ರಾಜಧಾನಿ ದೆಹಲಿಯಲ್ಲಿ ಯಕ್ಷಧ್ರುವ ಪಟ್ಲ ದಶಮ ಸಂಭ್ರಮ : ಶಾಸಕಿ ಭಾಗೀರಥಿ ಮುರುಳ್ಯ ಸಹಿತ ಗಣ್ಯರು ಭಾಗಿ

0

ನೂರಕ್ಕೂ ಮಿಕ್ಕಿ ಮಹಿಳೆಯರಿಂದ ನಾಡಗೀತೆ ಹಾಗೂ ಕೀಚಕ ವಧೆ ಯಕ್ಷಗಾನ ಪ್ರದರ್ಶನ

ಕರಾವಳಿಯ ಗಂಡುಕಲೆಯೆಂದೇ ಪ್ರಸಿದ್ಧವಾದ ಯಕ್ಷಗಾನ ಕ್ಷೇತ್ರದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಅಶಕ್ತ ಕಲಾವಿದರ ಬದುಕಿನ ಭರವಸೆಯ ಬೆಳಕನ್ನು ಮೂಡಿಸುವ ನಿಟ್ಟಿನಲ್ಲಿ 10 ವರ್ಷಗಳ ಹಿಂದೆ ಮಂಗಳೂರಿನಲ್ಲಿ ಪಟ್ಲ ಸತೀಶ್‌ ಶೆಟ್ಟಿಯವರು ಸ್ಥಾಪಿಸಿದ ಸಂಸ್ಥೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ ಗೆ ಇದೀಗ ದಶಮ ಸಂಭ್ರಮ. ಈ ದಶಮ ಸಂಭ್ರಮವನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದರ ದೆಹಲಿ ಘಟಕ ಬಂಟ್ಸ್‌ ಕಲ್ಚರಲ್‌ ಅಸೋಸಿಯೇಶನ್‌, ನವದೆಹಲಿ ಸಹಯೋಗದಲ್ಲಿ ಅ.2 ರಂದು ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ದಶಮ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಂಡಿದೆ.

ಈ ಕಾರ್ಯಕ್ರಮವನ್ನು ನವದೆಹಲಿ ಕ್ಷೇತ್ರದ ಸಂಸದೆ ಬಾನ್ಸುರಿ ಸ್ವರಾಜ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಭಾಗೀರಥಿ ಮುರುಳ್ಯ, ಸುಳ್ಯ ಕ್ಷೇತ್ರ ಶಾಸಕಿ ಎಚ್. ರಾಜೇಶ್ ಪ್ರಸಾದ್ ಐಎಎಸ್., ಪ್ರಿನ್ಸಿಪಲ್ ಸೆಕ್ರೆಟರಿ, ಜಮ್ಮು ಮತ್ತು ಕಾಶ್ಮೀರ ಸರ್ಕಾರ, ಡಾ. ಕನ್ಯಾನ ಸದಾಶಿವ ಶೆಟ್ಟಿ ಸಿಎಂಡಿ, ಹೇರಂಭ ಇಂಡಸ್ಟ್ರೀಸ್‌ ಲಿ., ಮತ್ತು ಕೆಮಿನೊ ಫಾರ್ಮ ಲಿ. ಮುಂಬೈ, ಶಶಿಧರ ಶೆಟ್ಟಿ ಬರೋಡಾ, ಉದ್ಯಮಿಗಳು, ನಿರ್ಮಾಪಕರು, ಸು ಫ್ರಮ್ ಸೋ ಚಲನಚಿತ್ರ, ಜಯರಾಮ್ ಬನಾನ್, ಉದ್ಯಮಿಗಳು ಮತ್ತು ಸಮಾಜ ಸೇವಕರು, ವಿವೇಕ್ ಅಗರ್‌ವಾಲ್, ವ್ಯವಸ್ಥಾಪಕ ನಿರ್ದೇಶಕರು, ಕ್ಯಾಪಿಟಲ್ ವೆಂಚರ್‍ಸ್‌ ಪ್ರೈವೇಟ್‌ ಲಿ. ದೀಪ್ತಿ ಶರ್ಮಾ, ನಿರ್ದೇಶಕರು, ಸೆಂಚುರಿ ಕ್ರೇನ್ ಇಂಜಿನಿಯರ್‍ಸ್‌ ಪ್ರೈವೇಟ್‌ ಲಿ., ಹಾಗೂ ಗೌರವ ಉಪಸ್ಥಿತರಾಗಿ ಸುರೇಶ್ ಶೆಟ್ಟಿ, ಅಧ್ಯಕ್ಷರು, ಬಂಟ್ಸ್ ಕಲ್ಚರಲ್ ಅಸೋಸಿಯೇಶನ್, ನವದೆಹಲಿ, ಟಿ. ಶಿವಪ್ರಸಾದ್ ಶೆಟ್ಟಿ, ಗೌರವ ಅಧ್ಯಕ್ಷರು, ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್, ದೆಹಲಿ ಘಟಕ, ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್, ಮಂಗಳೂರಿನ ಕಾರ್ಯದರ್ಶಿ ಪುರುಷೋತ್ತಮ ಕೆ. ಭಂಡಾರಿ, ಖಜಾಂಚಿ ಚಾರ್ಟರ್ಡ್‌ ಅಕೌಂಟೆಂಟ್‌ ಸುದೇಶ್ ಕುಮಾರ್ ರೈ, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ.ಎಂ. ನಾಗರಾಜ ಮತ್ತು ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.

