ಸುಳ್ಯ ರೋಟರಿ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ

0

ಸಮಾಜ ಸೇವೆಗೆ ಮತ್ತು ಸಮಾಜಕ್ಕೆ ಕೊಡುಗೆ ನೀಡಲು ರೋಟರಿ ಸಂಸ್ಥೆ ಉತ್ತಮ ಆಯ್ಕೆ: ಕೇಶವ ಎಚ್.ಆರ್

ಸಮಾಜದಲ್ಲಿ ಗುರುತಿಸಿಕೊಳ್ಳುವುದರ ಜೊತೆ ಜೊತೆಗೆ ಸಮಾಜ ಸೇವೆ ಮತ್ತು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬವರಿಗೆ ರೋಟರಿ ಸಂಸ್ಥೆಯು ಉತ್ತಮ ಆಯ್ಕೆಯಾಗಿದೆ ಎಂದು ರೋಟರಿ ಮಾಜಿ ಜಿಲ್ಲಾ ಗವರ್ನರ್ ಕೇಶವ ಎಚ್.ಆರ್ ಅಭಿಪ್ರಾಯಪಟ್ಟರು.

ಅವರು ಸುಳ್ಯ ರೋಟರಿ ಸಮುದಾಯ ಭವನದಲ್ಲಿ ನಡೆದ 2025- 26ನೇ ಸಾಲಿನ ಸುಳ್ಯ ರೋಟರಿ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ನಾವೆಲ್ಲರೂ ಒಗ್ಗಟ್ಟಾಗಿ ನಿಂತು ರೋಟರಿ ಸಂಸ್ಥೆಯ ಮೂಲಕ ಸಮಾಜದಲ್ಲಿ ಶಿಕ್ಷಣದ ಬಗ್ಗೆ, ನಿರಾಶ್ರಿತರ ಬಗ್ಗೆ, ಬಡ ರೋಗಿಗಳ ಬಗ್ಗೆ, ಹಿಂದುಳಿದ ಗ್ರಾಮಗಳ ಬಗ್ಗೆ ಮುಂತಾದ ವಿಷಯಗಳ ಕುರಿತು ಸಮಾಜ ಸೇವೆ ಮೂಲಕ ಕ್ರಾಂತಿಯನ್ನು ಮಾಡಬೇಕಾಗಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಸುಳ್ಯ ರೋಟರಿ ಕ್ಲಬ್ ನ 2025-26 ನೇ ಸಾಲಿನ ನೂತನ ಅಧ್ಯಕ್ಷರಾಗಿ ಡಾ.ರಾಮ್‌ಮೋಹನ್, ಕಾರ್ಯದರ್ಶಿಯಾಗಿ ಭಾಸ್ಕರನ್ ನಾಯರ್, ಖಜಾಂಜಿಯಾಗಿ ಬಿ.ಟಿ.ಮಾಧವ ಅವರ ನೇತೃತ್ವದ ತಂಡ ಅಧಿಕಾರ ವಹಿಸಿಕೊಂಡರು.

ಪುತ್ತೂರು ರೋಟರಿ ಕ್ಲಬ್‌ನ ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ. ಪದಗ್ರಹಣ ನೆರವೇರಿಸಿದರು. ಅತಿಥಿಗಳಾಗಿ ವಲಯ 5ರ ಅಸಿಸ್ಟೆಂಟ್ ಗವರ್ನರ್ ಪ್ರಮೋದ್ ಕುಮಾರ್, ವಲಯ 5ರ ರೋನಲ್‌ ಲೆಫ್ಟಿನೆಂಟ್ ಡಾ.ಪುರುಷೋತ್ತಮ ಕೆ.ಜಿ ಭಾಗವಹಿಸಿದ್ದರು. ಡಾ.ಪಲ್ಲವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ರೋಟರಿ ವತಿಯಿಂದ ಸುಳ್ಯ ಅಗ್ನಿಶಾಮಕ ಠಾಣೆಗೆ ಕಳೆ ಕೊಚ್ಚುವ ಯಂತ್ರ ಕೊಡುಗೆಯಾಗಿ ನೀಡಲಾಯಿತು. ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು, ಹಾಗೂ ಇನ್ನಿತರ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಈ ಸಂಧರ್ಭದಲ್ಲಿ ನೂತನ ಅಧ್ಯಕ್ಷರು ರೋಟರಿ ಸಂಸ್ಥೆಗೆ ಸಹಾಯ ಧನವಾಗಿ 8.50 ಲಕ್ಷ ರೂಪಾಯಿಯ ಚೆಕ್ ಅನ್ನು ಹಸ್ತಾಂತರಿಸಿದರು.ಸಭೆಯಲ್ಲಿ ರೋಟರಿ ಸುಳ್ಯ ಸಂಸ್ಥೆಗೆ ನೂತನವಾಗಿ ಆಯ್ಕೆಯಾದ 8 ಮಂದಿ ಸದಸ್ಯರುಗಳನ್ನು ಗೌರವಿಸಿ ಬರಮಾಡಿಕೊಳ್ಳಲಾಯಿತು. ರೋಟರಿ ಶಾಲೆಯಲ್ಲಿ ಶಾಲಾ ರಜೆ ಸಂಧರ್ಭ ವಿಶೇಷ ಸೇವೆಯನ್ನು ನೀಡಿದ ನಾಲ್ವರು ಸಿಬ್ಬಂದಿಗಳನ್ನು ಗುರುತಿಸಿ ಸ್ಮರಣಿಕೆಯನ್ನು ನೀಡಲಾಯಿತು.

ರೋಟರಿ ಕ್ಲಬ್‌ನ ನಿರ್ಗಮನ ಅಧ್ಯಕ್ಷೆ ಯೋಗಿತಾ ಗೋಪಿನಾಥ್ ಸ್ವಾಗತಿಸಿ, ನಿರ್ಗಮನ ಕಾರ್ಯದರ್ಶಿ ಡಾ.ಹರ್ಷಿತಾ ಪುರುಷೋತ್ತಮ ವರದಿ ವಾಚಿಸಿದರು. ಐಷಾನಿ ಕೆ.ಆರ್ ಪ್ರಾರ್ಥಿಸಿದರು. ನೂತನ ಕಾರ್ಯದರ್ಶಿ ಭಾಸ್ಕರನ್ ನಾಯ‌ರ್ ಎಂ.ಆ‌ರ್. ವಂದಿಸಿದರು. ವಕೀಲರಾದ ಸುಳ್ಯ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ದಳ ಸುಬ್ರಾಯ ಭಟ್ ಕಾರ್ಯಕ್ರಮ ನಿರೂಪಿಸಿದರು.