ಭತ್ತ ಬೇಸಾಯ-ಎಫ್.ಪಿ.ಒ. ಕಾರ್ಯ ಶ್ಲಾಘನೀಯ : ಭಾಗೀರಥಿ ಮುರುಳ್ಯ
19 ಗ್ರಾಮಗಳಲ್ಲಿಯೂ ಹಡಿಲು ಗದ್ದೆ ಉಳುಮೆ : ವೀರಪ್ಪ ಗೌಡ ಕಣ್ಕಲ್

ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಯಡಿ ರಚನೆಗೊಂಡ ರಾಜ್ಯ ರೈತ ಉತ್ಪಾದಕ ಕಂಪೆನಿ ಸುಳ್ಯ ಹಡಿಲು ಗದ್ದೆ ಬೇಸಾಯ ಕಾರ್ಯಕ್ರಮವನ್ನು ಕೃಷಿ ಇಲಾಖೆಯ ಸಹಕಾರದೊಂದಿಗೆ ಹಮ್ಮಿಕೊಂಡಿದ್ದು, ಜು.೧೭ರಂದು ಕಳಂಜ ಗ್ರಾಮದ ಮಣಿಮಜಲು ಎಂಬಲ್ಲಿ ಚಾಲನೆ ನೀಡಲಾಯಿತು.


೨ ಎಕ್ರೆ ಹಡಿಲು ಗದ್ದೆಯಲ್ಲಿ ಬೇಸಾಯ ಮಾಡಲಾಗಿದ್ದು, ಈ ಕಾರ್ಯಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಶಾಸಕರು, ಹಿಂದೆ ಬೇಸಾಯವನ್ನು ನಂಬಿಕೊಂಡಿದ್ದ ರೈತರು ಕಾರ್ಮಿಕರ ಕೊರತೆಯಿಂದ ವಾಣಿಜ್ಯ ಬೆಳೆಗಳತ್ತ ಹೋಗಬೇಕಾಯಿತು. ಅದರಿಂದಾಗಿ ಇಂದಿನ ಮಕ್ಕಳಿಗೆ ಗದ್ದೆ ಬೇಸಾಯದ ಅರಿವೇ ಇಲ್ಲ. ಅಕ್ಕಿ ಹೇಗೆ ಆಗುತ್ತದೆ ಎಂಬುದೇ ಗೊತ್ತಾಗುವುದಿಲ್ಲ. ಆದ್ದರಿಂದ ರೈತರು ಮತ್ತೆ ಭತ್ತ ಬೇಸಾಯ ಆರಂಭಿಸಬೇಕು. ಅದಕ್ಕೆ ಬೇಕಾದ ಪ್ರೋತ್ಸಾಹ, ಸಹಕಾರವನ್ನು ಕೃಷಿ ಇಲಾಖೆ ನೀಡುತ್ತದೆ. ರೈತ ಉತ್ಪಾದಕ ಕಂಪೆನಿಯವರು ಮಾಡುತ್ತಿರುವ ಈ ಕಾರ್ಯ ಶ್ಲಾಘನೀಯ'' ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿದ್ದ ಕಳಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಬೇರಿಕೆ, ಸುಳ್ಯ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎ.ಟಿ. ಕುಸುಮಾಧರ, ಕಳಂಜ - ಬಾಳಿಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಜಿತ್‌ರಾವ್, ಕೃಷಿ ಇಲಾಖೆ ಪುತ್ತೂರು ಉಪವಿಭಾಗದ ಉಪನಿರ್ದೇಶಕರಾದ ಹೆಚ್.ಶಿವಶಂಕರ್, ಸುಳ್ಯ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಗುರುಪ್ರಸಾದ್ ಎಂ.ಎಸ್. ಶುಭಹಾರೈಸಿದರು.
















ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸುಳ್ಯ ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ಮಾತನಾಡಿ, ಸಂಸ್ಥೆಯಿಂದ ಹಮ್ಮಿಕೊಂಡ ಕಾರ್ಯಕ್ರಮಗಳ ವಿವರ ನೀಡಿದರಲ್ಲದೆ,ಈ ವರ್ಷ ಪ್ರಾಯೋಗಿಕವಾಗಿ ಮತ್ತು ರೈತರನ್ನು ಪ್ರೇರೇಪಿಸುವ ದೃಷ್ಠಿಯಿಂದ ಹಡಿಲು ಗದ್ದೆಯನ್ನು ಬೇಸಾಯ ಮಾಡಲು ನಿರ್ಧರಿಸಲಾಗಿದೆ. ಮುಂದಿನ ವರ್ಷದಿಂದ ಸುಳ್ಯ ರೈತ ಉತ್ಪಾದಕ ಕಂಪೆನಿಯ ವ್ಯಾಪ್ತಿಗೊಳಪಟ್ಟ ೧೯ ಗ್ರಾಮ ಗಳಲ್ಲಿಯೂ ಹಡಿಲು ಬಿದ್ದ ಗದ್ದೆಯನ್ನು ಆ ಜಮೀನಿನವರು ಒಪ್ಪಿದರೆ ಸಂಸ್ಥೆಯಿಂದ ಉಳುಮೆ ಮಾಡಿ ನೇಜಿ ನಡುವ ಕಾರ್ಯ ಮಾಡುತ್ತೇವೆ. ನಂತರ ಅವರೇ ಅದನ್ನು ನೋಡಿಕೊಳ್ಳಬೇಕು” ಎಂದವರು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪುಷ್ಪಾವತಿ ಬಾಳಿಲ, ಶ್ರೀನಾಥ ಬಾಳಿಲ, ಸಂಸ್ಥೆಯ ನಿರ್ದೇಶಕರುಗಳಾದ ಜಯರಾಮ ಮುಂಡೋಳಿಮೂಲೆ ಅಜ್ಜಾವರ, ಮಧುರಾ ಜಗದೀಶ್ ಮಂಡೆಕೋಲು, ಭಾಸ್ಕರ ನಾಯರ್ ಅರಂಬೂರು, ಶ್ರೀಶಕುಮಾರ್ ಮಾಯಿಪಡ್ಕ, ಸತ್ಯಪ್ರಸಾದ ಪುಳಿಮಾರಡ್ಕ, ಎಂ.ಡಿ.ವಿಜಯಕುಮಾರ್ ಮಡಪ್ಪಾಡಿ, ಗೋವಿಂದ ಮರ್ಕಂಜ, ಸುರೇಶ್ ರೈ ಅಗಲ್ಪಾಡಿ, ರಾಮಕೃಷ್ಣ ಉಮ್ಮಿಕಳ, ಲೋಹಿತ್ ಕೊಡಿಯಾಲ, ಧರ್ಮಪಾಲ ಐವರ್ನಾಡು, ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಹರೀಶ್ ಕೆ., ಶಾಖಾ ವ್ಯವಸ್ಥಾಪಕ ಕೀರ್ತನ್ ಕುಮಾರ್, ಎಂಡೋಪಿಲ್ ಕಂಪೆನಿಯ ಯತೀನ್, ಕೃಷಿ ಇಲಾಖೆ ಸಿಬ್ಬಂದಿ ನಂದಿತಾ, ಸ್ಥಳೀಯರಾದ ಪ್ರಶಾಂತ್, ಜಲಾಲ್ ಮೊದಲಾದವರು ಭಾಗವಹಿಸಿದ್ದರು.
ಬೇಸಾಯ ಕೆಲಸದ ಉಸ್ತುವಾರಿ ವಹಿಸಿಕೊಂಡ ಸಂಸ್ಥೆಯ ನಿರ್ದೇಶಕರಾದ ಸುರೇಶ್ ರೈ ಮತ್ತು ರಾಮಕೃಷ್ಣ ಉಮ್ಮಿಕಳ ಇವರನ್ನು ಗೌರವಿಸಲಾಯಿತು.
ಮಧುರಾ ಜಗದೀಶ್ ಕಾರ್ಯಕ್ರಮ ನಿರ್ವಹಿಸಿದರು. ಸಿ.ಇ.ಒ. ಹರೀಶ್ ವಂದಿಸಿದರು.










