ಸಂಬಂಧಪಟ್ಟ ಇಂಜಿನೀಯರ್ ಗಳು ಹಾಗೂ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಸದಸ್ಯ ವೆಂಕಪ್ಪ ಗೌಡರ ಪಟ್ಟು
ನಿರ್ಣಯ ಕೈಗೊಂಡ ಬಳಿಕ ಸಾಮಾನ್ಯ ಸಭೆ ಆರಂಭ
ಸುಳ್ಯದಲ್ಲಿ ನಡೆಯುತ್ತಿರುವ ಅಮೃತ 2 ಯೋಜನೆ ಸುಮಾರು 58 ಕೋಟಿ ರೂ ಗಳ ಕಾಮಗಾರಿ
ಈ ಕಾಮಗಾರಿ ಸಮರ್ಪಕವಾಗಿ ನಡೆಯದೆ ಇರುವ ಕಾರಣ ಇಂದು ನಗರದಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ. ರಸ್ತೆಗಳ ಅವ್ಯವಸ್ಥೆ ಹಾಗೂ ಕುರುಂಜಿ ಗುಡ್ಡೆಯಲ್ಲಿ ನಿರ್ಮಾಣವಾದ ನೀರಿನ ನೂತನ ಟ್ಯಾಂಕಿ ಸೋರುವಿಕೆ ಮುಂತಾದ ವಿಷಯಗಳ ಕುರಿತು ಚರ್ಚೆ ಮಾಡಲು ಸಂಭಂದ ಪಟ್ಟ ಇಂಜಿನಿಯರ್ ಹಾಗೂ ಗುತ್ತಿಗೆದಾರರನ್ನು ಪಂಚಾಯತ್ ಸಭೆಗೆ ಬರುವಂತೆ ಈ ಮೊದಲು ಅನೇಕ ಸಭೆಗಳಲ್ಲಿ ಎಷ್ಟೇ ಹೇಳಿದರೂ ಅವರು ಬರುತ್ತಿಲ್ಲ.

ಅಲ್ಲದೆ ಅವರನ್ನು ಸಭೆಗೆ ಬರಿಸಲು ನಮ್ಮ ಅಧಿಕಾರಿಗಳಿಗೆ ಆಗುತ್ತಿಲ್ಲ. ಅವರು ಬಾರದೆ ಈ ಸಮಸ್ಯೆಗಳು ಪರಿಹಾರನೂ ಆಗುವುದಿಲ್ಲ. ಇದರಿಂದಾಗಿ ಓರ್ವ ಜನಪ್ರತಿನಿಧಿಯಾಗಿ ಸುಳ್ಯದ ಜನತೆಯ ಮುಂದೆ ನಾವುಗಳು ನಿಲ್ಲಲು ಸಾಧ್ಯವಾಗುತಿಲ್ಲ. ನಮಗೆ ನಮ್ಮ ಅವಧಿಯಲ್ಲಿ ಒಂದೇ ಒಂದು ಸಭೆ ಉಳಿದಿದೆ. ಪಂಚಾಯತ್ ನ ಅಧ್ಯಕ್ಷರು ಹಾಗೂ ಸದಸ್ಯರುಗಳು, ನಮ್ಮ ಅಧಿಕಾರಿಗಳು ಎಷ್ಟೇ ಕೇಳಿಕೊಂಡರು ಸಂಬಂಧಪಟ್ಟ ಇಂಜಿನೀಯರ್ ಆಗಲಿ ಅಥವಾ ಗುತ್ತಿಗೆದಾರರಾಗಲಿ ಕೋರಿಕೆಯನ್ನು ಗಣನೆಗೆ ತೆಗೆದುಕೊಳ್ಳದೆ ಸಭೆಗೆ ತಪ್ಪಿಸುವ ಮೂಲಕ ಅವರು ಬೇಜವಾಬ್ದಾರಿ ವರ್ತನೆ ಮಾಡುತ್ತಿದ್ದಾರೆ.
