ಎಡಮಂಗಲ ಪಂಚಾಯತ್ ಅಧ್ಯಕ್ಷರಿಂದ ಹಲ್ಲೆ ಯತ್ನ , ಜೀವ ಬೆದರಿಕೆ – ಸಾಮಾಜಿಕ ಹೋರಾಟಗಾರ ವಿನಯಚಂದ್ರ ಪೋಲೀಸ್ ದೂರು

0

ಕಡಬ ತಾಲೂಕಿನ ಎಡಮಂಗಲ ಗ್ರಾಮದಲ್ಲಿ ರೈಲು ಸೇವೆಗಳ ಅಭಿವೃದ್ಧಿಗೆ ಆಗಾಗ್ಗೆ ಹೋರಾಟ ನಡೆಸಿದ ಸಮಾಜ ಸೇವಕ ಹಾಗೂ ಮಾಹಿತಿ ಹಕ್ಕು ಹೋರಾಟಗಾರ ಶ್ರೀ ವಿನಯಚಂದ್ರ ಎಡಮಂಗಲ ಅವರಿಗೆ ಸ್ಥಳೀಯ ಗ್ರಾ.ಪಂ. ಅಧ್ಯಕ್ಷ ರಾಮಣ್ಣ ಜಾಲ್ತಾರು ಹಲ್ಲೆ ಯತ್ನ ನಡೆಸಿ, ಜೀವ ಬೆದರಿಕೆ ಒಡ್ಡಿರುವರೆನ್ನಲಾದ ಘಟನೆ ವರದಿಯಾಗಿದ್ದು , ವಿನಯಚಂದ್ರರು ಪೋಲೀಸರಿಗೆ ದೂರು ನೀಡಿದ್ದಾರೆ. ಆದರೆ ರಾಮಣ್ಣ ಜಾಲ್ತಾರು ತಮ್ಮಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ.

ದಿನಾಂಕ 31.07.2025 ರಂದು ಮೈಸೂರು ರೈಲ್ವೆ ವಿಭಾಗದ DRM ಎಡಮಂಗಲ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದ ತನಗೆ ಮಾರ್ಗಮಧ್ಯೆ ಅಧ್ಯಕ್ಷ ರಾಮಣ್ಣ ಜಾಲ್ತಾರು ಅವರು ಹಲ್ಲೆಗೆ ಯತ್ನಿಸಿದರು ಹಾಗೂ ಜೀವ ಬೆದರಿಕೆ ಒಡ್ಡಿದರು ಎಂದು ವಿನಯಚಂದ್ರರು
ಪೋಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ನಾನು ಕಳೆದ ಹಲವಾರು ತಿಂಗಳಿಂದ ಎಡಮಂಗಲ ಪಂಚಾಯತ್ ಕಾರ್ಯಪದ್ಧತಿ ಕುರಿತು ಮಾಹಿತಿ ಹಕ್ಕಿನ ಅಡಿಯಲ್ಲಿ ಮಾಹಿತಿ ಸಂಗ್ರಹಿಸಿ, ಉದ್ಯೋಗ ಖಾತರಿ ಯೋಜನೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದೆ. ಈ ಹಿನ್ನಲೆಯಲ್ಲಿ ನನ್ನನ್ನು ತಡೆಹಿಡಿಯುವ ಉದ್ದೇಶದಿಂದ ಹಲ್ಲೆ ಯತ್ನ ನಡೆದಿದೆ ಎಂದವರು ತಿಳಿಸಿದ್ದಾರೆ.

ಗ್ರಾ.ಪಂ. ಅಧ್ಯಕ್ಷರಿಂದ ಆರೋಪ ನಿರಾಕರಣೆ


ವಿನಯಚಂದ್ರರು ಮಾಡಿರುವ ಆರೋಪವನ್ನು ಗ್ರಾ.ಪಂ.ಅಧ್ಯಕ್ಷ ರಾಮಣ್ಣ ಜಾಲ್ತಾರು ನಿರಾಕರಿಸಿದ್ದಾರೆ.
ನಾನು ವಿನಯಚಂದ್ರರೊಂದಿಗೆ ಮಾತನಾಡಿದ್ದು ನಿಜ. ಆದರೆ ಆ ವೇಳೆ ಯಾವುದೇ ರೀತಿಯ ಚಕಮಕಿ ನಡೆದಿಲ್ಲ” ಎಂದು ಅವರು ಸಂಪರ್ಕಿಸಿ ವಿಚಾರಿಸಿದ ಸುದ್ದಿಗೆ ತಿಳಿಸಿದ್ದಾರೆ.