ಸೌಜನ್ಯ ಪರ ಹೋರಾಟಗಾರರಿಂದ ಸುಳ್ಯ ಚೆನ್ನಕೇಶವ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

0

ಗಿರೀಶ್ ಮಟ್ಟಣ್ಣವರ್ ಆಗಮನ

ಧರ್ಮಸ್ಥಳದ ಪಾಂಗಾಳ ನಿವಾಸಿ, ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ನಡೆದು ೧೩ ವರ್ಷ ತುಂಬಿದ ಹಿನ್ನೆಲೆಯಲ್ಲಿ ಸೌಜನ್ಯ ಹತ್ಯೆಗೆ ಸರಿಯಾದ ನದಯಾಯ ಸಿಗಬೇಕೆಂದು ಪ್ರಾರ್ಥನೆ ಸಲ್ಲಿಸಲು ಇಂದು ಮಧ್ಯಾಹ್ನ ಸುಳ್ಯ ಚೆನ್ನಕೇಶವ ದೇವಸ್ಥಾನಕ್ಕೆ ಹೋರಾಟಗಾರರಾದ ಗಿರೀಶ್ ಮಟ್ಟಣ್ಣವರ್ ರವರು ಮತ್ತು ಇತರ ಕಾರ್ಯಕರ್ತರು ಬಂದು ವಿಶೇಷ ಪೂಜೆ ಸಲ್ಲಿಸಿದರು.


ಇಂದು ಮಧ್ಯಾಹ್ನ 11.45 ಕ್ಕೆ ಗಿರೀಶ್ ಮಟ್ಟಣ್ಣವರ್ ತಮ್ಮ ಸಂಗಡಿಗರೊಂದಿಗೆ ಚೆನ್ನಕೇಶವ ದೇವಸ್ಥಾನಕ್ಕೆ ಬಂದಾಗ ಸುಮಾರು 50-60 ರಷ್ಟು ಮಂದಿ ದೇವಸ್ಥಾನದ ಎದುರು ಸೇರಿದ್ದರು. ಅವರ ಜತೆ ದೇವಳದ ಒಳಗೆ ಬಂದ ಮಟ್ಟೆಣ್ಣವರ್ ಅವರು, ಗರ್ಭಗುಡಿಗೆ ಒಂದು ಸುತ್ತು ಬಂದು ದೇವರಿಗೆ ಕೈ ಮುಗಿದರಲ್ಲದೆ, ಮಹಾಪೂಜೆಗೆ ಅರ್ಧ ಗಂಟೆ ಇದ್ದುದರಿಂದ ದೇವಳದಿಂದ ಹೊರಬಂದರು. ಹೊರಗಡೆ ಅಶ್ವತ್ಥ ಕಟ್ಟೆಯ ಪಕ್ಕದಲ್ಲಿ ಸೇರಿದ್ದ ಜನರನ್ನು ಮತ್ತು ಪತ್ರಕರ್ತರನ್ನುದ್ದೇಶಿಸಿ ಮಾತನಾಡಿ ಪ್ರಾರ್ಥನೆಯ ಉದ್ದೇಶವನ್ನು ಹೇಳಿದರು. ಸುಳ್ಯ ತಾಲೂಕು ಸೌಜನ್ಯ ಹೋರಾಟ ಸಮಿತಿಯ ಅಧ್ಯಕ್ಷ ಎನ್.ಟಿ.ವಸಂತರು ಸ್ವಾಗತಿಸಿದರು. ಲೋಲಜಾಕ್ಷ ಭೂತಕಲ್ಲು ಹೋರಾಟಕ್ಕೆ ಬೆಂಬಲವಾಗಿ ಮಾತನಾಡಿದರು. ತೀರ್ಥರಾಮ ಪರ್ನೋಜಿಯವರು ಪ್ರಾರ್ಥನೆಯ ವ್ಯವಸ್ಥೆಯ ನೇತೃತ್ವ ವಹಿಸಿದ್ದರು. ಬೈತಡ್ಕ ಅಶ್ವಿನ್ ಗೌಡ, ವಾಸುದೇವ ಕುಡೆಕಲ್ಲು, ರಾಕೇಶ್ ಕುಂಟಿಕಾನ, ಬಾಲಗೋಪಾಲ ಸೇರ್ಕಜೆ, ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಅಂತರ, ಆರ್ನೋಜಿ ರಾಘವ ಗೌಡ, ತೀರ್ಥರಾಮ ಬಾಳಕಜೆ, ಅಶೋಕ್ ಎಡಮಲೆ ಹೀಗೆ ಹಲವಾರು ಮಂದಿ ಮುಖಂಡರು
ಉಪಸ್ಥಿತರಿದ್ದರು.


ಬಳಿಕ ಮಹಾಪೂಜೆಗಾಗಿ ದೇವಸ್ಥಾನದೊಳಗೆ ತೆರಳಿದ ಸೌಜನ್ಯ ನ್ಯಾಯಪರ ಹೋರಾಟ ಸಮಿತಿಯವರು ಗರ್ಭಗುಡಿಯ ಮುಂದೆ ನಿಂತು ಪ್ರಾರ್ಥನೆ ಮಾಡಿಕೊಂಡರು. ಎಲ್ಲರ ಪರವಾಗಿ ಹಿರಿಯರಾದ ಅರ್ನೋಜಿ ತೀರ್ಥರಾಮ ಉಳುವಾರುರವರು ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ನಡೆದು 13 ವರ್ಷಗಳಾಗಿವೆ. ಇನ್ನೂ ನ್ಯಾಯ ದೊರಕಿಲ್ಲ. ಇಂದು ಆಕೆಯ ಹತ್ಯೆ ನಡೆದು 13 ನೇ ವರ್ಷದ ದಿನವಾಗಿದ್ದು, ಅನ್ಯಾಯ ಮಾಡಿದವರಿಗೆ ಶಿಕ್ಷೆ ಸಿಗುವಂತೆ ದೇವರು ಕರುಣಿಸಬೇಕು ಎಂದು ಪ್ರಾರ್ಥನೆ ಮಾಡಿಕೊಂಡರು.
ಬಳಿಕ ಅಲ್ಲಿದ್ದವರೆಲ್ಲಾ ಹಿಂತಿರುಗಿದರು.