ಯಕ್ಷಲೋಕದಲ್ಲಿ ’ರಂಗಸ್ಥಳದ ರಾಜ’ ಎಂದೇ ಪ್ರಸಿದ್ಧವಾಗಿರುವ ಹಿರಿಯ ಕಲಾವಿದ ರಾಧಾಕೃಷ್ಣ ನಾವಡರಿಗೆ ಪಟ್ಲ ಫೌಂಡೇಶನ್ ದೆಹಲಿ ಘಟಕದ ವತಿಯಿಂದ ಸನ್ಮಾನಿತರಾಗಲಿದ್ದಾರೆ ಹಾಗೂ ಯಕ್ಷಲೋಕದ ಪ್ರಸಿದ್ಧ ಕಲಾವಿದರಿಂದ ’ಕೀಚಕ ವಧೆ’ ಯಕ್ಷಗಾನ ಕಥಾ ಪ್ರಸಂಗ ನಡೆಯಲಿದೆ ಹಾಗೂ ಕಾರ್ಯಕ್ರಮದ ಪ್ರಾರಂಭ ಕುವೆಂಪು ವಿರಚಿತ ನಾಡಗೀತೆ ’ಜಯ ಭಾರತ ಜನನಿಯ ತನುಜಾತೆ’ ನೂರು ತುಂಬಿದ ಸಂದರ್ಭದಲ್ಲಿ ನೂರಕ್ಕೂ ಮಿಕ್ಕಿ ದೆಹಲಿಯ ಸ್ಥಳೀಯ ಮಹಿಳೆಯರಿಂದ ನಾಡಗೀತೆ ವಿಶೇಷವಾಗಲಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌, ದೆಹಲಿ ಘಟಕದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಂಗಸ್ಥಳದ ರಾಜ-ರಾಧಾಕೃಷ್ಣ ನಾವಡರಿಗೆ ರಾಷ್ಟ್ರದ ರಾಜಧಾನಿಯಲ್ಲಿ ಗೌರವ ಸನ್ಮಾನ

ಯಕ್ಷಲೋಕದಲ್ಲಿ ’ರಂಗಸ್ಥಳದ ರಾಜ’ ಎಂದೇ ಪ್ರಸಿದ್ಧವಾಗಿರುವ ಹಿರಿಯ ಕಲಾವಿದ ರಾಧಾಕೃಷ್ಣ ನಾವಡರಿಗೆ ಪಟ್ಲ ಫೌಂಡೇಶನ್ ದೆಹಲಿ ಘಟಕದ ವತಿಯಿಂದ ಅಕ್ಟೋಬರ್ 2 ದೆಹಲಿಯಲ್ಲಿ ಸನ್ಮಾನಿಸಲಾಗುವುದು ಎಂದು ಪಟ್ಲ ಫೌಂಡೇಶನ್‌ನ ದೆಹಲಿ ಘಟಕದ ಅಧ್ಯಕ್ಷ ಹಾಗೂ ದೆಹಲಿ ತುಳುಸಿರಿ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ತಿಳಿಸಿದ್ದಾರೆ.