ಆದ್ದರಿಂದ ಅವರನ್ನು ಬ್ಲಾಕ್ ಲೀಸ್ಟ್ ಗೆ ಸೇರಿಸುವ ನಿರ್ಣಯವನ್ನು ಈ ಸಭೆ ತೀರ್ಮಾನ ಕೈಗೊಳ್ಳಬೇಕು. ನಂತರ ಇಂದಿನ ಅಜೆಂಡಾ ಬಗ್ಗೆ ಚರ್ಚೆ ಆರಂಭ ಮಾಡೋಣ ಇಲ್ಲದಿದ್ದಲ್ಲಿ ಇಂದಿನ ಸಭೆ ಮಾಡಬೇಡಿ. ಮಾಡಿದರು ನಾವು ವಿರೋಧ ಪಕ್ಷದವರು ಸಭಾ ತ್ಯಾಗ ಮಾಡುವುದಾಗಿ ವಿಪಕ್ಷ ಸದಸ್ಯ ಎಂ ವೆಂಕಪ್ಪ ಗೌಡರು ಪಟ್ಟು ಹಿಡಿದು, ಅಧ್ಯಕ್ಷರು ಹಾಗೂ ಮುಖ್ಯ ಅಧಿಕಾರಿಗಳು ಇದಕ್ಕೆ ಸಂಬಂಧಪಟ್ಟ ಇಂಜಿನೀಯರ್ ಗಳು ಮೈಸೂರಿನಲ್ಲಿ ಯಾವುದೋ ಸಭೆ ಇರುವ ಕಾರಣ ಬರಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ಎರಡು ದಿನಗಳ ಬಳಿಕ ಅವರನ್ನು ಕರೆಸಿ ವಿಶೇಷ ಸಭೆ ಮಾಡುವ ಭರವಸೆಯನ್ನು ಕೂಡ ಅಧ್ಯಕ್ಷರು ಮತ್ತು ಮುಖ್ಯ ಅಧಿಕಾರಿಗಳು ನೀಡಿದರು ಅದು ಯಾವುದಕ್ಕೂ ವೆಂಕಪ್ಪಗೌಡರು ಒಪ್ಪದೇ ಇದ್ದಾಗ ಕೊನೆಗೆ ನಿರ್ಣಯ ಕೈಗೊಳ್ಳುವ ತೀರ್ಮಾನವನ್ನು ಸಭೆಯಲ್ಲಿ ಕೈಗೊಂಡ ಬಳಿಕ ಪಂಚಾಯತ್ ಸಾಮಾನ್ಯ ಸಭೆ ಆರಂಭವಾದ ಘಟನೆ ಸೆ 30 ರಂದು ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆಯಿತು.
ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ರವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು.
ವೇದಿಕೆಯಲ್ಲಿ ನ. ಪಂಚಾಯತ್ ಉಪಾಧ್ಯಕ್ಷರಾದ ಬುದ್ಧ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಿಶೋರಿ ಶೇಟ್, ಮುಖ್ಯ ಅಧಿಕಾರಿ ಬಸವರಾಜ್ ಉಪಸ್ಥಿತರಿದ್ದರು.
ಸದಸ್ಯರಾದ ಕೆ ಎಸ್ ಉಮರ್ ರವರು ಮಾತನಾಡಿ ‘ಇತ್ತೀಚಿಗೆ ಸುಳ್ಯದ ಕುರುಂಜಿ ಭಾಗ್ ನಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಶಟಲ್ ಬ್ಯಾಡ್ಮೆಂಟನ್ ಪಂದ್ಯಾಕೂಟದಲ್ಲಿ ಆಯೋಜಕರು ನಗರ ಪಂಚಾಯತ್ ಹೆಸರನ್ನು