ಮದುವೆ ನಿರಾಕರಿಸಿದರೆಂಬ ಕಾರಣಕ್ಕೆ ಚೂರಿ ಇರಿತ-ಆರೋಪಿ ಅರೆಸ್ಟ್
ವಿವಾಹಿತೆ ಮಹಿಳೆಯೊಬ್ಬರನ್ನು ಪ್ರೀತಿಸಿ ಆಕೆ ಮದುವೆ ನಿರಾಕರಿಸಿದರೆಂಬ ಕಾರಣಕ್ಕೆ ಪ್ರಿಯತಮ ಆಕೆಗೆ ಚೂರಿ ಇರಿದ ಘಟನೆ ಆಡೂರಿನಲ್ಲಿ ನಡೆದಿದ್ದು ಯುವಕನನ್ನು ಅಡೂರು ಪೋಲೀಸರು ಬಂಧಿಸಿದ್ದಾರೆ.
ಮಂಡೆಕೋಲು ಗ್ರಾಮದ ಕುಂಞಿಕಣ್ಣ ಎಂಬವರ ಪುತ್ರ ಪ್ರತಾಪ್ ಮಣಿಯಾಣಿ (೩೬) ಬಂಧಿತ ಆರೋಪಿ.









ಘಟನೆ ವಿವರ : ಮಂಡೆಕೋಲು ಗ್ರಾಮದ ತೋಟಪ್ಪಾಡಿ ಜಯರಾಜ ಎಂಬವರಿಗೆ ಅಡೂರಿನ ಬಳ್ಳಕಾನ ಕಿಟ್ಟು ನಾಯ್ಕ ಎಂಬವರ ಪುತ್ರಿ ರೇಖಾ ಎಂಬವರೊಂದಿಗೆ ೨೦೧೫ರಲ್ಲಿ ವಿವಾಹ ವಾಗಿತ್ತು. ಈ ದಂಪತಿಗೆ ಒಬ್ಬ ಹೆಣ್ಣು ಮಗಳಿದ್ದಾಳೆ. ಮಗಳನ್ನು ಶಾಲೆಗೆ ತಾಯಿ ಕರೆದುಕೊಂಡು ಹೋಗುವ ಸಂದರ್ಭ ಒಂದು ವರ್ಷದ ಹಿಂದೆ ರೇಖಾರಿಗೆ ಕನ್ಯಾನದ ಪ್ರತಾಪರ ಪರಿಚಯವಾ ಯಿತೆಂದೂ, ಪರಸ್ಪರ ಆಕರ್ಷಿತರಾಗಿದ್ದ ಅವರಿಬ್ಬರು ಪರಸ್ಪರ ಮೊಬೈಲ್‌ನಲ್ಲಿ ಸಂಭಾಷಣೆ ನಡೆಸುತ್ತಿದ್ದರೆನ್ನಲಾಗಿದೆ. ಇದು ಒಂದು ವರ್ಷದ ಹಿಂದೆ ರೇಖಾರ ಗಂಡ ಜಯರಾಜ್‌ರಿಗೆ ಗೊತ್ತಾಗಿ ಅವರು ರೇಖಾರ ಮನೆಯವರಿಗೆ ವಿಷಯ ತಿಳಿಸಿದ್ದರು. ಬಳಿಕ ರೇಖಾ ತಾಯಿ ಮನೆ ಸೇರಿದ್ದರು. ಬಳಿಕ ಈ ಪ್ರಕರಣ ಮಂಡೆಕೋಲು ಗ್ರಾಮ ಪಂಚಾಯತ್ ಸದಸ್ಯರೊಬ್ಬರ ಮುಖಾಂತರ ಮಾತುಕತೆ ನಡೆದು, ಜಯರಾಜ್ ಮನೆ ಬೇರೆ ಮಾಡಿ ದರೆ ನಾನು ಆತನೊಂದಿಗೆ ಇರುವುದಾಗಿ ರೇಖ ಬೇಡಿಕೆ ಇಟ್ಟರೆಂದೂ, ಆದರೆ ಬಳಿಕ ರೇಖ ಮನಸ್ಸು ಬದಲಿಸಿ, ತಾನು ತಾಯಿ ಮನೆಯಲ್ಲೆ ಇರುವುದಾಗಿ ಹೇಳಿದರೆಂದೂ ತಿಳಿದು ಬಂದಿದೆ. ಈ ಬಗ್ಗೆ ಜಯರಾಜ್ ಸುಳ್ಯ ಪೋಲೀಸರಿಗೆ ದೂರು ನೀಡಿದ ಮೇರೆಗೆ ಪೋಲೀಸರು ರೇಖರನ್ನು ಕರೆಸಿ ಮಾತನಾಡಿದ್ದರು. ಆದರೆ ಗಂಡನ ಮನೆಗೆ ಬಂದು ಇರಲು ರೇಖ ಒಪ್ಪಿರಲಿಲ್ಲ. ಬಳಿಕ ಪತ್ನಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿ, ಅದೀಗ ಕಾಸರಗೋಡು ನ್ಯಾಯಾಲಯದಲ್ಲಿ ಅಂತಿಮ ಹಂತದಲ್ಲಿದೆಯೆಂದು ಹೇಳಲಾಗುತ್ತಿದೆ.
ತಾನು ಪ್ರೀತಿಸುತ್ತಿದ್ದ ರೇಖಾರೊಡನೆ ಕಳೆದ ವಾರ ಪ್ರತಾಪ್ ಮದುವೆಯ ಪ್ರಸ್ತಾಪ ಮುಂದಿಟ್ಟರೆಂದೂ, ಆದರೆ ಆಕೆ ಮದುವೆಗೆ ನಿರಾಕರಣೆ ತೋರಿದ ರೆನ್ನಲಾಗಿದೆ. ಇದರಿಂದ ಕ್ರುದ್ಧನಾದ ಪ್ರತಾಪ್ ಸೆ.೮ರಂದು ರೇಖಾ ಅಡೂರಿ ನಿಂದ ಕೆಲಸ ಮುಗಿಸಿ ಸಂಜೆ ಮನೆಗೆ ಹೋಗುತ್ತಿದ್ದಾಗ ಆಕೆಯನ್ನು ಹಿಂಬಾಲಿಸಿ ಆಕೆಯ ಕುತ್ತಿಗೆಗೆ ಚೂರಿಯಿಂದ ಇರಿದು ಗಾಯಗೊಳಿಸಿದನು. ಆಕೆ ನೆಲಕ್ಕೆ ಬಿದ್ದಾಗ ಪ್ರತಾಪ ಓಡಿದನೆನ್ನಲಾಗಿದೆ. ಗಾಯಗೊಂಡ ರೇಖಾರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಗಂಭೀರ ಆಗಿರದ ಕಾರಣದಿಂದ ಚಿಕಿತ್ಸೆ ಪಡೆದು ಮನೆಗೆ ಹಿಂತಿರುಗಿದರು.
ಆದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಅವರು ಆರೋಪಿಯನ್ನು ಬಂಧಿಸಿದ್ದಾರೆ.










