ತಾಲೂಕಿನ ಪಶು ಆಸ್ಪತ್ರೆ ಸುಳ್ಯ ಹಾಗೂ ಬೆಳ್ಳಾರೆ ಗುತ್ತಿಗಾರು ಮತ್ತು ಕಳಂಜ ಪಶು ಚಿಕಿತ್ಸಾಲಯಗಳಲ್ಲಿ ಸೆ.16 ರಿಂದ ಹುಚ್ಚುನಾಯಿ ರೋಗ (ರೇಬಿಸ್) ನಿರೋಧಕ ಲಸಿಕೆಯು ಉಚಿತವಾಗಿ ಲಭ್ಯವಿದ್ದು ಎಲ್ಲಾ ನಾಯಿ ಮತ್ತು ಬೆಕ್ಕು ಗಳ ಮಾಲೀಕರು ಕೆಲಸದ ವೇಳೆಯಲ್ಲಿ ಪಶುವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಸಂಪರ್ಕಿಸಿ ತಮ್ಮ ಸಾಕುಪ್ರಾಣಿಗಳಿಗೆ ಉಚಿತವಾಗಿ ಲಸಿಕೆ ಪಡೆದುಕೊಳ್ಳುವಂತೆ ಪಶುಸಂಗೋಪನ ಇಲಾಖೆಯ ಪ್ರಕಟಣೆಯಲ್ಲಿ ಸಹಾಯಕ ನಿರ್ದೇಶಕರು ತಿಳಿಸಿರುತ್ತಾರೆ.









ರೇಬಿಸ್ ಬಂದು ಮಾರಣಾಂತಿಕ ರೋಗವಾಗಿದ್ದು ರೋಗಕ್ಕೆ ತುತ್ತಾದ ಜಾನುವಾರು ಅಥವಾ ಮನುಷ್ಯರಲ್ಲಿ ಚಿಕಿತ್ಸೆ ಸಾಧ್ಯವಾಗುವುದಿಲ್ಲ. ಮುಂಜಾಗ್ರತಾ ಕ್ರಮವಾಗಿ ಲಸಿಕೆ ನೀಡುವುದೊಂದೇ ರೇಬಿಸ್ ರೋಗವನ್ನು ತಡೆಯಲು ಇರುವ ಕ್ರಮ. ಸಾಮಾನ್ಯವಾಗಿ ಈ ರೋಗಕ್ಕೆ 21 ದಿನಗಳ ಅಂತರದಲ್ಲಿ ಎರಡು ಡೋಸ್ ಗಳ ಮುಂಜಾಗ್ರತಾ ಲಸಿಕೆಯನ್ನು ನೀಡಬೇಕಾಗುತ್ತದೆ. ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಗಳಿಗೂ ಈ ರೋಗನಿರೋಧಕ ಲಸಿಕೆಯ ಅಭಿಯಾನವನ್ನು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೈಗೊಳ್ಳಲು ಪಶುಸಂಗೋಪನ ಇಲಾಖೆಯಿಂದ ಸೂಚನೆ ನೀಡಲಾಗಿರುತ್ತದೆ. ಈ ಕಾರ್ಯಕ್ರಮಕ್ಕೆ ಸ್ಥಳೀಯ ಪಶು ವೈದ್ಯರು ಮತ್ತು ಸಿಬ್ಬಂದಿಗಳು ಉಚಿತವಾಗಿ ಲಸಿಕೆಯನ್ನು ನೀಡಲಿದ್ದಾರೆ. ಈ ಲಸಿಕಾ ಕ್ಯಾಂಪುಗಳಲ್ಲೂ ಕೂಡ ರೇಬಿಸ್ ರೋಗ ನಿರೋಧಕ ಲಸಿಕೆ ಉಚಿತವಾಗಿದ್ದು ಕ್ಯಾಂಪುಗಳನ್ನು ನಡೆಸುವ ದಿನಗಳನ್ನು ಸ್ಥಳೀಯ ಗ್ರಾಮ ಪಂಚಾಯತ್ ಗಳಿಂದ ತಿಳಿದುಕೊಂಡು ಲಸಿಕೆ ನೀಡುವ ಸ್ಥಳಗಳಲ್ಲಿ ನಾಯಿ ಮತ್ತು ಬೆಕ್ಕುಗಳನ್ನು ಕರೆದುಕೊಂಡು ಹೋಗಿ ಲಸಿಕೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದು.
ಪಶು ಆಸ್ಪತ್ರೆ ಸುಳ್ಯದಲ್ಲಿ 16.09.2025 ರಿಂದ 30.10.2025 ರವರೆಗೆ ಉಚಿತ ರೇಬಿಸ್ ರೋಗ ನಿರೋಧಕ ಲಸಿಕ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ ಎಂದು
ಸುಳ್ಯ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಿತಿನ್ ಪ್ರಭು ತಿಳಿಸಿದ್ದಾರೆ.










