ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘ ಮಹಾಸಭೆ

0

62 ಕೋಟಿ ರೂ.ವ್ಯವಹಾರ – 4 ಲಕ್ಷ 18 ಸಾವಿರ ರೂ. ನಿವ್ವಳ ಲಾಭ

ಶೇ.5.5 ಡಿವಿಡೆಂಟ್ – ಡಿವಿಡೆಂಟ್ ಹಣ ಕಟ್ಟಡ ನಿಧಿಗೆ ಜಮೆಗೊಳಿಸಲು ಮಹಾಸಭೆ ಒಪ್ಪಿಗೆ

ಸುಳ್ಯ ತಾಲೂಕು ಅಲ್ಪಸಂಖ್ಯಾತರ ದೊಡ್ಡಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ಈ ಅವಧಿಯ ಕೊನೆಯ ಮಹಾಸಭೆ ಸೆ.3 ರಂದು ಸುಳ್ಯ ಸಿ.ಎ.ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.
ಸಹಕಾರ ಸಂಘದ ಅಧ್ಯಕ್ಷ ಐ.ಕೆ.ಮಹಮ್ಮದ್ ಇಕ್ಬಾಲ್ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸಂಘದ ಉಪಾಧ್ಯಕ್ಷ ಮುಹಿಯುದ್ದೀನ್ ಹಾಜಿ ಕೆ.ಎಂ. ನಾವೂರು, ನಿರ್ದೇಶಕರುಗಳಾದ ಎಸ್.ಸಂಶುದ್ದೀನ್, ಎಸ್.ಎಂ.ಬಾಪೂ ಸಾಹೇಬ್, ಇಸ್ಮಾಯಿಲ್ ಕೆ.ಎಂ. ಪಡ್ಪಿನಂಗಡಿ, ಹಸೈನಾರ್ ಎ.ಕೆ. ಕಲ್ಲುಗುಂಡಿ, ಉಮ್ಮರ್ ಶಾಫಿ ಕುತ್ತಮೊಟ್ಟೆ , ಜಾರ್ಜ್ ಡಿಸೋಜ ಕನಿಕರಪಳ್ಳ, ಶ್ರೀಮತಿ ಅಮೀನಾ ಎಸ್.ಜಯನಗರ, ಶ್ರೀಮತಿ ಜೂಲಿಯಾ ಕ್ರಾಸ್ತಾ ಬೀರಮಂಗಲ, ಹಮೀದ್ ಕೆ.ಎಂ. ಬೆಳ್ಳಾರೆ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಜ್ವಲದ ನಾಯಕ್ ಐ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗತವರ್ಷದಲ್ಲಿ ಅಗಲಿದ ಸಂಘದ ಸದಸ್ಯರಿಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ಸಭಾಧ್ಯಕ್ಷರು ಸ್ವಾಗತಿಸಿದರಲ್ಲದೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
24-25 ನೇ ಸಾಲಿನ ವಾರ್ಷಿಕ ವರದಿಯನ್ನು ಸಭೆಯಲ್ಲಿ ಮಂಡಿಸಿದಾಗ ಚರ್ಚಿಸಿದ ಸದಸ್ಯರು ಒಪ್ಪಿಗೆ ನೀಡಿದರು. ಲೆಕ್ಕಪರಿಶೋಧನಾ ವರದಿ ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಯಿತು.
24-25 ನೇ ಸಾಲಿನ ಅನುಪಾಲನಾ ವರದಿ ಹಾಗೂ ಲಾಭಾಂಶದ ವಿವರಗಳನ್ನು ಸಭೆಗೆ ಒದಗಿಸಲಾಯಿತು.
ಸದರಿ ಆರ್ಥಿಕ ವರ್ಷದಲ್ಲಿ ಸಂಘವು 62 ಕೋಟಿ ರೂ. ವ್ಯವಹಾರ ನಡೆಸಿದ್ದು, ಒಟ್ಟು ರೂ. 82 ಲಕ್ಷ 43 ಸಾವಿರ ರೂ. ಲಾಭ ಗಳಿಸಿದೆ. ಅದರಲ್ಲಿ ಎಲ್ಲ ಬಾಬತ್ತುಗಳಿಗೆ ತೆಗೆದಿಟ್ಟು, ರೂ. 4 ಲಕ್ಷ 18 ಸಾವಿರ ರೂ. ನಿವ್ವಳ ಲಾಭ ಗಳಿಸಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಜ್ವಲ್ ಸಭೆಗೆ ವಿವರ ನೀಡಿದರು.
