ಇನ್ನೆರಡು ರಿಂಗ್ ಅಳವಡಿಸಿ ಸ್ಲ್ಯಾಬ್ ಹಾಕಿ ಬೋರ್ ವೆಲ್ ಬಾವಿ ಮುಚ್ಚಿದ ಜಾಲ್ಸೂರು ಗ್ರಾ.ಪಂ.

0

ಸೋಣಂಗೇರಿ ಬಳಿಯ ಮುಖ್ಯರಸ್ತೆಯ ಡಾಮರಿಗೆ ತಾಗಿಕೊಂಡೇ ಹಿಂದೆ ಇದ್ದ ಬೋರ್ ವೆಲ್ ಬಾವಿ ಲಾರಿ ಹೋಗಿ ಬಾಯಿ ತೆರೆಯಲ್ಪಟ್ಟು ಬಲಿಗಾಗಿ ಕಾದಿದ್ದುದಕ್ಕೆ ಇನ್ನೆರಡು ರಿಂಗ್ ಅಳವಡಿಸಿ ಎತ್ತರ ಮಾಡಿ ಅದರ ಮೇಲೆ ಸಿಮೆಂಟ್ ಸ್ಲ್ಯಾಬ್ ಇರಿಸಿ ಬಾವಿ ಮುಚ್ಚುವ ಮೂಲಕ ಜಾಲ್ಸೂರು ಗ್ರಾಮ ಪಂಚಾಯತು ಉತ್ತಮ ಕಾರ್ಯ ಮಾಡಿದೆ.


ಮೊನ್ನೆ ಸಂಜೆ ಲಾರಿಯೊಂದು ಬಂದು ನಿಂತ ಪರಿಣಾಮ ಹಿಂದೆ ಬೋರ್ ವೆಲ್ ಬಾವಿಗೆ ಮುಚ್ಚಲಾಗಿದ್ದ ಸಿಮೆಂಟ್ ಸ್ಲ್ಯಾಬ್ ಮುರಿದು ಲಾರಿಯ ಚಕ್ರ ಅದರಲ್ಲಿ ಸಿಲುಕಿತ್ತು. ಕ್ರೇನ್ ಮೂಲಕ ಟಯರನ್ನು ಮೇಲಕ್ಕೆತ್ತಿ ಲಾರಿಯನ್ನು ಕಳಿಸಲಾಗಿತ್ತು. ಆದರೆ ಹೆದ್ದಾರಿ ಬದಿ ಬಾವಿ ಹಾಗೇ ಬಾಯಿ ತೆರೆದುಕೊಂಡಿತ್ತು. ಸ್ಥಳೀಯರು ಅದರಲ್ಲಿ ಗಿಡದ ಗೆಲ್ಲು ಇರಿಸಿ ಬಾವಿಗೆ ಯಾರೂ ಬಂದು ಬೀಳದಂತೆ ಎಚ್ಚರಿಕೆಯ ಸೂಚನೆ ಅಳವಡಿಸಿದ್ದರು. ಆದರೆ ಆ ಕೊಳವೆ ಬಾವಿಯ ಸುತ್ತ ರಿಂಗ್ ಅಳವಡಿಸಿ ಮಾಡಲಾಗಿದ್ದ ಬಾವಿ ಗುಂಡಿ ಯಾವುದೇ ಕ್ಷಣದಲ್ಲಿ ವಾಹನಗಳಿಗೆ ಯಮಸ್ವರೂಪಿಯಾಗುವ ಸಂಭವವಿತ್ತು. ನಿನ್ನೆ ಮಧ್ಯಾಹ್ನ ಈ ಬಗ್ಗೆ ಸುದ್ದಿ ನ್ಯೂಸ್ ಯಲ್ಲಿ ಸುದ್ದಿ ಮಾಡಿ, ಇಲಾಖೆಯ ಗಮನ ಸೆಳೆಯಲಾಗಿತ್ತು. ಬಳಿಕ ಜಾಲ್ಸೂರು ಗ್ರಾ.ಪಂ. ಸಿಬ್ಬಂದಿ ಆತ್ಮಾರಾಮ್ ಹಾಗೂ ಲೋಕೋಪಯೋಗಿ ಇಲಾಖಾ ಎಇಇ ಗೋಪಾಲ್ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.


ಆ ಬೋರ್ ವೆಲ್ ನಲ್ಲಿ ಈಗಲೂ ಸಾಕಷ್ಟು ನೀರು ಇರುವುದರಿಂದ ಅದನ್ಬು ಮುಚ್ಚುವುದು ಬೇಡ. ಅದಕ್ಕೆ ಕೆಳಗಿಂದಲೇ ಪೈಪ್ ಅಳವಡಿಸಿ, ಪಂಪ್ ಫಿಕ್ಸ್ ಮಾಡಿ ಗ್ರಾಮಸ್ಥರಿಗೆ ಕುಡಿಯುವ ನೀರು ಒದಗಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಪಿ.ಡಬ್ಲ್ಯು.ಡಿ. ಎಇಇ ಯವರಲ್ಲಿ ಮತ್ತು ಸುದ್ದಿಯವರಲ್ಲಿ ಪಂಚಾಯತ್ ನವರು ಹೇಳಿದರಲ್ಲದೆ, ಆ ಬಾವಿಗೆ ಅಳವಡಿಸಲಾಗಿದ್ದ ರಿಂಗ್ ಗಳ ಮೇಲೆ ಇನ್ನೆರಡು ರಿಂಗ್ ಅಳವಡಿಸಿ, ಅದರ ಮೇಲೆ ಸಿಮೆಂಟ್ ಸ್ಲ್ಯಾಬ್ ಇರಿಸಿ ಮುಚ್ಚಿ , ಪಂಪ್ ಅಳವಡಿಸುವ ವರೆಗೆ ಅಪಾಯ ಸಂಭವಿಸದಂತೆ ವ್ಯವಸ್ಥೆ ಮಾಡಿದ್ದಾರೆ.