ಅಮರಮುಡ್ನೂರು ಗ್ರಾಮ ಸಭೆಯಲ್ಲಿ ಯು. ಜಿ. ಸಿ ಕಾಮಗಾರಿ ನಿರ್ವಹಣೆಯ ವಿರುದ್ಧ ಆಕ್ರೋಶ

0

ಗುತ್ತಿಗೆದಾರ ಸಭೆಗೆ ಬರುವಂತೆ ಸದಸ್ಯರ ಆಗ್ರಹ

ಸೆ. 9 ರಂದು 33 ಕೆ. ವಿ (ಯು. ಜಿ. ಸಿ)ಕುರಿತು ವಿಶೇಷ ಸಭೆ ನಡೆಸಲು ನಿರ್ಧಾರ

ಅಮರಮುಡ್ನೂರು ಗ್ರಾಮ ಪಂಚಾಯತ್ ಇದರ 2025-26 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಾನಕಿ ಕಂಡಡ್ಕ ರವರ ಅದ್ಯಕ್ಷತೆಯಲ್ಲಿ ಸೆ. 6 ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಯಾನಂದ ಪತ್ತು ಕುಂಜ ರವರು ವಾರ್ಷಿಕ ವರದಿ ಮಂಡಿಸಿದರು.

ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಮೆಸ್ಕಾಂ ಇಲಾಖೆಯ ಮಹೇಶ್ ರವರು ಮಾಹಿತಿ ನೀಡುವ ಸಂದರ್ಭದಲ್ಲಿ ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತವಾಯಿತು.

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಂಡರ್ ಗ್ರೌಂಡ್ ಕೇಬಲ್ (ಯು. ಜಿ. ಸಿ) ಅಳವಡಿಸುವ ಸಂದರ್ಭದಲ್ಲಿ ಚೊಕ್ಕಾಡಿ ಶೇಣಿ ಚೂಂತಾರು ರಸ್ತೆಯನ್ನು ಜೆಸಿಬಿ ಬಳಸಿ ಹಾನಿ ಮಾಡಿದ್ದರಿಂದ ಸುಮಾರು 10 ದಿನಗಳು ಬಸ್ ಬಂದಿರುವುದಿಲ್ಲ. ಇದರಿಂದ ಶಾಲಾ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸಿದ್ದಾರೆ.
ಪಂಚಾಯತ್ ವತಿಯಿಂದ ಹಾಕಲಾದ ಕುಡಿಯುವ ನೀರಿನ ಪೈಪು ಲೈನ್ ಗಳನ್ನು ಹಾನಿ ಮಾಡಿರುವುದರಿಂದ ನೀರಿನ ಸಂಪರ್ಕ ಕಡಿತವಾಗಿ ಶೇಣಿ ಭಾಗದಲ್ಲಿ ಮಹಿಳೆಯೋರ್ವರು 6 ತಿಂಗಳಿನಿಂದ ನೀರು ಹೊತ್ತು ತರುವ ಸ್ಥಿತಿ ನಿರ್ಮಾಣವಾಗಿದೆ.
ರಸ್ತೆಎಲ್ಲಾ ಕೆಸರುಮಯವಾಗಿದ್ದರಿಂದ
ಹಲವಾರು ಮಂದಿ ದ್ವಿಚಕ್ರ ವಾಹನ ಸವಾರರು ಸ್ಕಿಡ್ ಆಗಿ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿತ್ತು. ಈ ಬಗ್ಗೆ ಸುದ್ದಿ ಪತ್ರಿಕೆಯಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿ ವೈರಲಾಗಿತ್ತು.
ಇಷ್ಟೆಲ್ಲಾ ಸಮಸ್ಯೆ ಉದ್ಭವಿಸಲು ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆದಾರರು ಕಾರಣಕರ್ತರಾಗಿದ್ದು ಗ್ರಾಮಸ್ಥರೊಂದಿಗೆ ಉಡಾಫೆಯಾಗಿ ವರ್ತಿಸಿದ್ದರು. ಕಾಮಗಾರಿ ಕೆಲಸ ಪ್ರಾರಂಭಿಸುವ ಮೊದಲು ಆಯಾಯ ಪಂಚಾಯತ್ ಗಮನಕ್ಕೆ ತರುವುದು ನಿಯಮ ವಾಗಿದ್ದು ಇದೆಲ್ಲ ಮೀರಿ ಕಾಮಗಾರಿ ನಡೆಸಿದ್ದರಿಂದ ಸಾರ್ವಜನಿಕಆಸ್ತಿ ಪಾಸ್ತಿಗೆ ಸಾಕಷ್ಟು ಹಾನಿ ಮಾಡಿದ್ದಾರೆ. ಈ ವಿಷಯದ ಕುರಿತು ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರು ಗ್ರಾಮ ಸಭೆಯಲ್ಲಿ ಸಮಜಾಯಿಷಿಕೆ ನೀಡಬೇಕು. ಸಾರ್ವಜನಿಕ ರಿಗೆ ಅದ ಸಮಸ್ಯೆಗಳಿಗೆ ಕಷ್ಟ ನಷ್ಟಗಳಿಗೆ ನೇರ ಹೊಣೆಯಾಗಿದ್ದು ಸಂಬಂಧಿಸಿದಂತೆ ಪರಿಹಾರ ಕೊಡಬೇಕು. ಈ ಗ್ರಾಮಸಭೆಗೆ ಅವರನ್ನು ಕರೆಸಿ ನಮ್ಮ ಪ್ರಶ್ನೆಗಳಿಗೆ ಅವರಿಂದ ಸಮರ್ಪಕ ಉತ್ತರ ಬೇಕು. ಇಲ್ಲವಾದಲ್ಲಿ ಸಭೆ ಮುಕ್ತಾಯ ಗೊಳಿಸಲು ಬಿಡುವುದಿಲ್ಲ. ಗ್ರಾಮಸ್ಥರಿಗೆ ಆಗಿರುವ ತೊಂದರೆ ಕಷ್ಟ ನಷ್ಟಗಳಿಗೆ ಸರಿಯಾದ ಪರಿಹಾರ ಸಿಗದಿದ್ದರೆ ಕೋರ್ಟ್ ಮೊರೆ ಹೋಗಲು ಹಿಂಜರಿಯುವುದಿಲ್ಲಎಂದು ಪಂ. ಸದಸ್ಯ ಅಶೋಕ ಚೂಂತಾರು ರವರು ಪಟ್ಟು ಹಿಡಿದರು.

