ಬಳ್ಪ ಅಂಗನವಾಡಿ ಕೇಂದ್ರದಲ್ಲಿ ಎಲ್.ಕೆ.ಜಿ. ಯು.ಕೆ.ಜಿ ಆರಂಭ

0

ಅಂಗನವಾಡಿ ಕಾರ್ಯಕರ್ತೆ ಚುರುಕಾಗಿರುತ್ತಾರೋ ಅಲ್ಲಿ ಮಕ್ಕಳ ಸಂಖ್ಯೆ ವೃದ್ಧಿಸುತ್ತದೆ – ರಶ್ಮಿ ಅಶೋಕ್

ದ.ಕ. ಜಿಲ್ಲೆಯಾದ್ಯಂತ ಎರಡೂವರೆ ಸಾವಿರ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದೆ. ಎಲ್ಲಾ ಅಂಗನವಾಡಿಗಳು ಒಂದೇ ರೀತಿ ಇರುವುದಿಲ್ಲ. ಎಲ್ಲಿ ಕಾರ್ಯಕರ್ತೆ ಹುಮ್ಮಸ್ಸಿನಿಂದ ಊರವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಾರೋ ಅಲ್ಲಿ ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತದೆ. ಇದಕ್ಕೆ ಕಾರ್ಯಕರ್ತೆ ಮೋಹಿನಿಯವರೇ ಉದಾಹರಣೆ. ಎಲ್ಲಾ ಅಂಗನವಾಡಿಗಳಲ್ಲಿ ಹಿರಿಯವಿದ್ಯಾರ್ಥಿ ಸಂಘದ ರಚನೆಯಾಗಲಿದೆ. ಆಗ ಅಂಗನವಾಡಿಗಳು ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ದ.ಕ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಶ್ರೀಮತಿ ರಶ್ಮಿ ಹೇಳಿದರು.

ಅವರು ಸೆ. 11ರಂದು ಬಳ್ಪ ಅಂಗನವಾಡಿ ಕೇಂದ್ರದಲ್ಲಿ ಎಲ್.ಕೆ.ಜಿ. ಯು.ಕೆ.ಜಿ ತರಗತಿಗಳ ಉದ್ಘಾಟನೆಯ ಸಂದರ್ಭದಲ್ಲಿ ಭಾಗವಹಿಸಿ ಮಾತನಾಡಿದರು. ನೂತನವಾಗಿ ಎಲ್.ಕೆ.ಜಿ, ಯುಕೆಜಿಯನ್ನು ಉದ್ಘಾಟಿಸಿದ ಬಳಿಕ, ಹಲವು ಕೊಡುಗೆಗಳನ್ನು ಉದ್ಘಾಟಿಸಲಾಯಿತು. ಬಳಿಕ ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ತನುಜರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಬಳ್ಪ ಗ್ರಾ.ಪಂ. ಅಧ್ಯಕ್ಷ ಹರ್ಷಿತ್ ಕಾರ್ಜ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಪಾರ್ವತಿ ಪಿ.ಡಿ, ಸದಸ್ಯರುಗಳಾದ ಶ್ರೀಮತಿ ನೇತ್ರಾವತಿ ಹೊಪ್ಪಾಳೆ, ಚಂದ್ರಶೇಖರ ಅಕ್ಕೇಣಿ, ಬಳ್ಪ ಪಂಚಾಯತ್ ಪಿಡಿಒ ನಾರಾಯಣ ಬಟ್ಟೋಡಿ, ಬಳ್ಪ ಉ.ಹಿ.ಪ್ರಾ. ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಉಮೇಶ್ ಬುಡೆಂಗಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕುಸುಮಾಧರ, ಮುಖ್ಯ ಶಿಕ್ಷಕಿ ಶ್ರೀಮತಿ ಗಿರಿಜಾ, ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ರೊ. ಜಯಪ್ರಕಾಶ್ ಆರ್, ರೋಟರಿ ಕ್ಲಬ್ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ರೊ. ಬಾಲಕೃಷ್ಣ ಪೈ, ಬಳ್ಪ ಕೇನ್ಯ ಗ್ರಾಮವಿಕಾಸ ಪ್ರತಿಷ್ಠಾನದ ಅಧ್ಯಕ್ಷ ವಿನೋದ್ ಬೊಳ್ಮಲೆ, ಅಂಗನವಾಡಿ ಬಾಲವಿಕಾಸ ಸಮಿತಿ ಉಪಾಧ್ಯಕ್ಷ ಚಂದ್ರಕಾಂತ್ ಎಂ.ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ರೋಟರಿ ಕ್ಲಬ್, ಅಂಗನವಾಡಿಯ ಬಾಲವಿಕಾಸ ಸಮಿತಿ, ಸಂಜೀವಿನಿ ಸಂಘ, ಹಳೆವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಸಂಘ, ಪೋಷಕರು ಮತ್ತು ಊರ ಪರವೂರ ದಾನಿಗಳು ಒಟ್ಟು ರೂ. 78 ಸಾವಿರ ಮೌಲ್ಯದ ವಿವಿಧ ಕೊಡುಗೆಗಳನ್ನು ಅಂಗನವಾಡಿ ಕೇಂದ್ರಕ್ಕೆ ನೀಡಿದ್ದು, ದಾನಿಗಳನ್ನು ಗೌರವಿಸಲಾಯಿತು. ಗರ್ಭಿಣಿ ಶ್ರೀಮತಿ ರೇಖಾ ಅಗೋಳಿಬೈಲುರನ್ನು ರಶ್ಮೀ ಅಶೋಕ್ ಗೌರವಿಸಲಾಯಿತು. ಅಂಗನವಾಡಿ ಪುಟಾಣಿಗಳು ಪ್ರಾರ್ಥಿಸಿದರು. ಬಳ್ಪ ಆರೋಗ್ಯ ಉಪಕೇಂದ್ರದ ಆರೋಗ್ಯಾಧಿಕಾರಿ ಶ್ರೀಮತಿ ಮಮತಾ ಸತ್ಯನಾರಾಯಣ ಸ್ವಾಗತಿಸಿ, ಪೋಷಕರಾದ ಶ್ರೀಮತಿ ಭವ್ಯ ಆಲ್ಕಬೆ ವಂದಿಸಿದರು. 2013-14ನೇ ಸಾಲಿನಲ್ಲಿ ಅತ್ಯುತ್ತಮ ಕಾರ್ಯಕರ್ತೆ ರಾಜ್ಯ ಪ್ರಶಸ್ತಿ ಪಡೆದ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಮೋಹಿನಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಳ್ಪ ಶಾಲಾ ಸಹಶಿಕ್ಷಕ ಆನಂದ್ ಕಾರ್ಯಕ್ರಮ ನಿರೂಪಿಸಿದರು. ಸಂಜೀವಿನಿ ಸಂಘದ ಎಂ.ಬಿ.ಕೆ ಶ್ರೀಮತಿ ಯಮುನಾ ಕಾರ್ಜ ಸಭಿಕರ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