ಉಲ್ಲೆಖಿಸದೆ ತಮ್ಮದೇ ಆದ ಹೆಸರನ್ನು ಬಳಸಿ ಪಂದ್ಯಾಟ ನಡೆಸುವ ಮೂಲಕ ಪಂಚಾಯತ್ ನ ನಿರ್ಭಂದನೆಗಳನ್ನು ಗಾಳಿಗೆ ತೂರಿರುವುದು ಕಂಡುಬಂದಿದೆ. ಈ ಬಗ್ಗೆ ವಿವರವನ್ನು ಕೇಳಿ ನಾನು ಪಂಚಾಯತ್ ಮುಖ್ಯ ಅಧಿಕಾರಿಗಳಿಗೆ ಪತ್ರ ಬರೆದಿದ್ದೆ. ಆದರೆ ಪತ್ರ ಬರೆದು ಒಂದು ವಾರವೇ ಕಳೆಯಿತು ಇವರಿಗೆ ಉತ್ತರ ನೀಡಲಿಲ್ಲ. ಇಷ್ಟೊಂದು ಹಣ ಪಂಚಾಯತ್ ನಿಂದ ಖರ್ಚು ಮಾಡಿ ಕ್ರೀಡಾಂಗಣ ನಿರ್ಮಿಸಿ ಬೇರೆ ಯಾರೋ ಅದನ್ನು ಅವರಿಗೆ ಬೇಕಾದ ರೀತಿಯಲ್ಲಿ ಬಳಸುತ್ತಿದ್ದಾರೆ. ಆದ್ದರಿಂದ ಅದರ ಸಂಪೂರ್ಣ ಮಾಹಿತಿ ಈ ಸಭೆಗೆ ಈಗಲೇ ತರಿಸುವಂತೆ ಉಮರ್ ರವರು ಪಟ್ಟು ಇಡಿದರು. ಅವರಿಗೆ ನೀಡಿರುವ ಅಗ್ರಿಮೆಂಟ್ ಕಾಪಿಯನ್ನು ತರಿಸಿ ಮತ್ತು ಬಾಡಿಗೆ ಬಂದ ಬಗ್ಗೆ ಮಾಹಿತಿಯನ್ನು ನೀಡಿ ಎಂದು ಶರೀಫ್ ಕಂಠಿ ಸೇರಿದಂತೆ ಇತರ ಸದಸ್ಯರುಗಳು ಅವರ ಜೊತೆ ಸೇರಿಕೊಂಡರು.
ಈ ಸಂಧರ್ಭದಲ್ಲಿ ಮುಖ್ಯ ಅಧಿಕಾರಿ ಮಾತನಾಡಿ ಆ ರೀತಿಯ ಸಮಸ್ಯೆ ಆಗಿದ್ದಲ್ಲಿ ಅದನ್ನು ಬೀಗ ಹಾಕಿ ಬರುವುದು ಉತ್ತಮ ಎಂದು ಹೇಳಿದರು. ಈ ವೇಳೆ ವೆಂಕಪ್ಪ ಗೌಡರು ಮಾತನಾಡಿ ಏಕಾಏಕಿ ಬೀಗ ಹಾಕುವ ಬಗ್ಗೆ ಮಾತನಾಡುವುದು ಬೇಡ. ಮೊದಲು ಅವರಿಗೆ ಪತ್ರದ ಮೂಲಕ ಸೂಚನೆಯನ್ನು ನೀಡಿ ಅದರ ಬಗ್ಗೆ ಅವರಿಂದ ಉತ್ತರವನ್ನು ಪಡೆಯೋಣ ಎಂದು ಹೇಳಿದರು.
ಬಳಿಕ ಸಭೆಯಲ್ಲಿ ನಿರ್ಣಯ ಮಂಡಿಸಿ ಅದರ ಬಗ್ಗೆ ಸಂಪೂರ್ಣ ಜವಾಬ್ದಾರಿಯನ್ನು ಪಂಚಾಯತ್ ವಹಿಸಿಕೊಳ್ಳುವಂತೆ ಅಲ್ಲದೆ ಯಾವುದೇ ಕ್ರೀಡಾ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ಪಂಚಾಯತ್ ನ ಅವರ ಗಮನಕ್ಕೆ ತರುವುದು ಮತ್ತು ಅದಕ್ಕೆ ನಿಗದಿಪಡಿಸಿರುವಂತಹ ಬಾಡಿಗೆ ಮೊತ್ತವನ್ನು ಸೂಕ್ತ ಸಮಯದಲ್ಲಿ ಪಾವತಿಸುವಂತೆ ಮಾಡುವುದು ಮುಂತಾದ ನಿರ್ಭಂದನೆಗಳನ್ನು ನಿರ್ಣಯ ಮೂಲಕ ಬರೆಯಲಾಯಿತು.
