ಸುಳ್ಯ :ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಪರಸ್ಪರ ಹೊಡೆದಾಟ

0

ಕ್ರೀಡಾಕೂಟದ ಸಂದರ್ಭ ಆದ ಕಿರಿಕ್ ಕಾರಣ

ಸುಳ್ಯದ ಇಂಜಿನಿಯರಿಂಗ್ ಕಾಲೇಜಿನಲ್ಲಿ ನವಂಬರ್ 24 ರಂದು ನಡೆದ ಕ್ರೀಡಾಕೂಟದಲ್ಲಿ ಎರಡು ತಂಡದ ವಿದ್ಯಾರ್ಥಿಗಳ ನಡುವೆ ಆಟದ ವಿಷಯಕ್ಕೆ ಸಂಬಂಧಿಸಿದಂತೆ ಕಿರಿಕಿರಿ ಉಂಟಾಗಿ ಪರಸ್ಪರ ಹೊಡೆದಾಡಿಕೊಂಡು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಘಟನೆ ವರದಿಯಾಗಿದೆ.

ಇಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿ ಹರ್ಷ ಎಂ.ಡಿ. ಎಂಬವರಿಗೆ ಮತ್ತು ಆತನ ಗೆಳೆಯರೊಬ್ಬರಾದ ಅಭಿಷೇಕ್ ಎಂಬವರಿಗೆ ಆರೋಪಿತರಾದ ಆಕಾಶ್‌ ನೆಕ್ಲಾಜೆ, ಆಕಾಶ್‌, ಗೌತಮ್‌, ಯಕ್ಷಿತ್‌,ಭುವನ್, ಸಚಿನ್‌, ಮನೀಷ್ ಎಂಬವರು ಹಲ್ಲೆ ನಡೆಸಿದ್ದಾರೆ ಎಂದು ಪೋಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ನ. 24 ರಂದು ಸಂಜೆ 6 ಗಂಟೆ ವೇಳೆ ಕ್ಯಾಂಪಸ್‌ ನಲ್ಲಿ ಇಂಜಿನಿಯರಿಂಗ್‌ ವಿಭಾಗ ಮತ್ತು ಎಂ.ಬಿ.ಎ ವಿಭಾಗದ ವಿದ್ಯಾರ್ಥಿಗಳ ನಡುವೆ ಹಗ್ಗ ಜಗ್ಗಾಟದ ಆಟ ಪ್ರಾರಂಭವಾಗಿತ್ತು. ಆ ಸಮಯ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಆಕಾಶ್‌ ನೆಕ್ಲಾಜೆ, ಆಕಾಶ್‌, ಗೌತಮ್‌, ಯಕ್ಷಿತ್‌ ಮತ್ತು ಇಂಜಿನಿಯರಿಂಗ್‌ ವಿಭಾಗದ ಮನೀಶ್‌ ರವರು ಎಂ.ಬಿ.ಎ ವಿಭಾಗದ ಪರವಾಗಿ ಭಾಗವಹಿಸಿದ್ದರೆನ್ನಲಾಗಿದೆ.
ಆ ಸಮಯ ಕಾಲೇಜಿನ ಹೊರಗಿನವರು ಆಟದಲ್ಲಿ ಭಾಗವಹಿಸುವಂತಿಲ್ಲ ಎಂದು ಹರ್ಷ ಎಂ.ಡಿ. ಆಕ್ಷೇಪ ವ್ಯಕ್ತಪಡಿಸಿದರೆನ್ನಲಾಗಿದೆ.
ಇದರಿಂದಾಗಿ ಆಟವು ಸ್ಥಗಿತಗೊಂಡಿದ್ದು ಆ ಸಮಯ ಆರೋಪಿತರು ‘ ನಿನ್ನಿಂದ ಆಟ ನಿಂತು ಹೋಯಿತು ‘ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ , ಜೀವ ಬೆದರಿಕೆ ಒಡ್ಡಿದ್ದಾರೆ ಅಲ್ಲದೆ ತಾನು ಹೆದರಿ ಮುಂದೆ ಹೋಗುವಾಗ ನನ್ನನ್ನು ತಡೆದು ಮುಂದೆ ಹೋಗ ದಂತೆ ಅಡ್ಡಗಟ್ಟಿ ನಿಲ್ಲಿಸಿ ಕೈಯಿಂದ ಹಲ್ಲೆ ಮಾಡಿ ಕಾಲಿನಿಂದ ತುಳಿದಿದ್ದು, ಈ ಸಮಯ ಬಿಡಿಸಲು ಬಂದ ನನ್ನ ಸ್ನೇಹಿತ ಅಭಿಷೇಕ್‌ ಎಂಬವರಿಗೆ ಕೂಡ ಹಲ್ಲೆ ಮಾಡಿ ಕಾಲಿನಿಂದ ತುಳಿದಿರುತ್ತಾರೆ. ಕಾಲೇಜಿನ ಕ್ಯಾಂಪಸ್‌ ನ ಹೊರಗೂ ಕೂಡಾ ಜೀವ ಬೆದರಿಕೆ ಒಡ್ಡಿರುತ್ತಾರೆ ಎಂದು ಹರ್ಷ ರವರು ಸುಳ್ಯ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಕುರಿತು ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.