ಪುತ್ತೂರು ಆದರ್ಶ ಸಹಕಾರ ಸಂಘದಿಂದ ವಿದ್ಯಾನಿಧಿ ಸಹಾಯಧನ ವಿತರಣೆ

0

ಸೀತಾರಾಮ ರೈಯವರು ಸಹಕಾರ ಕ್ಷೇತ್ರಕ್ಕೆ ಆದರ್ಶ ವ್ಯಕ್ತಿ – ಶಶಿಕುಮಾರ್ ರೈ ಬಾಲ್ಯೊಟ್ಟು

ಸೀತಾರಾಮ ರೈಯವರು
ಎಷ್ಟು ಎತ್ತರಕ್ಕೆ ಏರಿದರೂ ಬಾಲ್ಯದ ಕಷ್ಟದ ದಿನಗಳನ್ನು ಮರೆಯಲಿಲ್ಲ. ಆದರ್ಶ ಸಹಕಾರ ಸಂಘದ ಮೂಲಕ‌ ಹಳ್ಳಿಯ ಬಡ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಸಹಾಯಧನ ವಿತರಿಸಿ ಸಹಕಾರ ಕ್ಷೇತ್ರಕ್ಕೆ ಮತ್ತು ಸಮಾಜಕ್ಕೆ ಆದರ್ಶ ವ್ಯಕ್ತಿಯಾಗಿದ್ದಾರೆ. ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ಮುಂದೆ ಸಮಾಜದಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡುವ ಗುಣಗಳನ್ನು ಬೆಳೆಸಿಕೊಳ್ಳಿ ಎಂದು ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು. ಅವರು ಸೆ. 13 ರಂದು ಪುತ್ತೂರಿನ ದರ್ಬೆಯಲ್ಲಿರುವ ಪ್ರಶಾಂತ್ ಮಹಲ್ ನ ಸನ್ನಿಧಿ ಸಭಾಂಗಣದಲ್ಲಿ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಆಶ್ರಯದಲ್ಲಿ ನಡೆದ ವಿದ್ಯಾನಿಧಿ – ಸಹಾಯಧನ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ರಾಮಕೃಷ್ಣ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ. ಜಯರಾಜ್ ಬಿ. ಭಂಡಾರಿ ಮಾತನಾಡಿ ಸಮಯಪ್ರಜ್ಞೆ, ಕಾರ್ಯವೈಖರಿಗೆ ಹೆಸರು ಪಡೆದ ಕೆ. ಸೀತಾರಾಮ ರೈಯವರು ಈ ವರ್ಷ 250 ವಿದ್ಯಾರ್ಥಿಗಳಿಗೆ ರೂ. 2000/- ದಂತೆ ವಿದ್ಯಾರ್ಥಿ ವೇತನ ವಿತರಿಸುವುದರೊಂದಿಗೆ ಕಳೆದ 5 ವರ್ಷಗಳಿಂದ ಸುಮಾರು 30 ಲಕ್ಷ ವಿದ್ಯಾರ್ಥಿ ವೇತನ ವಿತರಿಸಿ ಸಮಾಜಕ್ಕೆ ಮಾದರಿ ಕಾರ್ಯ ಮಾಡಿದ್ದಾರೆ ಎಂದರು.
ಸ್ವಾಗತದೊಂದಿಗೆ ಪ್ರಾಸ್ತಾವಿಕ ಮಾತುಗಳನ್ನಾಡಿದ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಸಹಕಾರಿ ರತ್ನ ಕೆ.‌ ಸೀತಾರಾಮ ರೈ ಸವಣೂರು ಮಾತನಾಡಿ 1967ರಲ್ಲಿ ನಾನು ಎಸ್.ಎಸ್. ಎಲ್.ಸಿ ಓದುತ್ತಿರುವಾಗ ಆರ್ಥಿಕ ಸಂಕಷ್ಟವನ್ನು ಅನುಭವಿಸಿದವ ನಾನು. ಅದಕ್ಕಾಗಿ ನನ್ನ ಆದಾಯದ ಒಂದಂಶವನ್ನು ಸರಕಾರಿ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಬೇಕೆಂದು ಯೋಚಿಸಿ ಈ ಕಾರ್ಯವನ್ನು ಮಾಡುತ್ತಿದ್ದೇವೆ. ಕಳೆದ 5 ವರ್ಷಗಳಿಂದ ಸುಮಾರು 26 ಲಕ್ಷ ನೀಡಿದ್ದು, ಈ ವರ್ಷವೂ 250 ವಿದ್ಯಾರ್ಥಿಗಳಿಗೆ ರೂ. 5 ಲಕ್ಷ ‌ನೀಡಲಿದ್ದೇನೆ ಎಂದರು. ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯ.ಸ. ಅಧ್ಯಕ್ಷ ಜಯರಾಮ ರೈ ಎ.ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು. ಸಂಘದ ಉಪಾಧ್ಯಕ್ಷ ಎನ್. ಸುಂದರ ರೈ ಸವಣೂರು, ವಿದ್ಯಾರಶ್ಮಿ ಸಮೂಹ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ, ಸಂಘದ ಮಹಾಪ್ರಬಂಧಕರಾದ ವಸಂತ ಜಾಲಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಕೇಂದ್ರ ಕಚೇರಿಯ ಸಿಬ್ಬಂದಿ ಶ್ರೀಮತಿ ಶ್ರಮಿತಾ ಪ್ರಾರ್ಥಿಸಿದರು. ಸಂಘದ ನಿರ್ದೇಶಕರಾದ ಜೈರಾಜ್ ಭಂಡಾರಿ ವಂದಿಸಿದರು. ಸಂಘದ ಪಂಜ‌ ಶಾಖೆಯ ನಿವೃತ್ತ ವ್ಯವಸ್ಥಾಪಕ ಪರಮೇಶ್ವರ ಗೌಡ ಬಿ ಮತ್ತು ಸವಣೂರು ಪ್ರಾ.ಕೃ.ಪ.ಸ.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸಿಬ್ಬಂದಿಗಳು ಸಹಕರಿಸಿದರು.