ಅಶೋಕ ರವರು ಹೇಳಿದ ವಿಚಾರ ನೂರಕ್ಕೆ ನೂರು ಸತ್ಯವಾಗಿದೆ.
ಗುತ್ತಿಗೆದಾರರು ಬಂದು ಏಕಾಏಕಿಯಾಗಿ ಮಾಹಿತಿ ನೀಡದೆ ಕೆಲಸ ಪ್ರಾರಂಭಿಸಿದ್ದಾರೆ. ಒಳ್ಳೆಯ ರಸ್ತೆಯನ್ನು ಹಾಳು ಮಾಡಿ ಹೋಗಿದ್ದಾರೆ. ಇದರಿಂದ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸಿದ್ದಾರೆ. ಪ್ರಶ್ನಿಸಿದಾಗ ನಮಗೆ ಮೇಲಿನಿಂದ ಬೆಂಬಲ ಇದೆ. ನೀವು ದೂರು ನೀಡಿದರೆ ತೊಂದರೆ ಇಲ್ಲ ಅಂತ ಲಘು ವಾಗಿ ಉತ್ತರಿಸಿದ್ದಾರೆ ಎಂದು ಕೇಶವ ಕರ್ಮಜೆ ಯವರು ಧ್ವನಿಗೂಡಿಸಿದರು.

ಇದಕ್ಕೆ ಮೆಸ್ಕಾಂ ಇಲಾಖೆಯ ಎ. ಇ. ಇ ಮಹೇಶ್ ರವರು ಮಾತನಾಡಿ ಈಗಾಗಲೇ ಗುತ್ತಿಗೆದಾರರಿಗೆ ದೂರವಾಣಿ ಕರೆ ಮಾಡಿದ್ದೇವೆ.ಅವರು ಬೆಂಗಳೂರಿಗೆ ಹೋಗಿರುತ್ತಾರೆ. ಸೆ. 9 ರಂದು ಮರಳಿ ಬರುವುದಾಗಿ ತಿಳಿಸಿದ್ದಾರೆ.