ಕಳೆದ 4,5 ಮಾಸಿಕ ಸಭೆಗಳಿಂದ ಪಂಚಾಯತ್ ನ ಖರ್ಚು ವೆಚ್ಚದ ಬಗ್ಗೆ ಮಾಹಿತಿಗಳನ್ನು ನೀಡುತ್ತಿಲ್ಲ ಕೆ ಎಸ್ ಉಮ್ಮರ್ : ಕಳೆದ 45 ತಿಂಗಳುಗಳಿಂದ ಪಂಚಾಯತಿನಲ್ಲಿ ನಡೆಯುವ ಯಾವುದೇ ಖರ್ಚು ವೆಚ್ಚವನ್ನು ಸಭೆಯಲ್ಲಿ ಮಂಡಿಸುತ್ತಿಲ್ಲ ಏಕೆ ಮಂಡಿಸುತ್ತಿಲ್ಲ ಎಂದು ಉಮ್ಮರ್ ರವರು ಮುಖ್ಯ ಅಧಿಕಾರಿಯನ್ನು ಪ್ರಶ್ನಿಸಿ, ನೀವು ಬಂದ ನಂತರವೂ ಕೂಡ ಯಾವುದೇ ಖರ್ಚು ವೆಚ್ಚವನ್ನು ತೋರಿಸುತ್ತಿಲ್ಲ ಏಕೆ ಎಂದು ಕೇಳಿದರು. ಮಾಡುವ ಕೆಲಸ ಕಾರ್ಯಗಳೆಲ್ಲಾ ಯಾರ ಅನುಮೋದನೆಯ ಮೂಲಕ ಮಾಡುತ್ತಿದ್ದೀರಿ ಮತ್ತು ಇದಕ್ಕೆ ಎಲ್ಲಿಂದ ಹಣವನ್ನು ಬಳಸುತ್ತಿದ್ದೀರಿ. ಎಂದು ಮುಖ್ಯ ಅಧಿಕಾರಿಗಳನ್ನು ಕೇಳಿದಾಗ ಇದಕ್ಕೆ ಮುಖ್ಯ ಅಧಿಕಾರಿಯವರು ಉತ್ತರಿಸಿ ನಿನ್ನೆ ನಡೆದ ಸ್ಥಾಯಿ ಸಮೀತಿ ಸಭೆಯಲ್ಲಿ ಖರ್ಚು ವೆಚ್ಚದ ಬಗ್ಗೆ ವರದಿ ನೀಡಲಾಗಿದೆ ಎಂದು ಹೇಳಿದರು.















ಅದಕ್ಕೆ ಉಮ್ಮರ್ ರವರು ಅಲ್ಲಿ ನಗರ ಪಂಚಾಯತಿನ ಅಧ್ಯಕ್ಷರು ಮತ್ತು ಇನ್ನಿತರ ಸದಸ್ಯರುಗಳು ಇರುವುದಿಲ್ಲ.ಅಲ್ಲದೆ ಖರ್ಚು ವೆಚ್ಚದ ಲೆಕ್ಕಾಚಾರವನ್ನು ಸಾಮಾನ್ಯ ಸಭೆಯಲ್ಲಿ ಮಂಡಿಸಬೇಕು ಎಂದು ಹೇಳಿದರು. ಈ ಪ್ರಶ್ನೆ ಕೇಳಿದ ಕೆಲ ಗಂಟೆಗಳ ಬಳಿಕ ಖರ್ಚು ವೆಚ್ಚದ ಪಟ್ಟಿಯನ್ನು ಸದಸ್ಯರಿಗೆ ವಿತರಿಸಿದ ಘಟನೆಯೂ ನಡೆಯಿತು.
