ಹಳೆ ಸಿ.ಸಿ ಕ್ಯಾಮರ, ಮೈಕ್ ಸೈಟ್, ಇನ್ವರ್ಟರ್ ಎಲ್ಲಿದೆ ? : ಪ್ರತಿಭಟನೆಯಲ್ಲಿ ಆಕ್ರೋಶ
ಕಳ್ಳತನ ಮಾಡಿದವರ ವಿರುದ್ಧ, ಸಿ.ಸಿ ಕ್ಯಾಮರಾ ದುರುಪಯೋಗ ಮಾಡಿದವರ ಮೇಲೆ ಕ್ರಮಕ್ಕೆ ಆಗ್ರಹ : ದೂರು ನೀಡಲು ನಿರ್ಧಾರ
ಜಯಶ್ರೀ ಚಾಂತಾಳ, ಅಶ್ವಥ್ ಯಲದಾಳು ಗ್ರಾ.ಪಂ ಸದಸ್ಯತ್ವಕ್ಕೆ ರಾಜೀನಾಮೆ

ಕೊಲ್ಲಮೊಗ್ರು ಹಾಗೂ ಕಲ್ಮಕಾರು ಗ್ರಾಮಗಳನ್ನೊಳಗೊಂಡ ಭ್ರಷ್ಟಾಚಾರ ವಿರುದ್ದ ಹೋರಾಟಕ್ಕಾಗಿ ಹುಟ್ಟಿಕೊಂಡಿರುವ ನ್ಯಾಯಕ್ಕಾಗಿ ಹೋರಾಡೋಣ ಸಮಿತಿ ವತಿಯಿಂದ ಇಂದು ಕೊಲ್ಲಮೊಗ್ರು ಗ್ರಾ.ಪಂ ಎದುರು ಪ್ರತಿಭಟನೆ ನಡೆಯಿತು.
ಕೊಲ್ಲಮೊಗ್ರು ಗ್ರಾ.ಪಂ. ಸಿಬ್ಬಂದಿ ಕಳವು ಆರೋಪದ ಬಗ್ಗೆ ಪೊಲೀಸ್ ದೂರು ನೀಡದೆ ಸೂಕ್ತ ತನಿಖೆ ನಡೆಸದೆ ಗ್ರಾ.ಪಂ ಆಡಳಿತ ತಪ್ಪು ಎಸಗಿರುವ ಬಗ್ಗೆ ಹಾಗೂ ಕೊಲ್ಲಮೊಗ್ರು ಪೇಟೆಯ ಸಾರ್ವಜನಿಕ ಸ್ಥಳಗಳಲ್ಲಿ ಸಿ.ಸಿ ಕ್ಯಾಮರಾ ಗ್ರಾ.ಪಂ ಅಳವಡಿಸಿ ಸಾರ್ವಜನಿಕರ ಗೌಪ್ಯತೆ ಬಗ್ಗೆ ದುರುಪಯೋಗ ನಡೆಸಿರುವ ಕುರಿತು ಪ್ರತಿಭಟನೆ ಮಾಡಿದ ನಾಗರಿಕರು ಕೊಲ್ಲಮೊಗ್ರು ಪೇಟೆಯಿಂದ ಬ್ಯಾನರ್ ಹಿಡಿದು ಘೋಷಣೆ ಕೂಗುತ್ತಾ ಗ್ರಾ.ಪಂ ಬಳಿ ಬಂದರು, ಬಳಿಕ ಆಡಳಿತದ ವಿರುದ್ಧ ಗ್ರಾ.ಪಂ ಎದುರು ಘೋಷಣೆ ಕೂಗಿದರು.
















ಪಂಚಾಯತ್ ನಲ್ಲಿದ್ದ ಹಳೆ ಸಿ.ಸಿ ಕ್ಯಾಮರಾ, ಹಳೆ ಮೈಕ್ ಸೆಟ್, ಇನ್ವರ್ಟರ್ ನಾಪತ್ತೆಯಾಗಿದ್ದು ಇದನ್ನು ಗ್ರಾ.ಪಂ. ಮುಂದೆ ತಂದಿಡುವಂತೆ ಆಗ್ರಹಿಸಿದರು. ಪಂಚಾಯತ್ ಸಿಬ್ಬಂದಿ ಸಂತೋಷ್ ಅವರನ್ನು ಕರೆಸಿ ಉತ್ತರಿಸುವಂತೆ ಆಗ್ರಹಿಸಿದರು. ಸಭೆಗೆ ಗ್ರಾ.ಪಂ ಅಧ್ಯಕ್ಷೆ ಮೋಹಿನಿ, ಸದಸ್ಯರಾದ ಅಶ್ವಥ್ ಯಲದಾಳು, ಬಾಲಸುಬ್ರಹ್ಮಣ್ಯ ಭಟ್, ಜಯಶ್ರೀ ಚಾಂತಾಳ, ಪಿ.ಡಿ.ಒ ಚೆನ್ನಪ್ಪ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ಸಭೆಯಲ್ಲೇ ಇದ್ದ ಗ್ರಾ.ಪಂ ಸದಸ್ಯೆ
ಜಯಶ್ರೀ ಚಾಂತಾಳ, ಅಶ್ವಥ್ ಯಲದಾಳು ಗ್ರಾ.ಪಂ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷ ಮಾಧವ ಚಾಂತಾಳ ಅವರ ಮೇಲೆ ಕೇಸು ದಾಖಲಿಸುವಂತೆ ಆಗ್ರಹಿಸಿದರು. ಕೊನೆಗೆ ಗ್ರಾ.ಪಂ ವತಿಯಿಂದ ದೂರು ನೀಡುವ ನಿರ್ಧಾರ ಪ್ರಕಟಿಸಿದ ಮೇಲೆ ಪ್ರತಿಭಟನೆ ಕೊನೆಗೊಂಡಿತು.

ಹರಿಪ್ರಸಾದ್ ಮಲ್ಲಾಜೆ ಸ್ವಾಗತಿಸಿದರು, ಸತೀಶ್ ಟಿ.ಎನ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಶೇಖರ್ ಅಂಬೆಕಲ್ಲು, ಉದಯ ಶಿವಾಲ, ಮಣಿಕಂಠ ಕೊಳಗೆ, ಪ್ರದೀಪ್ ಕುಂಞೆಟ್ಟಿ ಸೇರಿ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.