ಗುತ್ತಿಗೆದಾರರು ಪಂಚಾಯತ್ ಗಮನಕ್ಕೆ ತಾರದೆ ಕೆಲಸ ನಿರ್ವಹಿಸಿರುವುದರಿಂದ ಸಮಸ್ಯೆ ತಲೆದೋರಿದೆ. ಗ್ರಾಮ ಸಭೆಯನ್ನು ಮುಂದೂಡುವ ಬದಲಾಗಿ ಸೆ. 9 ಮಂಗಳವಾರದಂದು 33 ಕೆವಿ ಅಂಡರ್ ಗ್ರೌಂಡ್ ಲೈನ್ ವಿದ್ಯುತ್ ಸಂಪರ್ಕದ ಕಾಮಗಾರಿ ಕುರಿತು ವಿಶೇಷ ಸಭೆ ಕರೆಯುವ ಬಗ್ಗೆ ಗ್ರಾಮ ಸಭೆಯಲ್ಲಿ ನಿರ್ಣಯಿಸಿ ಪತ್ರ ಬರೆದುಗುತ್ತಿಗೆದಾರರನ್ನು ಕರೆಸಿ ಸಮಜಾಯಿಷಿಕೆ ನೀಡುವಂತೆ ಸೂಚಿಸಲಾಗುವುದೆಂದು ಪಿಡಿಒ ದಯಾನಂದ ರವರು ತಿಳಿಸಿದರು.
ಪಂಚಾಯತ್ ನಿರ್ಧಾರಕ್ಕೆ ಗ್ರಾಮಸ್ಥರು ಒಪ್ಪಿಗೆಯನ್ನು ಸೂಚಿಸಿದರು.

ಚಾಮಡ್ಕ ಕಂಜರ್ಪಣೆ ಭಾಗದಲ್ಲಿ ವಿದ್ಯುತ್ ಸಂಪರ್ಕದ ತಂತಿಗಳು ಬಹಳಷ್ಟು ಹಳೆಯದಾಗಿದ್ದು ತುಕ್ಕು ಹಿಡಿದು ತುಂಡಾಗಿ ಬೀಳುವ ಸಾಧ್ಯತೆ ಇದ್ದು ಅಪಾಯಕಾರಿ ಸ್ಥಿತಿಯಲ್ಲಿದೆ. ಈ ವಿದ್ಯುತ್ ತಂತಿಗಳನ್ನು ಶೀಘ್ರವಾಗಿ ಬದಲಾಯಿಸಿ ಹೊಸ ಲೈನ್ ಅಳವಡಿಸಬೇಕು ಎಂದು ಆದಿತ್ಯ ಕಂಜರ್ಪಣೆ ತಿಳಿಸಿದರು.

ಹೆಚ್ ಟಿ ಲೈನ್ ಅಡಿಯಲ್ಲಿ ಸಾಮಾಜಿಕ ಅರಣ್ಯದವರು ಗಿಡ ನೆಡುತ್ತಿದ್ದಾರೆ. ಗಿಡಗಳು ದೊಡ್ಡದಾಗಿ ವಿದ್ಯುತ್ ಲೈನ್ ಗಳಿಗೆ ತಾಗುವ ಸಾಧ್ಯತೆ ಇರುವುದರಿಂದ ವಿದ್ಯುತ್ ಲೈನ್ ಅಡಿಭಾಗದಲ್ಲಿ ಗಿಡ ನೆಡದಂತೆ ಸೂಚಿಸಬೇಕು ಎಂದು ರಾಮಕೃಷ್ಣರವರು ಅಭಿಪ್ರಾಯ
ವ್ಯಕ್ತಪಡಿಸಿದರು.

ಗ್ರಾಮದ ಸರಕಾರಿ ಶಾಲೆಯ ಶಿಕ್ಷಕರು ಗ್ರಾಮ ಸಭೆಗೆ ಬರಬೇಕು. ಇದರಿಂದ ಪಂಚಾಯತ್ ಮತ್ತು ಶಾಲೆಯ ನಡುವೆ ನಿಕಟ ಸಂಬಂಧದಿಂದ ಅಭಿವೃದ್ಧಿಪರ ಚಿಂತನೆಗಳನ್ನು ನಡೆಸಲು ಉಪಯುಕ್ತವಾಗುವುದೆಂದು ಕೃಷ್ಣ ಪ್ರಸಾದ್ ಮಾಡಬಾಕಿಲು ಹೇಳಿದರು.

ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿದೆ. ಆರೋಗ್ಯ ಇಲಾಖೆಯವರು ಮನೆಗೆ ಬಂದು ನಾಯಿಗಳಿಗೆ ರೇಬಿಸ್ ಲಸಿಕೆ ನೀಡಿದರೆ ಸಾಲದು ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ ನೀಡುವ ವ್ಯವಸ್ಥೆ ಮಾಡಬೇಕು. ಅಥವಾ ಬೀದಿನಾಯಿಗಳ ಸಂತಾನ ನಿಯಂತ್ರಣ ಕಾರ್ಯಕ್ರಮವನ್ನು ಸರಕಾರದ ಮಟ್ಟದಲ್ಲಿ ಹಮ್ಮಿಕೊಳ್ಳಬೇಕು ಎಂದು ಕೇಶವ ಕರ್ಮಜೆ ಯವರು ತಿಳಿಸಿದರು.

ಅಯ್ಯನಕಟ್ಟೆ ಬೆಂಗಮಲೆ ರಸ್ತೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದಾರೆ. ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲ 3.5 ಕೋಟಿ ಅನುದಾನ ಮಂಜೂರಾಗಿದ್ದು ಕಾಮಗಾರಿ ಸಂಪೂರ್ಣ ಗೊಳಿಸಿಲ್ಲ ರಸ್ತೆ ಕೆಟ್ಟು ಹೋಗಿದೆ ಈ ಬಗ್ಗೆ ಮಾಹಿತಿ ಬೇಕು ಎಂದು ರಾಮಯ್ಯ ರವರು ಕೇಳಿದರು.

ಇಂಜಿನಿಯರ್ ರವರು
ಬಾರದ ಕಾರಣ ಈ ವಿಚಾರವನ್ನು ಅವರ ಗಮನಕ್ಕೆ ತರುತ್ತೇವೆ ಎಂದು ಪಿಡಿಒ ತಿಳಿಸಿದರು. ಪಂಚಾಯತ್ ವ್ಯಾಪ್ತಿಯ ಕಾಂಕ್ರೀಟ್ ರಸ್ತೆ ಬದಿಯಲ್ಲಿ ಚರಂಡಿ ದುರಸ್ತಿಯಾಗದೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಮುಂಡಕಜೆಯ ರಸ್ತೆ ಬದಿ ಕಾಡು ತುಂಬಿದ್ದು ಇದರ ಸ್ವಚ್ಛ ಕಾರ್ಯಕ್ರಮ ಪಂಚಾಯತ್ ವತಿಯಿಂದ ನಡೆಸಬೇಕು ಎಂದು ಗಿರಿಧರ ಗೌಡ ಕಂದಡ್ಕ ರವರು ತಿಳಿಸಿದರು.

ಪ್ರಸ್ತುತ ವರ್ಷದಲ್ಲಿ ಚರಂಡಿ ದುರಸ್ತಿ ಪಡಿಸಲು ಅನುದಾನ ಇಟ್ಟಿಲ್ಲ. ಮುಂದಿನ ಕ್ರಿಯಾ ಯೋಜನೆಯಲ್ಲಿ ಚರಂಡಿ ದುರಸ್ತಿಗೆ ಅನುದಾನವನ್ನು ಇರಿಸಲಾಗುವುದು ಎಂದು ಪಿಡಿಒ ತಿಳಿಸಿದರು.

ಶೇಣಿ ಅಂಗನವಾಡಿ ಬಳಿ ತಡೆಗೋಡೆರಚನೆಯಾಗಬೇಕು ಎಂದು ಧರ್ಮಾವತಿ ಹಾಗೂಅಕ್ಕೋಜಿಪಾಲ್ ಅಂಗನವಾಡಿಗೆ ಶೌಚಾಲಯ ದ ಅವಶ್ಯಕತೆ ಇದೆ ಎಂದು ರೇವತಿ ಯವರು ಬೇಡಿಕೆ ಇರಿಸಿದರು.
ಗ್ರಾಮದ ಹಲವಾರು ಮಂದಿ ಕೃಷಿಕರ ಆರ್ ಟಿ ಸಿ ಯಲ್ಲಿ ಅರಣ್ಯ ಇಲಾಖೆಯ ಖಾತೆ ಸಂಖ್ಯೆನಮೂದಾಗಿರುವುದರಿಂದ ಕೃಷಿಕರಿಗೆ ಸಮಸ್ಯೆಯಾಗಿದೆ.