ಆಡಳಿತ ವೈಫಲ್ಯದಿಂದಲೇ ನಗರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ: ಶರೀಫ್ ಕಂಠಿ
ನಗರ ಪಂಚಾಯತ್ ನಲ್ಲಿ ಆಡಳಿತ ಪಕ್ಷದವರ ಆಡಳಿತ ವೈಫಲ್ಯದಿಂದಾಗಿ ಸುಳ್ಯದ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ. ಅಲ್ಲದೆ ಯಾವುದೇ ಕೆಲಸ ಕಾರ್ಯಗಳು ಸಭೆಯಲ್ಲಿ ಮಂಡಿಸಿದ ಮತ್ತು ನಿರ್ಣಯಿಸಿದ ಪ್ರಕಾರ ನಡೆಯುತ್ತಿಲ್ಲ. ಗಾಂಧಿನಗರದ ಕಡೆಗೆ ಹೋಗಲು ಸಾಧ್ಯವಾಗುತ್ತಿಲ್ಲ ರಸ್ತೆಗಳಲ್ಲಿ ದೊಡ್ಡ ದೊಡ್ಡ ಬಾರ್ಡಸ್ ಕಲ್ಲುಗಳನ್ನು ಹಾಕಿ ಪ್ರಯಾಣಿಕರಿಗೆ ಸಂಕಷ್ಟವನ್ನು ತಂದು ಕೊಡುತ್ತಿದ್ದಾರೆ. ಸರಿಯಾದ ರೀತಿಯಲ್ಲಿ ರಸ್ತೆಯನ್ನು ದುರಸ್ತಿ ಪಡಿಸಲು ಮುಂದಾಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ನೀಡಿದರು ಯಾವುದೇ ಪ್ರಯೋಜನವಾಗುತ್ತಿಲ್ಲ. ಇದು ಆಡಳಿತ ವೈಫಲ್ಯದಿಂದಲೇ ಆಗಿದೆ ಎಂದು ಸದಸ್ಯ ಶರೀಫ್ ಕಂಠಿ ರವರು ಹೇಳಿದಾಗ ಆಡಳಿತ ಸಮಿತಿಯ ಸದಸ್ಯರುಗಳಾದ ಶಿಲ್ಪಾಸುದೇವ್ ಹಾಗೂ ಸುಧಾಕರ್ ಕುರಂಜಿ ರವರು ಆಡಳಿತ ವೈಫಲ್ಯ ಎಂದು ಹೇಳುವುದು ಸರಿಯಲ್ಲ. ಇಲ್ಲಿ ಯಾವುದೇ ಆಡಳಿತ ವೈಫಲ್ಯ ಆಗಲಿಲ್ಲ ಎಂದು ಪ್ರತಿಪಾದಿಸಿದರು.
ಸಭೆಗಳಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಸರಿಯಾಗಿ ಫಾಲೋ ಅಪ್ ಮಾಡ್ತಾ ಇಲ್ಲ :ವಿನಯ್ ಕುಮಾರ್ ಕಂದಡ್ಕ
ಸಭೆಯಲ್ಲಿ ಆಗುವ ನಿರ್ಣಯಗಳನ್ನು ಫಾಲೋ ಅಪ್ ಮಾಡಿದರೆ ಈ ತೊಂದರೆಗಳು ಬರ್ತಾ ಇರಲಿಲ್ಲ. ಕೆಲವು ಕಡೆಯಲ್ಲಿ ಮೂರೆ ಮೂರು ಅಡಿಯಲ್ಲಿ ಮೈನ್ ಪೈಪ್ ಸಿಕ್ತಾ ಇದೆ. ಹೇಳಿದಾಗ ಇದನ್ನು ಅವರೇ ನಿರ್ವಹಣೆ ಮಾಡುತ್ತಾರೆ ಎಂದು ಹೇಳುತ್ತಾರೆ ಆದರೆ ಐದು ವರ್ಷದ ಕಳೆದ ಬಳಿಕ ಆರನೇ ವರ್ಷದಲ್ಲಿ ಸಮಸ್ಯೆ ಉಂಟಾದರೆ ಏನು ಮಾಡುತ್ತಾರೆ ಇವರು. ಅಂದು ನಾವು ಈ ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳುವುದು ಎಂದು ವಿನಯ್ ಕುಮಾರ್ ಕಂದಡ್ಕ ರವರು ಕೇಳಿದರು. ಕಸ ವಿಂಗಡಣೆಯ ಕಾರ್ಯಗಳು ಸರಿಯಾಗಿ ನಡೆಯುತ್ತಾ ಬಂದಿದ್ದರೆ ಸಮಸ್ಯೆಗಳು ಆಗುತ್ತಿರಲಿಲ್ಲ. ಕಸ ವಿಂಗಡಣೆಯ ಕಾರ್ಯದಲ್ಲಿ ಸಂಬಂಧಪಟ್ಟವರು ಸರಿಯಾದ ವ್ಯವಸ್ಥೆಯನ್ನು ಮಾಡುತ್ತಿಲ್ಲ. ಅದರ ಉಸ್ತುವಾರಿಯನ್ನು ವಹಿಸಿಕೊಂಡಿರುವ ವ್ಯಕ್ತಿಯೇ ಈ ಬಗ್ಗೆ ಸರಿಯಾದ ಕೆಲಸ ಮಾಡದ ಕಾರಣ ಈ ಪರಿಸ್ಥಿತಿ ಬಂದಿದೆ. ಆದ್ದರಿಂದ ಕಸ ವಿಂಗಡಣೆ ಸರಿಯಾದ ರೀತಿಯಲ್ಲಿ ಆಗಬೇಕು ಮತ್ತು ನಾವು ಕಂಡಂತಹ ಕನಸು ನನಸಾಗಬೇಕಾದರೆ ಹೀಗಿರುವ ಕಸ ಬರ್ನಿಂಗ್ ಕೇಂದ್ರದಲ್ಲಿ ಇನ್ನೂ ಅಭಿವೃದ್ಧಿ ಕಾರ್ಯಗಳು ನಡೆಯಬೇಕಾಗಿದೆ. ಎಂದು ಅವರು ಹೇಳಿದರು. ಅನುದಾನ ಮತ್ತು ಹಣದ ಅವಶ್ಯಕತೆ ಇದೆ. ಅದನ್ನು ಸರಿಯಾಗಿ ಬಳಸಿಕೊಂಡದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ ಎಂದು ಹೇಳಿದರು.
ಆರೋಗ್ಯ ಅಧಿಕಾರಿ ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ ಮತ್ತು ಸಭೆಗೆ ಬರುತ್ತಿಲ್ಲ.ಇವರು ಈ ರೀತಿ ಮಾಡಿರುವ ಕಾರಣ ಪಂಚಾಯತ್ ನ ಅಭಿವೃದ್ಧಿ ಕಾರ್ಯದಲ್ಲಿ ಹಲವಾರು ಸಮಸ್ಯೆ ಉಂಟಾಗಲು ಕಾರಣವಾಗಿದೆ ಎಂದು ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಅವರು ಸಭೆಯಲ್ಲಿ ತಿಳಿಸಿದರು.ಇಂದಿನ ಸಭೆಗೂ ಕೂಡ ಜ್ವರದ ಕಾರಣವನ್ನು ತಿಳಿಸಿ ಸಭೆಗೆ ಬಾರದೆ ತಪ್ಪಿಸಿಕೊಂಡಿದ್ದಾರೆ. ಪ್ರತಿಯೊಂದು ಸಭೆಗೂ ಈ ರೀತಿ ಮಾಡುತ್ತಿದ್ದು ಇದರಿಂದ ಕಸ ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಪಟ್ಟಂತೆ ಸಮಸ್ಯೆಗಳು ಹೆಚ್ಚಾಗಲು ಕಾರಣವಾಗಿದೆ ಎಂದು ಹೇಳಿದರು. ಅಂತಹ ಅಧಿಕಾರಿಗಳ ಮೇಲೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವೆಂಕಪ್ಪಗೌಡರು ಮತ್ತು ವಿಪಕ್ಷ ಸದಸ್ಯರು ಅಧ್ಯಕ್ಷರಲ್ಲಿ ಹೇಳಿದರು.
ಕಲ್ಪಚರ್ಪೆ ಬರ್ನಿಂಗ್ ಮಷೀನ್ ಅಭಿವೃದ್ಧಿ ಕಾರ್ಯಕ್ಕೆ 1.10 ಕೋಟಿ
ಕಲ್ಚರ್ಪೆ ಯಲ್ಲಿ ಕಸ ಬರ್ನಿಂಗ್ ಕೇಂದ್ರದ ಅಭಿವೃದ್ಧಿಗಾಗಿ 1.10 ಕೋಟಿ ರೂಪಾಯಿಗಳ ಟೆಂಡರನ್ನು ಕರೆಯುವ ಬಗ್ಗೆ ಸಭೆಯಲ್ಲಿ ಚರ್ಚೆಗಳು ನಡೆಯಿತು.
