ಪತ್ರಿಕಾಗೋಷ್ಠಿ ನಡೆಸಿ ಎಚ್ಚರಿಕೆ ನೀಡಿದ ಸ್ಥಳೀಯ ನಿವಾಸಿಗಳು

ಜಯನಗರ ನಾಗರಿಕ ಹಿತ ರಕ್ಷಣಾ ವೇದಿಕೆ ಹಾಗೂ ಸ್ಥಳೀಯ ಮುಖಂಡರು ನ.೨೮ ರಂದು ಸುಳ್ಯ ಪ್ರೆಸ್ ಕ್ಲಬ್ಬಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಜಯನಗರ ರಸ್ತೆ ದುರವಸ್ಥೆಯ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ವಾರ್ಡಿನ ರಸ್ತೆಯ ಅಭಿವೃದ್ಧಿಗಾಗಿ ಸಂಬಂಧಪಟ್ಟವರಿಗೆ ಮನವಿಗಳನ್ನು ನೀಡಿ ಸಾಕಾಗಿದೆ. ಇದಕ್ಕಾಗಿ ಕಾದು ಕಾದು ತಾಳ್ಮೆಯ ಕಟ್ಟೆ ಒಡೆದಿದೆ. ಶೀಘ್ರದಲ್ಲಿ ಸ್ಪಂದನೆ ಸಿಗದಿದ್ದಲ್ಲಿ ಊರಿನ ಜನರನ್ನು ಒಟ್ಟು ಸೇರಿಸಿ ನಗರ ಪಂಚಾಯತ್ ಮುಂಭಾಗ ಕುಳಿತು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸ್ಥಳೀಯ ನಿವಾಸಿ ಪತ್ರಕರ್ತ ಹಸೈನಾರ್ ಜಯನಗರರವರು ‘ಕಳೆದ 15-20 ವರ್ಷಗಳಿಂದ ಜಯನಗರ ನಿವಾಸಿಗಳು ಈ ಭಾಗದ ಹದಗೆಟ್ಟಿರುವ ರಸ್ತೆಯ ದುರಸ್ತಿಗಾಗಿ ಬೇಡಿಕೆಯನ್ನು ಇಡುತ್ತಾ ಬರುತ್ತಿದ್ದಾರೆ. ಒಂದು ವಾರ್ಡಿನ ಅಭಿವೃದ್ಧಿ ಅಲ್ಲಿನ ರಸ್ತೆ, ಚರಂಡಿ,ಕುಡಿಯುವ ನೀರು ಈ ಮೂರು ವಸ್ತುಗಳ ಮೇಲೆ ಅವಲಂಭಿತವಾಗಿರುತ್ತದೆ. ಆದರೆ ಜಯನಗರಕ್ಕೆ ಈ ಮೂರು ವಸ್ತುಗಳು ಕೂಡ ಸರಿಯಾಗಿ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು. ಸುಮಾರು ಒಂದು ಸಾವಿರದ ಮುನ್ನೂರಕ್ಕೂ ಹೆಚ್ಚು ಮತದಾರರು ಇರುವಂತಹ ಅವಳಿ ವಾರ್ಡ್ ಇದಾಗಿದ್ದು , ಇಲ್ಲಿ ಸರಕಾರಿ ಶಾಲೆ, ಅಂಗನವಾಡಿ ಕೇಂದ್ರ, ಸಂಘ ಸಂಸ್ಥೆಗಳು, ಇಂಡಸ್ಟ್ರೀಸ್‌ಗಳು, ಭಜನಾ ಮಂದಿರ, ದೈವಸ್ಥಾನ ಮಸೀದಿ ಮದ್ರಸಾ,ಯುವಕ ಯುವತಿ ಮಂಡಲ ಎಲ್ಲಾವನ್ನೂ ಒಳಗೊಂಡಿರುವ ಪ್ರದೇಶವಾಗಿದೆ.
ಪ್ರತಿ ದಿನ ನೂರಾರು ಮಕ್ಕಳು ಶಾಲೆಗಳ ಬಸ್ಸು, ಆಟೋರಿಕ್ಷಾ, ದ್ವಿಚಕ್ರ ವಾಹನಗಳಲ್ಲಿ ಶಾಲೆಗಳಿಗೆ ಹೋಗಿ ಬರುತ್ತಿರುತ್ತಾರೆ. ವೃದ್ಧರು, ರೋಗಿಗಳು, ಗರ್ಭಿಣಿಯರು, ಆಸ್ಪತ್ರೆಗಳಿಗೆ ಹೋಗಲು ಇಲ್ಲಿನ ಮುಖ್ಯರಸ್ತೆಯನ್ನು ಅವಲಂಬಿಸಿಕೊಂಡಿದ್ದಾರೆ. ಆದರೆ ರಸ್ತೆಯಲ್ಲಿ ಉಂಟಾಗಿರುವ ಹೊಂಡ ಗುಂಡಿಗಳಿಂದ ಇವರೆಲ್ಲರೂ ಪ್ರತಿದಿನ ಸಂಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಅಥವಾ ಅಧಿಕಾರಿಗಳ ಗಮನಕ್ಕೆ ನೀಡಿದರೂ ಯಾವುದೇ ಪ್ರಯೋಜನಗಳು ಆಗುತ್ತಿಲ್ಲ ಎಂದವರು ಹೇಳಿದರು.
