ಕಾಡುಪಂಜ : ತೊಡಿಕಾನ ಸಂಪರ್ಕದ 4 ಕೋಟಿ ವೆಚ್ಚದ ಕಿಂಡಿ ಆಣೆಕಟ್ಟಿನ ಕಾಮಗಾರಿ ಅಪೂರ್ಣ

0

ಸೇತುವೆಯನ್ನು ಸಂಪರ್ಕಿಸುವ ರಸ್ತೆಯನ್ನಾದರೂ ಸರಿ ಪಡಿಸಿ ಕೊಡುವಂತೆ ಸ್ಥಳೀಯರ ಆಗ್ರಹ

ಕಲ್ಲುಗುಂಡಿಯಿಂದ ಕೂಲಿಶೆಡ್ ಮೂಲಕ ತೊಡಿಕಾನ ಸಂಪರ್ಕಿಸುವ ಕಾಡುಪಂಜ ರಸ್ತೆಯ ಪರಿಸರದ ಏರಕಡಪು (ಬಬ್ರಿ ಯಡ್ಕ) ಕಿರು ಅಣೆಕಟ್ಟು ನಾಲ್ಕು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು ಅದು ಸರಿಯಾದ ಸ್ಥಿತಿಯಲ್ಲಿ ಇಲ್ಲ ಎಂದು ಸ್ಥಳೀಯ ಊರಿನ ಸಾರ್ವಜನಿಕರು ಆಕ್ರೋಶಪಡಿಸುತ್ತಿದ್ದಾರೆ.

ಕಾಡುಪಂಜ ನಿವಾಸಿಗಳ ಸುಮಾರು 50 ವರ್ಷದ ಹೋರಾಟದ ಫಲವಾಗಿ ಈ ಒಂದು ಕಿರು ಅಣೆಕಟ್ಟನ್ನು ನಿರ್ಮಿಸಲಾಗಿದೆ.
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಉಪ ವಿಭಾಗ ಮಂಗಳೂರು ಇವರು 2022 ಕ್ಕೆ ಕಾಮಗಾರಿ ಆರಂಭಿಸಿ 2024 ಕ್ಕೆ ಕಾಮಗಾರಿಯನ್ನು ಪೂರ್ಣ ಮಾಡಿದೆ. ಆದರೆ ವಾಸ್ತವ ವಾಗಿ ನೋಡಿದರೆ ಇನ್ನೂ ಕೂಡ ಆ ಸೆತುವೆಯ ಪೂರ್ಣ ಕಾಮಗಾರಿ ನಡೆಯದೆ ಇರುವುದು ಕಂಡು ಬರುತ್ತಿದೆ.

ಮುಖ್ಯವಾಗಿ ಸೇತುವೆಯ ಮೇಲೆ ವಾಹನಗಳನ್ನು ಕೊಂಡೊಯ್ಯಲು ಸವಾರರರು ಹರ ಸಾಹಸ ಪಡುವ ಸ್ಥಿತಿ ಉಂಟಾಗಿದೆ.
ಕಾರಣ ಈ ಭಾಗದ ರಸ್ತೆಗಳು ಅತಿ ಕಿರಿದಾಗಿ ಇದ್ದು ಸೇತುವೆಯ ಬಳಿ ಬರುತ್ತಿದ್ದಂತೆ ಸೇತುವೆಯನ್ನು ಹತ್ತಲು ವಾಹನಗಳು ಯೂ ಟರ್ನ್ ಪಡೆಯುವ ಮೂಲಕ ಸೇತುವೆಯನ್ನು ಪ್ರವೇಶಿಸುವ ಪರಿಸ್ಥಿತಿ ಉಂಟಾಗಿದೆ.