ಈ ಸಂದರ್ಭದಲ್ಲಿ ವೆಂಕಪ್ಪ ಗೌಡರು ಮಾತನಾಡಿ ಜನರ ದುಡ್ಡನ್ನು ಏಕೆ ಈ ರೀತಿ ಹಾಳು ಮಾಡುತ್ತಿದ್ದೀರಿ. ನಗರದ ಅಭಿವೃದ್ಧಿಯ ಎಲ್ಲಾ ದುಡ್ಡನ್ನು ಸುಳ್ಯದ ಕಸಕ್ಕೆ ಸುರಿಯುತ್ತಿರುವುದು ಯಾವ ಉದ್ಧಾರಕ್ಕಾಗಿ. ಈಗಾಗಲೇ ಕಲ್ಚರ್ಪೆಯಲ್ಲಿ ಕಸ ಹಾಕಲು ಜಾಗ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಹೀಗಿರುವಾಗ ನೀವು ಹೊಸದಾಗಿ ಯೋಜನೆಯನ್ನು ತಂದು ಮತ್ತೆ ನೂತನ ಯಂತ್ರಗಳನ್ನು ಅಳವಡಿಸುವ ಬಗ್ಗೆ ಇದಕ್ಕೆ ಮತ್ತೆ ಹಣವನ್ನು ಸುರಿಯುತ್ತಿರಿ ಎಂದರೆ ಇದರ ಅರ್ಥ ಏನು ಎಂದರು. ಇದನ್ನು ಯಾವುದೇ ಕಾರಣಕ್ಕೂ ನಾವು ಒಪ್ಪುವುದಿಲ್ಲ ಎಂದು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಇಂಜಿನಿಯರ್ ಶಿವಕುಮಾರ್ ಅವರು ಮಾತನಾಡಿ ಇದು ಸರ್ಕಾರದಿಂದ ಮಂಜೂರಾಗಿರುವಂತಹ ಯೋಜನೆಯಾಗಿದ್ದು ಅದನ್ನು ಕೈಬಿಟ್ಟಲ್ಲಿ ಅನಾವಶ್ಯಕವಾದ ಆ ಯೋಜನೆ ಹೋಗುತ್ತದೆ. ಆದ್ದರಿಂದ ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಬಗ್ಗೆ ಮತ್ತು ವ್ಯವಸ್ಥಿತ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ನಡೆಸುವ ಬಗ್ಗೆ ಮತ್ತು ಅಲ್ಲಿರುವ ಕಸವನ್ನು ತೆರವುಗೊಳಿಸುವ ಬಗ್ಗೆ ಯೋಜನೆಗಳನ್ನು ರೂಪಿಸೋಣ ಎಂದು ಸಲಹೆ ನೀಡಿದಾಗ ಬಳಿಕ ಸದಸ್ಯರುಗಳು ಈ ಬಗ್ಗೆ ನಿರ್ಣಯ ಕೈಗೊಳ್ಳಲು ಸಮಿತಿ ಸೂಚಿಸಿದರು.
ಉಳಿದಂತೆ ಸಭೆಯಲ್ಲಿ ನಗರದ ದುರಸ್ತಿಗೊಂಡಿರುವ ಹೈ ಮ್ಯಾಕ್ಸ್ ದೀಪಗಳ ಬಗ್ಗೆ, ಸಿಸಿಟಿವಿ ಅಳವಡಿಕೆಯ ಬಗ್ಗೆ, ಬೆಟ್ಟಂಪಾಡಿ ಅಂಗನವಾಡಿ ಕಟ್ಟಡದ ಬಳಿ ನಿರ್ಮಾಣಗೊಂಡಿರುವ ಗುಂಡಿ ದುರಸ್ತಿ ಪಡಿಸುವ ಬಗ್ಗೆ ಮುಂತಾದ ವಿಷಯಗಳ ಕುರಿತು ಚರ್ಚೆಗಳು ನಡೆಯಿತು.










