ಕಾಡುಕೋಣ ತಿವಿದು ಗಂಭೀರ ಗಾಯ

0

ಗಾಯಾಳು ಆಸ್ಪತ್ರೆಗೆ ದಾಖಲು

ತೋಟದಲ್ಲಿದ್ದ ವೇಳೆ ಕಾಡುಕೋಣ ಗುದ್ದಿ ರವಿಶಂಕರ ಭಟ್‌ರವರು ಗಂಭೀರ ಗಾಯಗೊಂಡ ಘಟನೆ ಜಾಲ್ಸೂರು ಗ್ರಾಮದ ನಂಗಾರು ಎಂಬಲ್ಲಿ ಸಂಭವಿಸಿದ್ದು, ಗಾಯಾಳುವನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಜಾಲ್ಸೂರಿನ ನಂಗಾರು ರವಿಶಂಕರ ಭಟ್‌ರವರು ತನ್ನ ಮನೆಯ ತೋಟದಲ್ಲಿರುವಾಗ ಘಟನೆ ಸಂಭವಿಸಿದ್ದು, ತೀವ್ರ ಗಾಯಗೊಂಡಿರುವ ಅವರನ್ನು ಸುಳ್ಯದ ಆಸ್ಪತ್ರೆಗೆ ಕರೆದೊಯ್ಯಲಾಯಿತು.


ರವಿಶಂಕರ್ ಭಟ್‌ರವರು ಕಳೆದ ೪ ತಿಂಗಳು ಅಮೇರಿಕಾದಲ್ಲಿ ತಮ್ಮ ಮಗನ ಮನೆಯಲ್ಲಿ ಇದ್ದು ಎರಡು ದಿನಗಳ ಹಿಂದೆಯೇ ಊರಿಗೆ ಬಂದಿದ್ದರು.
ಬಂದು ಎರಡು ದಿನದ ಬಳಿಕ ತೋಟದ ಕಡೆ ಹೋಗಿ ಬರುತ್ತೇನೆ ಎಂದು ಹೇಳಿ ಅವರು ಇಂದು ಬೆಳಿಗ್ಗೆ ತೋಟಕ್ಕೆ ಹೋಗಿದ್ದರು. ಹೋದ ಕೆಲವೇ ಸಮಯದಲ್ಲಿ ತೋಟದಿಂದ ಜೋರಾಗಿ ಕಿರುಚಾಟದ ಶಬ್ದ ಕೇಳಿ ಸ್ಥಳೀಯರಾದ ಪುರುಷೋತ್ತಮ ನಂಗಾರು ಮತ್ತು ಮೋಹನ್ ನಂಗಾರ್‌ರವರು, ಮನೆಯ ಕೆಲಸದವರು ಓಡಿ ಹೋಗಿ ನೋಡಿದಾಗ ಈ ಸಂದರ್ಭದಲ್ಲಿ ಇವರು ಅಡಿಕೆ ಗಿಡದ ಗುಂಡಿಯಲ್ಲಿ ಗಂಭೀರಾವಸ್ಥೆಯಲ್ಲಿ ಬಿದ್ದಿದ್ದು ಕೂಡಲೇ ಅವರನ್ನು ಅಲ್ಲಿಂದ ಎತ್ತಿ ಪಕ್ಕಕ್ಕೆ ಮಲಗಿಸಿದಾಗ ಅವರ ಬಲ ಭಾಗದ ತೋಳಿನ ಕೆಳಗೆ ಕಾಡು ಕೋಣ ತಿವಿದಿದ್ದು ಮುಖದ ಭಾಗವು ಕೂಡ ಗಂಭೀರ ಗಾಯವಾಗಿತ್ತು. ಬಳಿಕ ಆಂಬುಲೆನ್ಸ್‌ಗೆ ಕರೆ ಮಾಡಿದ್ದು ಕೆವಿಜಿ ಆಸ್ಪತ್ರೆಗೆ ಕರೆತಂದಿದ್ದಾರೆ.

ಅವರ ಮಗ ಮತ್ತು ಸೊಸೆ ಇಂದು ಬೆಳಿಗ್ಗೆ ಬೆಂಗಳೂರಿಗೆ ತೆರಳಿದ್ದು ಅವರು ಕುಶಾಲನಗರ ತಲುಪುವಷ್ಟರಲ್ಲಿ ಈ ಘಟನೆ ನಡೆದಿದೆ.
ಇದೀಗ ಮಾಹಿತಿ ತಿಳಿದ ಅವರು ಅಲ್ಲಿಂದ ಮರಳಿ ಬರುತ್ತಿದ್ದಾರೆ ಎಂದು ತಿಳಿದುಬಂದಿದೆ. ಗಾಯಳುವಿಗೆ ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲು ವೈದ್ಯರು ಸೂಚಿಸಿದ್ದಾರೆ.


ಆಸ್ಪತ್ರೆಗೆ ಅರಣ್ಯ ಅಧಿಕಾರಿ ಕಿರಣ್ ಭೇಟಿ ನೀಡಿದ್ದರು.
ಕಾಡು ಕೋಣದೊಂದಿಗೆ ಅದರ ಕರು ಕೂಡ ಇತ್ತು ಎಂದು ಹೇಳಲಾಗುತ್ತಿದೆ.