ಈ ಸಂದರ್ಭ ಮಾತನಾಡಿದ ಅಧ್ಯಕ್ಷ ಇಕ್ಬಾಲ್ ರವರು , ಸಂಘದ ಸದಸ್ಯರಿಗೆ ಶೇಕಡಾ 5.5 ಡಿವಿಡೆಂಡ್ ನೀಡಲು ನಿರ್ಧರಿಸಿದ್ದೇವೆ. ನಮ್ಮ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಿಸಬೇಕೆಂಬ ಮಹತ್ವಾಕಾಂಕ್ಷೆ ಇರುವುದರಿಂದ ಅದಕ್ಕಾಗಿ ಹಣ ಜಮೆ ಮಾಡುವುದು ಅಗತ್ಯವಾಗಿದೆ. ಆದ್ದರಿಂದ ಈ ಡಿವಿಡೆಂಡ್ ಹಣವನ್ನು ಸಹಕಾರ ಸಂಘದ ಕಟ್ಟಡ ನಿಧಿಗೆ ನೀಡಬೇಕು ಎಂದು ಕೇಳಿಕೊಂಡರು.
ಇದಕ್ಕೆ ಮಹಾಸಭೆ ಒಪ್ಪಿಗೆ ಸೂಚಿಸಿದ್ದರಿಂದ ರೂ.1,43,082 ನ್ನು ಕಟ್ಟಡ ನಿಧಿಗೆ ಜಮೆಗೊಳಿಸಲಾಯಿತು.
” ನಮ್ಮ ಅಲ್ಪಸಂಖ್ಯಾತರ ಸೊಸೈಟಿಯು ಪ್ರಸಕ್ತ ಐದು ವರ್ಷಗಳ ಅವಧಿಯಲ್ಲಿ ನಾಲ್ಕು ಪಟ್ಟು ಹೆಚ್ಚು ಪ್ರಗತಿ ಸಾಧಿಸಿದೆ. ಸದಸ್ಯರಿಗೆ ಹಲವಾರು ಸೌಲಭ್ಯಗಳನ್ನು ಕೊಟ್ಟಿದ್ದೇವೆ. ಖರ್ಚು ಕಡಿಮೆ ಮಾಡಿದ್ದೇವೆ. ನಮ್ಮ ಸಾಧನೆಯನ್ನು ಪರಿಗಣಿಸಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸತತ ನಾಲ್ಕು ವರ್ಷಗಳಿಂದ ನಮಗೆ ಪ್ರಶಸ್ತಿ ನೀಡುತ್ತಿದೆ ” ಎಂದು ಹೇಳಿದ ಅಧ್ಯಕ್ಷ ಇಕ್ಬಾಲ್ ರವರು, ಈಗಾಗಲೇ ನಾವು ಗೃಹನಿರ್ಮಾಣಕ್ಕೆ, ದ್ವಿಚಕ್ರ ವಾಹನ ಖರೀದಿಗೆ ಸಾಲ ನೀಡುತ್ತಿದ್ದೇವೆ. ಮುಂದೆ ಚತುಷ್ಚಕ್ರ ವಾಹನಕ್ಕೂ ಸಾಲ ಕೊಡಬೇಕೆಂದಿದೆ. ಜತೆಗೆ ಸಂಘಕ್ಕೆ ಸ್ವಂತ ಕಟ್ಟಡ ಆಗಬೇಕಾಗಿದೆ. ಸದಸ್ಯರು ನಮ್ಮ ಸೊಸೈಟಿಯಲ್ಲಿ ನಿರಂತರವಾಗಿ ಹೆಚ್ಚೆಚ್ಚು ವ್ಯವಹಾರ ಮಾಡಬೇಕು. ಆಗ ಸಂಘ ಅಭಿವೃದ್ಧಿ ಆಗುತ್ತದೆ” ಎಂದರು.
ಚುನಾವಣೆಯಲ್ಲಿ ಭಾಗವಹಿಸಬೇಕಾದರೆ ಸದಸ್ಯರು 10 ಸಾವಿರ ರೂ.ಗಳ ವ್ಯವಹಾರ ನಡಸಿರಬೇಕೆಂಬ ಶರತ್ತನ್ಬು ತೆಗೆಯಬೇಕೆಂದು ಸದಸ್ಯ ಡಿ.ಎಂ.ಶಾರೀಕ್ ಸಲಹೆ ನೀಡಿದರು. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಕೆಲವು ಯೋಜನೆಗಳನ್ನು ನಮ್ಮ ಸಹಕಾರ ಸಂಘದ ಮೂಲಕ ಜಾರಿಗೊಳಿಸುವ ಪ್ರಯತ್ನವನ್ನು ಮಾಡಬೇಕೆಂದು ಸದಸ್ಯ ಕೆ.ಎಂ.ಮುಸ್ತಫಾ ಸಲಹೆ ನೀಡಿದರು.

ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು. ಉಪಾಧ್ಯಕ್ಷ ಮುಹಿಯುದ್ದೀನ್ ಹಾಜಿ ವಂದಿಸಿದರು.