ತೆಂಕಿನ ಹಲವಾರು ಮೇಳಗಳಲ್ಲಿ ನಲುವತ್ತೆರಡು ವರ್ಷಗಳಿಂದ ನಿರಂತರವಾಗಿ ಯಕ್ಷಕಲಾ ಸೇವೆ ನಡೆಸುತ್ತಾ ಬಂದಿರುವ ನಾವಡರು ಬಹು ಬೇಡಿಕೆಯ ಕಲಾವಿದ. ಪ್ರಸ್ತುತ ಪಾವಂಜೆ ಮೇಳದಲ್ಲಿ ಹಾಗೂ ಬಪ್ಪನಾಡು ಮೇಳದಲ್ಲಿ ಕಲಾ ವ್ಯವಸಾಯ ಮಾಡುತ್ತಿದ್ದಾರೆ. ಕಂಸ, ಕರ್ಣ, ರಾವಣ, ಇಂದ್ರಜಿತು, ಭಸ್ಮಾಸುರ, ಕಾರ್ತವೀರ್ಯ,ಶಿಶುಪಾಲ, ದಕ್ಷ,,ರಕ್ತಬೀಜ ಹೀಗೆ ಹಲವಾರು ಎದುರುವೇಷಗಳಲ್ಲಿ ಎತ್ತಿದ ಕೈ. ಯಾವುದೇ ರೀತಿಯ ರಾಜವೇಷ, ನಾಟಕೀಯ ವೇಷಗಳಲ್ಲಿ ತಮ್ಮ ಸ್ವರಗಾಂಭೀರ್ಯ, ಲಯಬದ್ಧ ನೃತ್ಯ, ವೇಷದ ಗತ್ತು ಗಾಂಭೀರ್ಯದ ಜೊತೆ ಪೂರಕ ಮಾತುಗಾರಿಕೆ, ಅವರ ಆಳಂದಕ್ಕೆ ಒಪ್ಪುವುದರೊಂದಿಗೆ, ಬಪ್ಪನಾಡು ಕ್ಷೇತ್ರ ಮಹಾತ್ಮೆಯ ’ಬಪ್ಪ ಬ್ಯಾರಿ’ಯಂತಹ ಪಾತ್ರ ನಿರ್ವಹಣೆ ಎಷ್ಟು ಸಹಜ ಮತ್ತು ಪ್ರಭಾವಕಾರಿ ಎಂದರೆ, ಅವರು ನೀಡಿದ 500ಕ್ಕೂ ಹೆಚ್ಚಿನ ಪ್ರದರ್ಶನಗಳು ಕನ್ನಡ-ತುಳು-ಮತ್ತು ಬ್ಯಾರೀ ಭಾಷಾ ಸಾಮರಸ್ಯಕ್ಕೆ ಒಂದು ಜೀವಂತ ನಿದರ್ಶನವಾಗಿದೆ. ಈ ಪಾತ್ರವನ್ನು ಮಾಡಿದ ರಾಧಾಕೃಷ್ಣ ನಾವಡರು 2020ರಲ್ಲಿ ಕರ್ನಾಟಕ ಬ್ಯಾರೀ ಭಾಷಾ ಅಕಾಡೆಮಿಯ ಸದಸ್ಯರಾದುದು ಯಕ್ಷಗಾನಕ್ಕೆ ಸಂದ ಗೌರವ. ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಯೂ-ಟ್ಯೂಬ್‌ನಲ್ಲಿ ಆಗಿರುವುದು ಇವರ ಜನಪ್ರಿಯತೆಗೆ ಸಾಕ್ಷಿ.

ಕನ್ನಡ, ತುಳು ಮಾತ್ರವಲ್ಲ, ಹಿಂದೀ ಯಕ್ಷಗಾನದಲ್ಲೂ ಅವರ ಭಸ್ಮಾಸುರ ಉತ್ತರ ಭಾರತಲ್ಲೆಲ್ಲ ಅತ್ಯಂತ ಜನಪ್ರಿಯವಾಗಿದೆ. ದೇಶದ ಹಲವಾರು ರಾಜ್ಯಗಳಲ್ಲಿ ತಮ್ಮ ಕಲಾ ಪ್ರೌಢಿಮೆಯನ್ನು ತೋರಿಸಿದರೂ, ರಂಗದ ಹೊರಗೆ ಅತ್ಯಂತ ಸೌಮ್ಯಸ್ವಭಾವದ, ತಾನಾಯಿತು ತನ್ನ ಕೆಲಸವಾಯಿತು ಎಂದು ಇರುವ ರಾಧಾಕೃಷ್ಣ ನಾವಡರು, ಕಲಾಲೋಕದಲ್ಲಿ ’ರಾಧಣ್ಣ’ ಆಗಿಯೇ ಜನಪ್ರಿಯರು. ಸಹಕಲಾವಿದರಿಗೆ ಪೂರಕರಾಗಿ, ಆಯೋಜಕರಿಗೆ ಅನುಕೂಲಿಗರಾಗಿ, ಕಲಾಪ್ರೇಮಿಗಳಿಗೆ ನೆಚ್ಚಿನವರಾಗಿರುವ ರಾಧಾಕೃಷ್ಣ ನಾವಡರಿಗೆ ದೆಹಲಿ ಕರ್ನಾಟಕ ಸಂಘದ ಆವರಣದಲ್ಲಿ ನಡೆಯಲಿರುವ ಸನ್ಮಾನವು ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ದಶಮಾನೋತ್ಸವದ ದೆಹಲಿ ಕಾರ್ಯಕ್ರಮದ ಬಹುಮುಖ್ಯ ಅಂಗವಾಗಿದೆ.

 ವಸಂತ ಶೆಟ್ಟಿ ಬೆಳ್ಳಾರೆ

ಅಧ್ಯಕ್ಷರು
ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌, ದೆಹಲಿ ಘಟಕ