ಸ್ನೇಹ ಹೈಸ್ಕೂಲಿನ ಮಕ್ಕಳಿಗೆ ಐ.ಐ.ಎಸ್.ಸಿ. ಯಲ್ಲಿ ತರಬೇತಿ

0

ಭಾರತದ ವಿಜ್ಞಾನ ಕಾಶಿ ಎಂದೇ ಪ್ರಸಿದ್ಧವಾದ ಬೆಂಗಳೂರಿನ ಇಂಡಿಯನ್ ಇನ್ಸ್ಟಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯು ನಡೆಸಿದ “ರಸಾಯನ ಶಾಸ್ತ್ರದ ರಹಸ್ಯಗಳು” ಎಂಬ ಕಾರ್ಯಾಗಾರದಲ್ಲಿ ಸ್ನೇಹ ಪ್ರೌಢಶಾಲೆಯ ಹತ್ತನೇ ತರಗತಿಯ ಗಗನ್ ಮತ್ತು ಒಂಬತ್ತನೇ ಅಪ್ರಮೇಯ ಭಾಗವಹಿಸಿದ್ದಾರೆ. ಒಂದು ದಿನದ ಈ ಕಾರ್ಯಾಗಾರವನ್ನು ಮಕ್ಕಳಲ್ಲಿ ರಸಾಯನ ಶಾಸ್ತ್ರದ ಮಹತ್ವವನ್ನು ಪ್ರಚುರ ಪಡಿಸುವ ದೃಷ್ಟಿಯಿಂದ ನಡೆಸಲಾಗಿತ್ತು. 9 ನೇ ಯಿಂದ 12 ನೇ ತರಗತಿಯ ಮಕ್ಕಳಿಗೆ ಭಾಗವಹಿಸಲು ಅವಕಾಶವಿದ್ದ ಈ ಕಾರ್ಯಾಗಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಬೇರಾವ ಹೈಸ್ಕೂಲ್ ಕೂಡಾ ಭಾಗವಹಿಸಿರಲಿಲ್ಲ.

ಅತ್ಯುತ್ತಮವಾದ ಸೌಲಭ್ಯಗಳು, ತಜ್ಞ ಪ್ರಾಧ್ಯಾಪಕರು ಹಾಗೂ ಆತ್ಮೀಯ ಆತಿಥ್ಯದಲ್ಲಿ ತಮಗೆ ಅರ್ಥವಾಗುವಂತೆ ತರಬೇತಿ ನೀಡಿದ್ದಾರೆ ಎಂಬುದಾಗಿ ವಿದ್ಯಾರ್ಥಿಗಳು ಹೇಳಿದ್ದಾರೆ. ಅಲ್ಲದೆ ತಮಗೆ ಇಂತಹ ಅವಕಾಶವನ್ನು ಒದಗಿಸಿ ಕೊಟ್ಟ ಸ್ನೇಹ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಮಕ್ಕಳ ತಂಡವನ್ನು ಕರೆದೊಯ್ದ ಪೋಷಕರಾದ ಶ್ರೀಮತಿ ಉಷಾ ರಾಮ ಮೋಹನ್ ರವರು ಕೂಡಾ ಅಂತಹ ಪ್ರಸಿದ್ಧ ಸಂಸ್ಥೆಯೊಂದಿಗೆ ಸ್ನೇಹ ಶಾಲೆಗೆ ಸಂಪರ್ಕವಿರುವುದು ಇಲ್ಲಿ ಕಲಿಯುವ ಮಕ್ಕಳ ಭಾಗ್ಯವೆಂದಿದ್ದಾರೆ.