ಸೈಬರ್ ವಂಚನೆ ಹಾಗೂ ಅಪ್ರಾಪ್ತ ಮಕ್ಕಳಿಗೆ ವಾಹನ ನೀಡುವ ಬಗ್ಗೆ ಪೋಷಕರು ಜಾಗೃತಿ ವಹಿಸಿ: ಎಸ್ಐ ಸಂತೋಷ್ ಬಿ.ಪಿ.
ಸುಳ್ಯ ಪೊಲೀಸ್ ಠಾಣಾ ವತಿಯಿಂದ ಜಯನಗರ ವಾರ್ಡಿನಲ್ಲಿ ಪೊಲೀಸ್ ಬೀಟ್ ಸಾರ್ವಜನಿಕ ಸಭೆ ಮೇ. 9ರಂದು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಸಂತೋಷ್ ಬಿ.ಪಿ. ರವರು ಮಾತನಾಡಿ ‘ಇತ್ತೀಚಿ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು ಸಾರ್ವಜನಿಕರು ಈ ಮೋಸದಿಂದ ಜಾಗರೂಕತೆಯಿಂದ ಇರಬೇಕೆಂದು ವಂಚನೆ ನಡೆಯುವ ಬಗ್ಗೆ ಮಾಹಿತಿಯನ್ನು ನೀಡಿದರು.

ಅಲ್ಲದೆ ಪೋಷಕರು ಅಪ್ರಾಪ್ತ ಮಕ್ಕಳಿಗೆ ವಾಹನವನ್ನು ನೀಡುವ ವೇಳೆ ಅದರಿಂದ ಉಂಟಾಗುವ ಸಮಸ್ಯೆ ಮತ್ತು ನಷ್ಟದ ಬಗ್ಗೆ ಮಾಹಿತಿ ಅರಿತುಕೊಳ್ಳಬೇಕು ಎಂದರು. ಯಾವುದೇ ಕಾರಣಕ್ಕೂ ವಾಹನವನ್ನು ಮಕ್ಕಳಿಗೆ ನೀಡಬಾರದು, ಅಲ್ಲದೆ ಹಿರಿಯರು ವಾಹನವನ್ನು ಚಲಾಯಿಸುವ ವೇಳೆ ಸಂಚಾರಿ ನಿಯಮವನ್ನು ಪಾಲಿಸಬೇಕೆಂದು ಕಾನೂನು ಅರಿವನ್ನು ನೀಡಿದರು. ವಾರ್ಡಿನಲ್ಲಿ ಯಾವುದಾದರೂ ಮಾದಕ ವಸ್ತುಗಳ ಬಳಕೆಯ ಕುರಿತ ಮಾಹಿತಿ ಇದ್ದಲ್ಲಿ ಕೂಡಲೆ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಕೇಳಿಕೊಂಡರು.








ಬಳಿಕ ಸಾರ್ವಜನಿಕರಿಗೆ ಸಭೆಯಲ್ಲಿ ಸಮಸ್ಯೆಯನ್ನು ಹೇಳಿಕೊಳ್ಳಲು ಅವಕಾಶವನ್ನು ನೀಡಲಾಯಿತ್ತು. ಈ ಸಂದರ್ಭದಲ್ಲಿ ವಾರ್ಡಿನ ಜನತೆ ಪೊಲೀಸರೊಂದಿಗೆ ಕಾನೂನು ವಿವರದ ಬಗ್ಗೆ ಮುಕ್ತವಾಗಿ ಚರ್ಚೆಗಳನ್ನು ನಡೆಸಿದರು.
ವೇದಿಕೆಯಲ್ಲಿ ಸ್ಥಳೀಯ ವಾರ್ಡ್ ಸದಸ್ಯೆ ಶ್ರೀಮತಿ ಶಿಲ್ಪಾಸುದೇವ್, ವಾರ್ಡ್ ಬೀಟ್ ಪೊಲೀಸ್ ಸಿಬ್ಬಂದಿಗಳಾದ ಸತೀಶ್ ನಾಯ್ಕ, ಪುರುಷೋತ್ತಮ ಉಪಸ್ಥಿತರಿದ್ದರು.ಸಭೆಯಲ್ಲಿ ವಾರ್ಡಿನ ಸುಮಾರು 60 ಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿದ್ದರು. ಸ್ಥಳೀಯ ನಿವಾಸಿ ರಂಜಿತ್ ಕುಮಾರ್ ಸ್ವಾಗತಿಸಿ, ಸುದ್ದಿ ಪತ್ರಿಕೆಯ ವರದಿಗಾರ ಹಸೈನಾರ್ ಜಯನಗರ ವಂದಿಸಿದರು.










