ಚೊಕ್ಕಾಡಿ: ಚೂಂತಾರು ವೇದಮೂರ್ತಿ ಲಕ್ಷ್ಮೀನಾರಾಯಣ ಪ್ರಶಸ್ತಿ ಪುರಸ್ಕಾರ ಸಮಾರಂಭವು ಚೂಂತಾರು ಉಪಾಸನಾ ಮನೆಯಲ್ಲಿ ಅ.11 ರಂದು ಜರಗಲಿದೆ. ಈ ಬಾರಿಯ ಪುರಸ್ಕಾರಕ್ಕೆ ಪುತ್ತೂರು ಕಬಕದ ವಡ್ಯ ವೇದಮೂರ್ತಿ ಶ್ರೀಕೃಷ್ಣ ಭಟ್ಟ ಮತ್ತು ಬೆಳ್ಳಾರೆ ಸಮೀಪದ ನೆಟ್ಟಾರಿನ ಚಾವಡಿವಾಗಿಲು ವೇದಮೂರ್ತಿ ಶಂಭು ಭಟ್ಟರು ಆಯ್ಕೆಯಾಗಿರುತ್ತಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಶ್ರೀಮತಿ ಸರೋಜಿನಿ ಭಟ್ ಪ್ರತಿಷ್ಠಾನದ ಮಹೇಶ ಭಟ್ ಚೂಂತಾರು ಮತ್ತು ಪ್ರತಿಷ್ಠಾನದ ಕಾರ್ಯದರ್ಶಿ ಡಾ . ಮುರಲೀಮೋಹನ ಚೂಂತಾರು ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಪ್ರಶಸ್ತಿ ಪುರಸ್ಕೃತರು:
ವೇದಮೂರ್ತಿ ಶ್ರೀಕೃಷ್ಣ ಭಟ್ಟ ವಡ್ಯ : ಇವರು ಪುತ್ತೂರು ಸಮೀಪದ ಕಬಕದ ವಡ್ಯ ಗಣಪತಿ ಭಟ್ಟ ಮತ್ತು ಲಕ್ಷ್ಮೀ ದಂಪತಿಗಳ ಮಗನಾಗಿದ್ದು ಕಳೆದ ನಲುವತ್ತು ವರ್ಷಗಳಿಂದ ಪುರೋಹಿತರಾಗಿ ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಧೂರು ಶ್ರೀಮದನಂತೇಶ್ವರ ಸನ್ನಿಧಿಯಲ್ಲಿ ಜರಗುತ್ತಿದ್ದ ವಸಂತ ವೇದಪಾಠ ಶಾಲೆಯಲ್ಲಿ ವೇದಾಧ್ಯಯನ ಆರಂಭಿಸಿದವರು. ಅನಂತರ ಪಂಜಿಗುಡ್ಡೆಯ ಕಿಳಿಂಗಾರು ಗೋಪಾಲಕೃಷ್ಣ ಭಟ್ಟರ ಶಿಷ್ಯರಾಗಿ ವೇದಾಧ್ಯಯನ ನಡೆಸಿ ಪೌರೋಹಿತ್ಯ ಕ್ಷೇತ್ರದಲ್ಲಿ ಸೇವೆಯನ್ನು ಆರಂಭಿಸಿದವರು. ವೇದಶಾಖೆ ಮತ್ತು ಪ್ರಯೋಗದ ಅಧ್ಯಯನದೊಂದಿಗೆ ನೂರಾರು ಶಿಷ್ಯ ವರ್ಗದವರಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸುತ್ತಾ ಬರುತ್ತಿದ್ದಾರೆ. ಪತ್ನಿ ಮಂಗಳಗೌರಿ, ಮಕ್ಕಳಾದ ಅನನ್ಯಲಕ್ಷ್ಮಿ ಮತ್ತು ಆದಿತ್ಯ ರವರೊಂದಿಗಿನ ಕೌಟುಂಬಿಕ ಜೀವನ ಸಾಗಿಸುತ್ತಿದ್ದಾರೆ.















ವೇದಮೂರ್ತಿ ಶಂಭು ಭಟ್ಟ ಚಾವಡಿಬಾಗಿಲು: ನೆಟ್ಟಾರಿನ ಚಾವಡಿಬಾಗಿಲು ಶಂಭು ಭಟ್ಟರು ವೇದ ವಿದ್ವಾಂಸರು. ಕಳೆದ ಮೂವತ್ತು ವರ್ಷಗಳಿಂದ ಧಾರ್ಮಿಕ ಕ್ಷೇತ್ರದಲ್ಲಿ ಪೂರೋಹಿತರಾಗಿ ಸೇವೆ ಗೆಯ್ಯುತ್ತಿದ್ದಾರೆ. ಮಧೂರು ಶ್ರೀ ಮದನಂತೇಶ್ವರ ಸನ್ನಿಧಿಯಲ್ಲಿ ಜರಗುತ್ತಿದ್ದ ವೇದ ಪಾಠಶಾಲೆಯಲ್ಲಿ ವೇದಾಧ್ಯಯನ ಆರಂಭಿಸಿ, ನಂತರ ಸಾಗರದ ವರದಹಳ್ಳಿ ಶ್ರೀ ಶ್ರೀಧರಾಶ್ರಮದಲ್ಲಿ ವೇದಾಧ್ಯಯನ ಪ್ಯೂರೈಸಿದವರು. ಪಳ್ಳತ್ತಡ್ಕ ಪರಮೇಶ್ವರ ಭಟ್ಟರು ಇವರ ಗುರುಗಳಾಗಿದ್ದರು. ಧಾರ್ಮಿಕ ಕಾರ್ಯಕ್ರಮಗಳನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ, ನಿರ್ವಹಿಸುತ್ತಾ ಜನಮೆಚ್ಚುಗೆ ಪಡೆದವರು. ಶ್ರೀಯುತರು ವೈದಿಕ ಕಾರ್ಯಕ್ರಮಗಳನ್ನು ಮಸ್ಕತ್, ಶ್ರೀಲಂಕಾ, ಮಣಿಪುರ ಮೊದಲಾದ ದೇಶ llವಿದೇಶಗಳಿಗೂ ತೆರಳಿ ನಿರ್ವಹಣೆ ಮಾಡಿದ ಕೀರ್ತಿ ಇವರಿಗಿದೆ. ಪತ್ನಿ ಶಕುಂತಲಾ ಮಗ ಈಶ್ವರ ಶರ್ಮ, ಸೊಸೆ ಶಿಲ್ಪಾ ಸರಸ್ವತಿ ಇವರೊಂದಿಗಿನ ಕುಟುಂಬ ಜೀವನ ನಡೆಸುತ್ತಿದ್ದಾರೆ.
ಈರ್ವರು ಧಾರ್ಮಿಕ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಚೂಂತಾರು ಲಕ್ಷ್ಮೀನಾರಾಯಣ ಭಟ್ಟ ಸ್ಮಾರಕ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಲಾಗಿದೆ. ಅ.11 ರಂದು ಶ್ರಿಮತಿ ಸರೋಜಿನಿ ಭಟ್ ಚೂಂತಾರು ಪ್ರತಿಷ್ಠಾನದ ವತಿಯಿಂದ, ನಡೆಯಲಿರುವ ಸಮಾರಂಭಕ್ಕೆ ಆಗಮಿಸುವಂತೆ ಪ್ರತಿಷ್ಠಾನದವರು ವಿನಂತಿಸಿಕೊಂಡಿದ್ದಾರೆ.










