12 ವರ್ಷಗಳ ಹಿಂದೆ ನಡೆದ ಘಟನೆ
ಬಾಳುಗೋಡು ಗ್ರಾಮದ ಉಪ್ಪುಕಳ ಪರಮೇಶ್ವರ ಗೌಡ ಕೊಲೆ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶ ಮಾಡಿದೆ.















2013 ಸೆ. 16 ರಂದು ಅರೋಪಿಗಳಾದ ಚಂದ್ರಹಾಸ, ಎಂ.ಎಚ್.ಮೋಹನ, ಮೋಹನ ದಾಸ್ ಗೌಡ, ಪ್ರಕಾಶ್ ಶೆಟ್ಟಿಗಾರ್, ರಫೀಕ್, ಹಾಗೂ ಉಂಬು ಯಾನೆ ಇಬ್ರಾಹಿಂ ಉಂಬಯ್ ರವರುಗಳು ಸೇರಿಕೊಂಡು ಸಂಜೆ 2ನೇ ಆರೋಪಿ ಮೋಹನ ಎಂ ಎಚ್ ರವರ ಬಾವ ಗಿರೀಶ್ ಎಂಬುವರ ಮೋಟರ್ ಸೈಕಲ್ ನಲ್ಲಿ ಸುಬ್ರಹ್ಮಣ್ಯದಿಂದ 4ನೇ ಆರೋಪಿ ಪ್ರಕಾಶ್ ಶೆಟ್ಟಿಗಾರ್ ಮತ್ತು 5ನೇ ಆರೋಪಿ ರಫೀಕ್ ನನ್ನು ಕುಳ್ಳಿರಿಸಿಕೊಂಡು ಹೋಗುತ್ತಾ ದಾರಿಯ ಮಧ್ಯೆ ಕಲ್ಲೇಮಠ ಸಾಕ್ಷರತಾ ಮಂಟಪ ಎಂಬಲ್ಲಿ ಕಾಯುತ್ತ ನಿಂತಿದ್ದ 3ನೇ ಆರೋಪಿ ಮೋಹನದಾಸ ಗೌಡ ರವರನ್ನು ಅದೇ ಬೈಕಿನಲ್ಲಿ ಕುಳ್ಳಿಸಿಕೊಂಡು 1ನೇ ಆರೋಪಿ ಚಂದ್ರಹಾಸನ ಮನೆಗೆ ಹೋಗಿ ಅಲ್ಲಿಂದ ರಾತ್ರಿ ಎಲ್ಲರೂ ನಡೆದುಕೊಂಡು ಪರಮೇಶ್ವರ ಗೌಡ ರ ಮನೆಗೆ ಸುಮಾರು 11 ಗಂಟೆ ಸಮಯಕ್ಕೆ ತಲುಪಿ ಪರಮೇಶ್ವರ ಗೌಡರನ್ನು ಕೂಗಿ ಕರೆದು “ನಾವು ಫಾರೆಸ್ಟ್ ನವರು ಸುಟ್ಟತ್ ಮಲೆಗೆ ಹೋಗುವ ದಾರಿ ಎಲ್ಲಿ”ಎಂದು ಕೇಳಿ ನೀರು ಬೇಕೆಂಬ ನೆಪದಲ್ಲಿ ಪರಮೇಶ್ವರ ಗೌಡರ ಮನೆಗೆ ಅಕ್ರಮ ಪ್ರವೇಶ ಮಾಡಿ ಅವರ ಮುಖಕ್ಕೆ ಬಟ್ಟೆಯನ್ನು ಹಾಕಿ ಬೀಳಿಸಿ ಉಸಿರು ಕಟ್ಟಿಸಿ ಕೊಲೆ ಮಾಡಿ ಕಪಾಟಿನಲ್ಲಿದ್ದ ನಗದು ರೂ 14,600 ಮತ್ತು ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿರುತ್ತಾರೆ ಎಂದು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 120 (ಬಿ) 448, 396, 397 ಜೊತೆಗೆ 34 ರ ಪ್ರಕಾರ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸುಳ್ಯದ ಆಗಿನ ಪೋಲೀಸು ವೃತ್ತ ನಿರೀಕ್ಷಕರು ಸಲ್ಲಿಸಿರುತ್ತಾರೆ.
ಈ ಪ್ರಕರಣದಲ್ಲಿ ಅಭಿಯೋಜನೆಯು ಸುಮಾರು 58 ಸಾಕ್ಷಿಗಳನ್ನು ಹೆಸರಿಸಿದ್ದು ಅವುಗಳ ಪೈಕಿ 31 ಸಾಕ್ಷಿಗಳನ್ನು ವಿಚಾರಣೆ ನಡೆಸಿದ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪುತ್ತೂರು ದ.ಕ. ಇದರ ನ್ಯಾಯಾಧೀಶೆಯವರಾದ ಶ್ರೀಮತಿ ಸರಿತಾ ಡಿ. ರವರು ಅಭಿಯೋಜನೆಯು ಮಾಡಲಾದ ಆರೋಪವನ್ನು ಸಾಭೀತುಪಡಿಸುವಲ್ಲಿ ಅಭಿಯೋಜನೆಯು ವಿಫಲಗೊಂಡಿದೆ ಎಂಬ ಕಾರಣವನ್ನು ನೀಡಿ ದಿನಾಂಕ-28/08/2025 ರಂದು ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿರುತ್ತಾರೆ. ಈ ಪ್ರಕರಣದ ಆರೋಪಿಗಳ ಪೈಕಿ 1 ನೇ ಆರೋಪಿ ಚಂದ್ರಹಾಸ ತಲೆ ಮರಿಸಿಕೊಂಡಿದ್ದು 6ನೇ ಆರೋಪಿ ಉಂಬಯ್ @ ಇಬ್ರಹಿಂ ಉಂಬಯ್ ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಮೃತ ಪಟ್ಟಿದ್ದು, 2 ನೇ ಆರೋಪಿ ಎಂ.ಹೆಚ್ ಮೋಹನ 3ನೇ ಆರೋಪಿ ಮೋಹನದಾಸ್ ಗೌಡ 4ನೇ ಆರೋಪಿ ಪ್ರಕಾಶ್ ಶೆಟ್ಟಿಗಾರ್ ಹಾಗೂ 5ನೇ ಆರೋಪಿ ರಫೀಕ್ ರವರುಗಳ ಪರವಾಗಿ ಸುಳ್ಯದ ವಕೀಲರಾದ ಎಂ.ವೆಂಕಪ್ಪ ಗೌಡ, ರಾಜೇಶ್ ಬಿ.ಜಿ ಹಾಗೂ ಶ್ಯಾಮ್ ಪ್ರಸಾದ್ ಎನ್.ಕೆ. ರವರು ವಾದಿಸಿದ್ದರು.