ಇದರಿಂದ ನಾಲ್ಕು ಚಕ್ರಗಳ ಕಿರುವಾಹನಗಳಿಗೂ ಇಲ್ಲಿ ಸಂಪರ್ಕಿಸಲು ತುಂಬಾ ಸಮಸ್ಯೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ಥಳೀಯರ ಪ್ರಕಾರ ಈ ಒಂದು ಸೇತುವೆ ನಿರ್ಮಾಣ ಕಾಡುಪಂಜ ನಿವಾಸಿಗಳ 50 ವರ್ಷಗಳ ಹೋರಾಟದ ಫಲವಾಗಿ ಈ ಸೇತುವೆ ನಿರ್ಮಾಣಗೊಂಡಿದೆ ಎಂದು ಹೇಳುತ್ತಿದ್ದಾರೆ. ಅಲ್ಲದೆ ಈ ಸೇತುವೆ ನಿರ್ಮಿಸಿರುವುದು ಪಯಶ್ವಿನಿ ನದಿಗೆ ಆಗಿದ್ದು ಮಳೆಗಾಲದಲ್ಲಿ ಈ ನದಿಯು ಪೂರ್ತಿಯಾಗಿ ತುಂಬಿ ಹರಿದು ಬರುತ್ತದೆ. ಅಲ್ಲದೆ ಆಣೆಕಟ್ಟಿನ ಬದಿಗಳಲ್ಲಿ ಯಾವುದೇ ತಡೆಗೋಡೆಗಳನ್ನು ನಿರ್ಮಿಸದೆ ಅದೇ ರೀತಿ ಬಿಟ್ಟು ಹೋಗಿರುತ್ತಾರೆ. ರಾತ್ರಿ ಸಂದರ್ಭದಲ್ಲಿ ವಾಹನ ಸವಾರರು ಈ ಸೇತುವೆಯ ಬಳಿ ಬಂದಲ್ಲಿ ಅಪಾಯವು ಖಚಿತವಾಗಿರುತ್ತದೆ. ಮಳೆಗಾಲದಲ್ಲಿ ಈ ರಸ್ತೆ ಮೂಲಕ ಬಂದು ಸೇತುವೆಯನ್ನು ಸಂಪರ್ಕಿಸಲು ಸಾಧ್ಯವಾಗದ ಪರಿಸ್ಥಿತಿಯೂ ಕೂಡ ನಿರ್ಮಾಣವಾಗಿದೆ.

ಅನೇಕ ವರ್ಷದ ಮೊದಲು ಸಿ ಆರ್ ಸಿ ಎಲಿ ಕಡಪು ಕಾಲೋನಿ, ಬಳಿಯಿಂದಾಗಿ ಕಾಡುಪಂಜಕ್ಕೆ ತೂಗು ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು.ಬಳಿಕ ಹಲವಾರು ವರ್ಷಗಳ ನಂತರ ಈ ಸೇತುವೆ ಶಿಥಿಲ ಗೊಂಡು ಪ್ರಯೋಜನಕ್ಕೆ ಬಾರದೆ ಇದ್ದಾಗ ಅಂದಿನ ಶಾಸಕರಾದ ಅಂಗಾರರವರ ನೇತೃತ್ವದಲ್ಲಿ ಕಿರು ಆಣೆಕಟ್ಟು ನಿರ್ಮಾಣಕ್ಕೆ ಅನುದಾನವನ್ನು ತರಿಸಲಾಗಿತ್ತು.

ಈ ಮಾರ್ಗವು ಅರಂತೋಡು,ಪೆರಾಜೆ, ಚೆಂಬು, ತೊಡಿಕಾನ ದೇವಸ್ಥಾನ ಮುಂತಾದ ಜಾಗಗಳಿಗೆ ಸಂಪರ್ಕಿಸುವ ರಸ್ತೆಯಾಗಿದ್ದು ರಸ್ತೆ ಬಹಳ ಪ್ರಯೋಜನಕಾರಿಯಾಗಿರುತ್ತದೆ.

ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ಅಥವಾ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಕೂಡಲೇ ಸೇತುವೆಯ ಅಪೂರ್ಣ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ವ್ಯವಸ್ಥಿತವಾಗಿ ಓಡಾಡಲು ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯ ಊರಿನ ಜನರು ಒತ್ತಾಯಿಸುತ್ತಿದ್ದಾರೆ.