ಸರ್ವೆ ನಂಬ್ರ ಒಂದೇ ಆಗಿದ್ದು ಡಿಮ್ಡ್ ಫಾರೆಸ್ಟ್ ಎಂದು ನಮೂದಾಗಿರುವುದರಿಂದ ವ್ಯವಹಾರಕ್ಕೆತೊಂದರೆಯಾಗಿದೆ. ಈ ಬಗ್ಗೆ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಗ್ರಾಮದಲ್ಲಿ ಜಂಟಿ ಸರ್ವೆ ಮಾಡಿ ಗಡಿ ಗುರುತು ಮಾಡುವಂತೆ ಅಶೋಕ ಚೂಂತಾರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಕ್ಷರತೆಯ ಮೂಲಕ ಕನ್ನಡ ಕಲಿತು ಭಾಷಣ ಮಾಡಿದ ಅಧ್ಯಕ್ಷೆ :

ಪಂಚಾಯತ್ ಅಧ್ಯಕ್ಷರಾಗಿ ಕಳೆದ ಎರಡುವರೆ ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ್ದೇನೆ. ಈ ಸಂದರ್ಭದಲ್ಲಿ ಗ್ರಾಮದ ಅಭಿವೃದ್ಧಿಪರ ಕೆಲಸ ಕಾರ್ಯಗಳಿಗೆ ಸಹಕಾರ ನೀಡಿದ ಸಮಸ್ತ ಗ್ರಾಮಸ್ಥರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. ಮುಂದೆಯೂ ಗ್ರಾಮದ ಅಭಿವೃದ್ಧಿಗೆ ತಾವೆಲ್ಲರೂ ಕೈಜೋಡಿಸುವಂತೆ ಅಧ್ಯಕ್ಷೆ ಶ್ರೀಮತಿ ಜಾನಕಿ ಕಂದಡ್ಕ ರವರು ಅಪೇಕ್ಷಿಸಿದರು.
ಪಂಚಾಯತ್ ಅಧ್ಯಕ್ಷರಾಗುವ ಸಂದರ್ಭದಲ್ಲಿ ಓದಲು ಬರೆಯಲು ಬರುತ್ತಿರಲಿಲ್ಲ. ಗ್ರಂಥಾಲಯದ ಮೇಲ್ವಿಚಾರಕರ ಮಾರ್ಗದರ್ಶನದಿಂದ ಸಾಕ್ಷರತೆಯ ಮೂಲಕ ಕನ್ನಡ ಭಾಷೆ ಓದಲು ಬರೆಯಲು ಕಲಿತಿರುತ್ತೇನೆ ಎಂದು ಅವರು ಹೇಳಿದರು.

ಆಡಳಿತ ಮಂಡಳಿಯ ಕೊನೆಯಗ್ರಾಮಸಭೆಯಾಗಿದ್ದು ಪಂಚಾಯತ್ ಸದಸ್ಯರಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷೆ ಭುವನೇಶ್ವರಿ ಪದವು, ಸದಸ್ಯರಾದ ಹೂವಪ್ಪ ಗೌಡ, ಅಶೋಕ್ ಚೂಂತಾರು, ಕೃಷ್ಣಪ್ರಸಾದ್ ಮಾಡಬಾಕಿಲು, ದಿವಾಕರ ಬಿ,ರಾಧಾಕೃಷ್ಣಕೆ, ಪದ್ಮಪ್ರಿಯ, ದಿವ್ಯಾ ಎಂ,ವೆಂಕಟ್ರಮಣ ಇಟ್ಟಿ ಗುಂಡಿ, ಶಶಿಕಲಾ, ಜಯಪ್ರಕಾಶ್ ದೊಡ್ಡಿಹಿತ್ಲು, ಯಮುನಾ, ತೇಜಾವತಿ ಎಂ, ಜನಾರ್ಧನ ಪಿ, ಮೀನಾಕ್ಷಿ, ಸೀತಾ ಹೆಚ್ ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಯಾನಂದ ಪತ್ತು ಕುಂಜ ವಂದಿಸಿದರು. ಪಂಚಾಯತ್ ಸಿಬ್ಬಂದಿ ವರ್ಗದವರು ಸಹಕರಿಸಿದರು.