ಸರ್ವ ಕ್ರೈಸ್ತ ಸಮುದಾಯ ಸಂಘದಿಂದ ನಿವೃತ್ತ ಶಿಕ್ಷಕಿಗೆ ಹಾಗೂ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದ ಕ್ರೈಸ್ತ ಸಮುದಾಯದ ವಿದ್ಯಾರ್ಥಿಗಳಿಗೆ ಸಂಪಾಜೆಯಲ್ಲಿ ಸನ್ಮಾನ ಕಾರ್ಯಕ್ರಮ

0

ಮೇ 25 ರಂದು ಸಂಪಾಜೆಯ ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ಮತ್ತು ಸಂಪಾಜೆ ವಲಯಕ್ಕೊಳಪಡುವ ಸರ್ವ ಕ್ರೈಸ್ತ ಸಮುದಾಯದ ವಿದ್ಯಾರ್ಥಿಗಳಾಗಿದ್ದು ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮತ್ತು ನಿವೃತ್ತ ಶಿಕ್ಷಕಿಗೆ ಸನ್ಮಾನಿಸುವ ಕಾರ್ಯಕ್ರಮ ಏರ್ಪಡಿಸಲಾಯಿತು .
ಈ ಕಾರ್ಯಕ್ರಮದಲ್ಲಿ ಉದ್ಘಾಟನಾ ಭಾಷಣವನ್ನು ಮಾಡಿದ ಸಂತ ಪ್ರಾನ್ಸಿಸ್ ಕ್ಸೇವಿಯರ್ ಚರ್ಚಿನ ಧರ್ಮ ಗುರುಗಳಾದ ರೆ.ವ ಫಾದರ್ ಪೌಲ್ ಕ್ರಾಸ್ತ ರವರು ಆಶೀರ್ವಚನ ನೀಡಿ ಶಿಕ್ಷಣದ ಮಹತ್ವ ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳ ಬಗ್ಗೆ ಮಾತನಾಡಿದರು.

ಮುಖ್ಯ ಭಾಷಣವನ್ನು ಮಾಡಿದ ಕರ್ನಾಟಕ ಸರಕಾರದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ರಾಜ್ಯ ಸಮಿತಿ ಸದಸ್ಯರಾದ ಜಾನಿ.ಕೆ.ಪಿ ಪಂಡಿತ್ ಜವಹರ್ ಲಾಲ್ ನೆಹರುರವರ ಆಶಯದಂತೆ ಮಕ್ಕಳು ಭವಿಷ್ಯವನ್ನು ಕಾಣುವ ಕಣ್ಣುಗಳುಳ್ಳವರಾಗಿ ಬೆಳೆಯಬೇಕು. ಅದಕ್ಕಾಗಿ ಯಾರೂ ಜ್ಯೋತಿಷಿಗಳಾಗಬೇಕಿಲ್ಲ ನಮ್ಮ ಹಿರಿಯರು ತಮ್ಮ ಮಕ್ಕಳ ಭವಿಷ್ಯವನ್ನು ಕಾಣಬಲ್ಲ ಕಣ್ಣುಳ್ಳವರಾದುದರಿಂದ ಇಂದು ನಾವು ಈ ಸುಸಜ್ಜಿತ ಸಮಾಜದಲ್ಲಿ ಈ ರೀತಿಯಾಗಿ ಶಿಕ್ಷಣ ಪಡೆದು ಸ್ವಾವಲಂಬಿಗಳಾಗಿ ಬದುಕುವಂತಾಯಿತು.

ನಮಗಾಗಿ ಮಾತ್ರ ನಾವು ಬದುಕುವುದು ಸ್ವಾರ್ಥ, ಮುಂದಿನ ತಲೆಮಾರುಗಳ ಹಿತಕ್ಕಾಗಿಯೂ ಬದುಕಬೇಕು. ವಿಶೇಷವಾಗಿ ನಾವು ರಾಜಕೀಯವನ್ನು ಕಾಣುವ ದೃಷ್ಟಿಯನ್ನು ನಾವು ಬದಲಿಸಿಕೊಳ್ಳಬೇಕು ಪ್ರಜಾಪ್ರಭುತ್ವದಲ್ಲಿ ರಾಜಕೀಯ ಅತೀ ಪ್ರಮುಖ ಭಾಗ ನನಗೂ ಅದಕ್ಕೂ ಸಂಬಂಧವಿಲ್ಲ ಎನ್ನುವ ದೃಷ್ಟಿಯಿಂದ ಹೊರಬರಬೇಕಿದೆ. ಯಾವ ವ್ಯಕ್ತಿ ಮತದಾನದ ಭಾಗವಾಗುತ್ತಾನೋ ಆ ವ್ಯಕ್ತಿ ರಾಜಕೀಯದ ಭಾಗವಾಗುತ್ತಾನೆ ಹಾಗಿರುವಾಗ ಮೌಲ್ಯಯುತ ರಾಜಕೀಯವನ್ನು ನಾವು ಗಂಭೀರವಾಗಿ ಪರಿಗಣಿಸಲೇಬೇಕು. ಕ್ರೈಸ್ತರು ಕೀಳರಿಮೆಯಿಂದ ಹೊರಬರಬೇಕು ಯಾಕೆಂದರೆ ಈ ದೇಶ ಕಟ್ಟುವಲ್ಲಿ ಕ್ರೈಸ್ತರ ಪಾಲು ಮಹತ್ತರವಾದುದಾಗಿದೆ ಎಂದರು .