ಈ ಬಗ್ಗೆ ಸುದ್ದಿಯೊಂದಿಗೆ ಮಾತನಾಡಿರುವ ಸ್ಥಳೀಯ ಕಾಡುಪಂಜ ನಿವಾಸಿ ಸೀತಾರಾಮ ಎಂಬುವವರು ‘ಕಳೆದ 50 ವರ್ಷಗಳ ಹೋರಾಟದ ಬಳಿಕ ಶಾಸಕ ಅಂಗಾರರು ನಮಗೆ ಈ ಸೇತುವೆಯ ಅನುದಾನವನ್ನು ತಂದು ಕೊಟ್ಟರು. ಆದರೆ ಸರ್ಕಾರದ ಯೋಜನೆ ಸಾರ್ವಜನಿಕರಿಗೆ ಉಪಯೋಗಿಸುವ ರೀತಿಯಲ್ಲಿ ಆಗದೆ ಅಪೂರ್ಣ ಸ್ಥಿತಿಯಲ್ಲಿ ಬಂದು ನಿಂತಿದೆ.4 ಕೋಟಿ ರೂ ವೆಚ್ಚ ಮಾಡಿ ಈ ಸ್ಥಿತಿ ಯಲ್ಲಿ ಬಿಟ್ಟು ಹೋಗಿರುವುದು ಸರಿಯಲ್ಲ. ಆದ್ದರಿಂದ ಆದಷ್ಟು ಶೀಘ್ರದಲ್ಲಿ ವ್ಯವಸ್ಥೆಯನ್ನು ಸರಿಪಡಿಸಿ ಕೊಡುವಂತೆ ಕೇಳಿಕೊಂಡರು.
ಅದೇ ರೀತಿ ಬೋಳಿಯಪ್ಪ ಕಾಡುಪಂಜ ಇವರು ಸುದ್ದಿಯೊಂದಿಗೆ ಮಾತನಾಡಿ ಈ ರಸ್ತೆಯಲ್ಲಿ ರಾತ್ರಿ ಸಮಯದಲ್ಲಿ ಬರಲು ತುಂಬಾ ಕಷ್ಟವಾಗುತ್ತಿದೆ. ಕಾರಣ ಸೇತುವೆಯ ಎರಡು ಬದಿಗಳಲ್ಲಿಯೂ ಕೂಡ ಸರಿಯಾದ ತಡೆಗೋಡೆಗಳು ನಿರ್ಮಿಸದೆ ಇರುವುದರಿಂದ ಭಯ ಆಗುತ್ತೆ. ಅಲ್ಲದೆ ನದಿಗೆ ತಡೆಗೋಡೆ ನಿರ್ಮಿಸಿದ ಕಾರಣ ಮಳೆಗಾಲದಲ್ಲಿ ನದಿಯು ಮತ್ತೊಂದು ಕಡೆಯಿಂದ ಹರಿದು ಹೋಗಿ ಇರುವ ರಸ್ತೆಯನ್ನು ಕೂಡ ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ಆತಂಕ ಎದುರಾಗಿದೆ ಎಂದು ತಿಳಿಸಿದರು.

ಒಟ್ಟಿನಲ್ಲಿ ಸಾರ್ವಜನಿಕರಿಗೆ ಪ್ರಯೋಜನಕ್ಕಾಗಿ ನಿರ್ಮಿಸುವ ಈ ರೀತಿಯ ಕಾಮಗಾರಿಗಳು ಕೋಟಿಗಟ್ಟಲೆ ಹಣವನ್ನು ಖರ್ಚುವಹಿಸಿ ಸಾರ್ವಜನಿಕರ ಪ್ರಯೋಜನಕ್ಕೆ ಮಾಡುವ ಯೋಜನೆಗಳು ಈ ರೀತಿ ಮಾಡಿರುವುದು ಸರಿಯಲ್ಲ
ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಎಚ್ಚೆತ್ತು ಈ ಸಮಸ್ಯೆಗಳನ್ನು ನಿವಾರಿಸಿ ಸ್ಥಳೀಯ ನಿವಾಸಿಗಳ ಕಷ್ಟಕ್ಕೆ ಸ್ಪಂದಿಸಬೇಕಾಗಿದೆ ಎಂಬುವುದೇ ಸುದ್ದಿಯ ಆಶಯ ವಾಗಿದೆ.
ಹಸೈನಾರ್ ಜಯನಗರ