11 ವರ್ಷಗಳ ಹಿಂದೆ ಆದರ್ಶ ಗ್ರಾಮವಾಗಿ ಘೋಷಣೆಯಾಗಿ ಹಲವು‌ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಇದಕ್ಕೆ ಪೂರಕವಾಗಿ ಬಳ್ಪ ಅಂಗನವಾಡಿ ಕೇಂದ್ರದಲ್ಲಿ ಎಲ್.ಕೆ.ಜಿ, ಯು.ಕೆ.ಜಿ ಆರಂಭಗೊಂಡಿದೆ. ಇದರ ಹಿಂದೆ ಕಾರ್ಯಕರ್ತೆ ಮೋಹಿನಿಯವರ ಪರಿಶ್ರಮ ಇದೆ – ಹರ್ಷಿತ್ ಕಾರ್ಜ

ಮಕ್ಕಳ ಆಸಕ್ತಿಯನ್ನು, ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಪೋಷಕರು ಮಾಡಬೇಕಾಗಿದೆ. ಮುಂದೆಯೂ ನಮ್ಮ ಕ್ಲಬ್ ನಿಮ್ಮೊಂದಿಗೆ ಇದೆ – ರೊ. ಜಯಪ್ರಕಾಶ್ ಆರ್

ಮೋಹಿನಿಯವರಲ್ಲಿ ನಾಯಕತ್ವದ ಗುಣ ಇದೆ. ಕೊಡುಗೆಗಳನ್ನು ಪಡೆಯಬೇಕಾದರೆ ಎಲ್ಲರನ್ನೂ ಸಂಪಕರ್ಸಿ ಒಟ್ಟು ಸೇರಿಸುವ ಕಾರ್ಯ ಮಾಡಿದ್ದಾರೆ. ಈ ಅಂಗನವಾಡಿಗೆ ಅವಶ್ಯವಿರುವ ಟೇಬಲನ್ನು ನಮ್ಮ ಕ್ಲಬ್‌ನಿಂದ ಕೊಡುಗೆಯಾಗಿ ನೀಡುತ್ತೇವೆ – ರೊ. ಬಾಲಕೃಷ್ಣ ಪೈ

2013ರಿಂದ ಸಂಸದರ ಆದರ್ಶ ಗ್ರಾಮವಾಗಿ ಘೋಷಣೆಯಾಗುವ ಮೂಲಕ ಬಳ್ಪದ ಭವಿಷ್ಯ ತೆರೆದುಕೊಂಡಿದೆ. ಬಳ್ಪ ಪ್ರಾಥಮಿಕ ಶಾಲೆಗೂ ಅನೇಕ ಕೊಡುಗೆಗಳ ಅವಶ್ಯಕತೆಯಿದೆ – ವಿನೋದ್ ಬೊಳ್ಮಲೆ

ಬಳ್ಪದ ಪ್ರಾಥಮಿಕ ಶಾಲೆಗೂ ಆಂಗ್ಲ ಮಾಧ್ಯಮವಾಗಿ ಪರಿವರ್ತನೆಗೊಳ್ಳಬೇಕು. ಇದಕ್ಕಾಗಿ ನಾವೆಲ್ಲ ಪ್ರಯತ್ನಿಸುತ್ತಿದ್ದೇವೆ – ಉಮೇಶ್ ಬುಡೆಂಗಿ