ಸುಳ್ಯದ ಬೆಥಸ್ತಾ ಎ.ಜಿ. ಚರ್ಚ್ ನ ಪಾಸ್ಟರ್ ವಲ್ಸಲನ್ ಮಾತನಾಡಿ ಸನ್ಮಾನಿತರಾದ ಮಕ್ಕಳಿಗೆ ಶುಭಹಾರೈಸಿದರು. ಸನ್ಮಾನಿತರಾದ ವಿದ್ಯಾರ್ಥಿಗಳನ್ನು ಪ್ರತಿನಿಧಿಸಿ ಪಿಯುಸಿಯಿಂದ ಗುತ್ತಿಗಾರಿನ ವಿದ್ಯಾರ್ಥಿನಿ ಕುಮಾರಿ ಪ್ರಿಯಾ ಕೆ.ಥಾಮಸ್ ಮತ್ತು ಎಸ್.ಎಸ್.ಎಲ್.ಸಿ ಮಕ್ಕಳನ್ನು ಪ್ರತಿನಿಧಿಸಿ ಸಂಪಾಜೆಯ ಶ್ವೀನಿಕಾ ವಿಯೊಲ್ಲಾ ಕ್ರಾಸ್ತ ರವರು ಮಾತನಾಡಿದರು.


ಈ ಕಾರ್ಯಕ್ರಮದಲ್ಲಿ ಸಮುದಾಯದ ೩೩ ಮಕ್ಕಳನ್ನು ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕಿ ಸಿಸ್ಟರ್ ದುಲ್ಶಿನ್ ರನ್ನು ಸನ್ಮಾನಿಸಲಾಯಿತು. ಅನಾರೋಗ್ಯಕ್ಕೀಡಾದ ಸಂಪಾಜೆಯ ಶ್ರೀ ಬರ್ನಾಡ್ ಡಿಸೋಜರವರ ಚಿಕಿತ್ಸೆಗಾಗಿ ಸಂಗ್ರಹಗೊಂಡ ರೂ ೩೫ ಸಾವಿರವನ್ನು ವೇದಿಕೆಯಲ್ಲಿ ಹಸ್ತಾಂತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸಂತೋಷ್ ಕ್ರಾಸ್ತ ವಹಿಸಿದ್ದರು.

ವೇದಿಕೆಯಲ್ಲಿ ಸಂತ ಫ್ರಾನ್ಸಿಸ್ ಕ್ಷೇವಿಯರ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಲಿಗೋರಿ ಮೊಂತೇರೋ ,ಬಿಜು ಅಗಸ್ಟಿಯನ್ ಸುಳ್ಯ ,ಸಂಪಾಜೆ ಗ್ರಾ.ಪಂ. ಸದಸ್ಯೆ ಲೆಸ್ಸಿ ಮೊನಾಲಿಸಾ, ಸರ್ವ ಕ್ರೈಸ್ತ ಸಮುದಾಯ ಸಂಘದ ಕೋಶಾಧಿಕಾರಿಯಾದ ಕುರಿಯಾಕೋಸ್. ಟಿ.ಕೆ, ಇವರುಗಳು ವೇದಿಕೆಯಲ್ಲಿ ಉಪಸ್ತಿತರಿದ್ದರು.

ಪ್ರದಾನ ಕಾರ್ಯದರ್ಶಿ ಲೂಕಾಸ್ ಟಿ.ಐ ಪ್ರಸ್ತಾವಿಕ ಮಾತುಗಳನ್ನು ಆಡಿ ಸಂಘದ ಈವರೆಗಿನ ಸಾಧನೆಗಳನ್ನು ವಿವರಿಸಿದರು. ನಿರೂಪಣೆಯನ್ನು ಲೂಕಾಸ್ ಟಿ.ಐ ಮತ್ತು ಟೀಚರ್ ಮೋಳಿ ಕುಟ್ಟಿ ನಿರ್ವಹಿಸಿದರು. ಸುಜಿ ಕೊಯನಾಡು ಸ್ವಾಗತಿಸಿ ಫಿಲೋಮಿನಾ ಕ್ರಾಸ್ತ ವಂದಿಸಿದರು .