ಆಲೆಟ್ಟಿ ಪಂಚಾಯತ್ ಸಾಮಾನ್ಯ ಸಭೆ

0

ಸಾರ್ವಜನಿಕರು ಸರಕಾರಿ ಬಸ್ಸಿನ ಸದುಪಯೋಗ ಪಡೆದುಕೊಳ್ಳಬೇಕು- ಸದಸ್ಯರ ಒಮ್ಮತದ ಅಭಿಪ್ರಾಯ

ಆಲೆಟ್ಟಿ ಗ್ರಾಮ ಪಂಚಾಯತ್ ಇದರ ಸಾಮಾನ್ಯ ಸಭೆಯು ಜು.19 ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಪಂಚಾಯತ್ ಅಧ್ಯಕ್ಷೆ
ಶ್ರೀಮತಿ ವೀಣಾ ವಸಂತ ಆಲೆಟ್ಟಿ ಯವರು ಅಧ್ಯಕ್ಷತೆ ವಹಿಸಿದ್ದರು.

ಆಲೆಟ್ಟಿ ಬಡ್ಡಡ್ಕ ಕೂರ್ನಡ್ಕ ಭಾಗಕ್ಕೆ ಈಗಾಗಲೇ ಬಹು ವರ್ಷದ ಬೇಡಿಕೆಯಾಗಿದ್ದ ಸರಕಾರಿ ಬಸ್ಸು ಸಂಚಾರ ಆರಂಭಗೊಂಡಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು. ಸರಕಾರಿ ಬಸ್ಸು ಸಂಚರಿಸುವ ಸಮಯದಲ್ಲಿ ಖಾಸಗಿ ವಾಹನಗಳಲ್ಲಿ ಪ್ರಯಾಣಿಕರನ್ನು ಕೆರದುಕೊಂಡು ಹೋಗಿ ಬಾಡಿಗೆ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ಇದೇ ರೀತಿ ಮುಂದುವರಿದರೆ ಬಸ್ಸು ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದ್ದು ಗ್ರಾಮಸ್ಥರು ವಂಚಿತರಾಗಲಿದ್ದಾರೆ. ಮುಂದೆಯೂ ಖಾಸಗಿ ವಾಹನ ಮಾಲಕರು ಸಮಯ ಬದಲಿಸದಿದ್ದರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕೆಂದು ಸತ್ಯಕುಮಾರ್ ಆಡಿಂಜ ರವರು ಒತ್ತಾಯಿಸಿದರು.
ಗ್ರಾಮದ ಎಲ್ಲಾ ಕಡೆಗಳಲ್ಲಿ ಬೀದಿ ನಾಯಿಗಳ ಹಾವಳಿ ಇದ್ದು ರೇಬಿಸ್ ಲಸಿಕೆ ಕೊಡಿಸುವ ವ್ಯವಸ್ಥೆ ಪಂಚಾಯತ್ ವತಿಯಿಂದ ಹಮ್ಮಿಕೊಳ್ಳುವ ಬಗ್ಗೆ ಸದಸ್ಯರ ಬೇಡಿಕೆಯಂತೆ ಪಿ.ಡಿ.ಒ ಪತ್ರ ಬರೆಯುವುದಾಗಿ ತಿಳಿಸಿದರು.


ಮುಖ್ಯ ರಸ್ತೆಯಲ್ಲಿ ಮಳೆ ಬಂದ ಸಂದರ್ಭದಲ್ಲಿ ಚರಂಡಿ ಇಲ್ಲದೆ ನೀರೆಲ್ಲಾ ರಸ್ತೆಯೆಲ್ಲಿ ಹರಿದು ಹೊಂಡ ಗುಂಡಿ ನಿರ್ಮಾಣವಾಗಿದೆ. ಲೋಕೋಪಯೋಗಿ ಇಲಾಖೆಯವರು ತಕ್ಷಣ ಸಮರ್ಪಕವಾಗಿ ಚರಂಡಿ ವ್ಯವಸ್ಥೆ ನಿರ್ಮಿಸುವಂತೆ ಪತ್ರ ಬರೆಯಬೇಕೆಂದು ಸದಸ್ಯರು ಒತ್ತಾಯಿಸಿದರು. ನಾರ್ಕೋಡು ದ್ವಾರದ ಬಳಿಯಲ್ಲಿ ಇತ್ತೀಚೆಗೆ ಅಫಘಾತಗಳು ಸರಣಿಯಾಗಿ ಸಂಭವಿಸಿದ್ದು ಅವಘಡವಾಗುತ್ತಿದೆ.
ಈ ಜಾಗದಲ್ಲಿ ವಾಹನ ಸವಾರರಿಗೆ ಗೊಂದಲ ಏರ್ಪಡುವುದರಿಂದಾಗಿ ಅಫಘಾತ ಸಂಭವಿಸುತ್ತಿದೆ. ಇದಕ್ಕೆ ಪರಿಹಾರವಾಗಿ ಆಲೆಟ್ಟಿ ಕಡೆಯಿಂದ ಮುಖ್ಯ ರಸ್ತೆಗೆ ಪ್ರವೇಶಿಸುವಲ್ಲಿ ಸ್ಪೀಡ್ ಕಂಟ್ರೋಲ್ ಗಾಗಿ ಸಣ್ಣ ಗಾತ್ತದ ರಬ್ಬರ್ ಹಂಪ್ಸ್ ಗಳನ್ನು ಅಳವಡಿಸಿದರೆ ಒಳ್ಳೆಯದು ಎಂದು ಮುತ್ತಪ್ಪ ಪೂಜಾರಿ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಕಮಲ ನಾಗಪಟ್ಟಣ,ಸದಸ್ಯರಾದ ದಿನೇಶ್ ಕೆ,
ಶಂಕರಿ ಕೆ,ಕುಸುಮ ಬಿ,
ಧರ್ಮಪಾಲ ಕೆ,
ಚಂದ್ರಕಾಂತ ಎನ್,
ಮೀನಾಕ್ಷಿ ಕೆ, ಪುಷ್ಪಾವತಿ ಕೆ, ಶಿವಾನಂದ ಆರ್,
ಅನಿತಾ ಎ,ಸುದೇಶ್ ಎ,
ರತೀಶನ್ ಎ,ಭಾಗೀರಥಿ ಪಿ ಉಪಸ್ಥಿತರಿದ್ದರು.

ಸಭೆಯ ನಂತರ ಪಂಚಾಯತ್ ಆಶ್ರಯದಲ್ಲಿ ಜು.23 ರಿಂದ ಆ.6 ರ ತನಕ ನಡೆಯಲಿರುವ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರದ ಕುರಿತು ಪ್ರಭಾಕರ ಸಾಲ್ಯಾನ್ ಮಾಹಿತಿ ನೀಡಿದರು.

ಪಿ.ಡಿ.ಒ ಸೃಜನ್ ಸ್ವಾಗತಿಸಿ, ಸೀತಾರಾಮ ಮೊರಂಗಲ್ಲು ವಂದಿಸಿದರು.
ಸಿಬ್ಬಂದಿ ವರ್ಗದವರು ಸಹಕರಿಸಿದರು.