ಮೇ. 14-15: ಕೆ.ವಿ.ಜಿ. ಕಾನೂನು ಕಾಲೇಜಿನಲ್ಲಿ ರಾಜ್ಯ ಮಟ್ಟದ ಫುಟ್ಬಾಲ್ ಕ್ರೀಡಾಕೂಟ

0

ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳ ವಿಶ್ವವಿದ್ಯಾಲಯ ಮಟ್ಟದ ಫುಟ್ಬಾಲ್ ಪಂದ್ಯಾಟ ಮೇ. 13-14ರಂದು ಎನ್.ಎಂ.ಸಿ ಮೈದಾನದಲ್ಲಿ ನಡೆಯಲಿದೆ.


ಪಂದ್ಯಾಟ ನಡೆಯುವ ಬಗ್ಗೆ ಮೇ. 9 ರಂದು ಪತ್ರಿಕಾಗೋಷ್ಠಿ ನಡೆಯಿತು.
ಪಂದ್ಯಾವಳಿಯಲ್ಲಿ 15 ಕ್ಕಿಂತ ಹೆಚ್ಚು ವಿಶ್ವವಿದ್ಯಾಲಯ ಸಂಯೋಜಕ ತಂಡಗಳು ಭಾಗವಹಿಸಲಿದ್ದು, ತಂಡಗಳ ಸಂಖ್ಯೆ ಏರಿಕೆಯಾದರೆ ಕೊಡಿಯಾಲಬೈಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾಂಗಣದಲ್ಲಿ ಪಂದ್ಯಾಟ ನಡೆಯಲಿದೆ. ಎ.ಒ.ಎಲ್.ಇ. ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಡಿಯಾಲಬೈಲು ಇಲ್ಲಿನ ಪ್ರಾಂಶುಪಾಲರಾದ ಸತೀಶ್ ಕೊಯಿಂಗಾಜೆ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪಂದ್ಯಾಟ ಉದ್ಘಾಟಿಸಲಿದ್ದಾರೆ. ಎ.ಒ.ಎಲ್.ಇ ಉಪಾಧ್ಯಕ್ಷೆ ಶ್ರೀಮತಿ ಶೋಭಾ ಚಿದಾನಂದ, ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಇದರ ಶಾರೀರಿಕ ಶಿಕ್ಷಣ ನಿರ್ದೇಶಕರಾದ ಡಾ. ಖಾಲಿದ್ ಖಾನ್ ಮತ್ತು ಕೆ.ವಿ.ಜಿ. ಕಾನೂನು ಕಾಲೇಜಿನ ಆಡಳಿತಾಧಿಕಾರಿ ಪ್ರೊ. ಕೆ.ವಿ. ದಾಮೋದರ ಗೌಡ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.

ಪಂದ್ಯಾಟದಲ್ಲಿ ಭಾಗವಹಿಸಲು ಆಗಮಿಸುವ ಕ್ರೀಡಾಪಟುಗಳಿಗೆ ಮತ್ತು ತಂಡದ ಜೊತೆಯಲ್ಲಿ ಬರುವವರಿಗೆ ವಾಸ್ತವ್ಯ, ಊಟ, ಉಪಾಹಾರ ವ್ಯವಸ್ಥೆ ಮಾಡಲಾಗುವುದೆಂದು ಲಾ ಕಾಲೇಜ್ ಪ್ರಾಂಶುಪಾಲರಾದ ಡಾ.ಉದಯಕೃಷ್ಣ ಬಿ. ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಆಡಳಿತಾಧಿಕಾರಿ ಪ್ರೊ. ಕೆ.ವಿ. ದಾಮೋದರ ಗೌಡ, ಕ್ರೀಡಾ ಸಂಯೋಜಕಿ, ಉಪನ್ಯಾಸಕಿ ಶ್ರೀಮತಿ ರಶ್ಮಿ ಹೆಚ್., ಎನ್.ಎಂ.ಸಿ. ಶಾರೀರಿಕ ನಿರ್ದೇಶಕರಾದ ಲೆ. ಸೀತಾರಾಮ ಎಂ.ಡಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುಶ್ರಫ್ ಅಹಮ್ಮದ್, ಕ್ರೀಡಾ ಕಾರ್ಯದರ್ಶಿಗಳಾದ ಪೂರ್ಣೇಶ್ ಎಂ. ಮತ್ತು ವಿದ್ಯಾಶ್ರೀ ರೈ ಭಾಗವಹಿಸಿದ್ದರು.