೆ ಎಳೆಯಲ್ಪಟ್ಟು ಸ್ವಲ್ಪ ದೂರಕ್ಕೆ ಚಲಿಸಿ ಬಲಗಡೆಯ ಚರಂಡಿಗೆ ಇಳಿದು ನಿಂತಿತು. ಈ ಅಪಘಾತದಲ್ಲಿ ಕಾರು ಜಖಂಗೊಂಡರೂ, ಕಾರಲ್ಲಿದ್ದವರೆಲ್ಲ ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಪಾರಾದರು.


ಜೀವಲ್ ಖಾನ್ ರವರು ಮುಂಬೈಗೆ ಹೋಗಿದ್ದವರು ಇಂದು ಮುಂಜಾನೆ ಹಿಂತಿರುಗಿ, ವಿಟ್ಲದ ಮನೆಗೆ ಬಂದಿದ್ದರೆನ್ನಲಾಗಿದೆ. ಸುಳ್ಯದಲ್ಲಿ ಇಂಜಿನಿಯರಿಂಗ್‌ ಓದುತ್ತಿದ್ದ ಮಗಳನ್ನು ಕಾಲೇಜಿಗೆ ಬಿಡಲೆಂದು, ವಿಶ್ರಾಂತಿ ತೆಗೆದುಕೊಳ್ಳದೆಯೇ ಸ್ವಲ್ಪ ಬೇಗನೆ ಮನೆಯಿಂದ ಹೊರಟು ಬಂದಿದ್ದರೆಂದು ತಿಳಿದುಬಂದಿದೆ.

ಇದೀಗ ಕಾರನ್ನು ಕ್ರೇನ್ ಮೂಲಕ ತೆಗೆದು ಶೋರೂಂ ಗೆ ಕಳುಹಿಸಲಾಗಿದೆ. ಜೀವಲ್ ಖಾನ್ ರವರು ಇಲಾಖಾ ವಾಹನದಲ್ಲಿ ಮಡಿಕೇರಿ ಜಿ.ಪಂ. ಕಚೇರಿಗೆ ತೆರಳಿದ್ದಾರೆ.