ರಸ್ತೆಗೆ ಗುದ್ದಲಿಪೂಜೆ ನಡೆದು ತಿಂಗಳುಗಳೇ ಕಳೆದಿದ್ದರೂ ಇದುವರೆಗೆ ರಸ್ತೆ ಕೆಲಸ ಶುರು ಮಾಡಿಲ್ಲ. ಈ ವರೆಗೆ ನಗರ ಪಂಚಾಯತ್ ಆಡಳಿತ ಮಾಡುತ್ತಿದ್ದ ಸದಸ್ಯರು ಇದೀಗ ಎಲ್ಲಾ ಜವಾಬ್ದಾರಿಯನ್ನು ಅಧಿಕಾರಿಗಳ ತಲೆಯ ಮೇಲೆ ಇಟ್ಟು ತಮ್ಮ ಅವಧಿ ಮುಗಿದು ಅಲ್ಲಿಂದ ತೆರಳಿದ್ದಾರೆ. ಇದೀಗ ಅಧಿಕಾರಿಗಳು ಕೆಲಸ ಕಾರ್ಯ ಮಾಡಿಸಲು ಮೀನಾ ಮೇಷ ಎಣಿಸುತ್ತಿದ್ದಾರೆ. ಇದರಿಂದ ಆಕ್ರೋಶಗೊಂಡು ನಾವು ಇಂದು ಪತ್ರಿಕಾಗೋಷ್ಠಿಯನ್ನು ಕರೆದಿದ್ದೇವೆ . ಆದಷ್ಟು ಶೀಘ್ರದಲ್ಲಿ ರಸ್ತೆಯ ಬಗ್ಗೆ ಕ್ರಮ ವಹಿಸಬೇಕು. ಇಲ್ಲದೇ ಹೋದಲ್ಲಿ ನಾವೆಲ್ಲರೂ ಸೇರಿ ಮುಂದಿನ ದಿನಾಂಕವನ್ನು ನಿಗದಿ ಪಡಿಸಿ ನಗರ ಪಂಚಾಯತ್‌ನ ಮುಂಭಾಗ ಊರಿನವರನ್ನು ಸೇರಿಸಿ ಪ್ರತಿಭಟನೆ ಹಮ್ಮಿಕೊಳ್ಳುವ ಅನಿವಾರ್ಯತೆ ಉಂಟಾಗಬಹುದು ಎಂದು ಅವರು ಎಚ್ಚರಿಕೆಯನ್ನು ನೀಡಿದರು.









ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸ್ಥಳೀಯ ನಿವಾಸಿ ಹಾಗೂ ಉದ್ಯಮಿ ಕಸ್ತೂರಿ ಶಂಕರ್‌ರವರು ಮಾತನಾಡಿ, ನಾನು ಓರ್ವ ಉದ್ಯಮಿಯಾಗಿದ್ದು ವರ್ಷಕ್ಕೆ ಲಕ್ಷಾನುಗಟ್ಟಲೆ ತೆರಿಗೆ ಹಣವನ್ನು ಪಾವತಿಸುತ್ತೇನೆ. ಕೋಟಿಗಟ್ಟಲೆ ಹಣವನ್ನು ತೆರಿಗೆ ರೂಪದಲ್ಲಿ ನಾವು ಕೊಟ್ಟಿzವೆ. ಆದರೆ ನಮ್ಮಿಂದ ಪಡೆದ ತೆರಿಗೆ ಹಣದಿಂದ ನಮಗೆ ಸರಿಯಾದ ರಸ್ತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಮಾಡಿಕೊಡದೆ ಇರುವುದು ಎಷ್ಟು ಸರಿ? ಎಂದು ಅವರು ಪ್ರಶ್ನಿಸಿದರು. ಇದೀಗ ಊರಿನ ಜನತೆ ಜಾತಿ ಧರ್ಮ ರಾಜಕೀಯ ಎಲ್ಲವನ್ನು ಬದಿಗಿಟ್ಟು ರಸ್ತೆಗಾಗಿ ಪ್ರತಿಭಟನೆ ಮಾಡುವ ಹಂತಕ್ಕೆ ಬಂದಿರುವುದು ಬೇಸರದ ಸಂಗತಿ. ಚುನಾವಣೆ ಬಂದಾಗ ಕೋಟಿಗಾಗಿ ಎಲ್ಲರೂ ನಮ್ಮ ಬಳಿ ಬರುತ್ತಾರೆ. ವೋಟು ಪಡೆದ ಬಳಿಕ ಯಾರೂ ಕೂಡ ಅವರ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಜನರಿಗೆ ಮೂಲಭೂತ ಸಮಸ್ಯೆ ರಸ್ತೆ ನೀರು ಚರಂಡಿ ವಿದ್ಯುತ್ ಇದನ್ನು ಸರಿಯಾಗಿ ಮಾಡಿಕೊಡಲು ಸಾಧ್ಯವಾಗದಿದ್ದಲ್ಲಿ ಆ ಪ್ರದೇಶ ಅಭಿವೃದ್ಧಿ ಹೊಂದಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು.
ಇನ್ನೋರ್ವ ಮುಖಂಡ ರಾಕೇಶ್ ಕುಂಟಿಕಾನರವರು ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಈ ಭಾಗದ ರಸ್ತೆಗಳು ಮರು ಡಾಮರೀಕರಣವಾಗಲಿ ಅಥವಾ ಪ್ಯಾಚ್‌ವರ್ಕ್ ಆಗಲಿ ಆಗುತ್ತಿಲ್ಲ. ಯಾವಾಗಲೋ ಒಂದು ಬಾರಿ ೧೦೦, ಮೀಟರ್ ಅಥವಾ ೨೦೦ ಮೀಟರ್ ರಸ್ತೆ ಕಾಂಕ್ರಿಟೀಕರಣ ಮಾಡಿದು ಬಿಟ್ಟರೆ ಬೇರೆ ಯಾವುದೇ ರಸ್ತೆಯ ಕಾಮಗಾರಿ ಅಲ್ಲಿ ನಡೆದಿಲ್ಲ. ಇದೀಗ ಊರಿಗೆ ಸಂಪರ್ಕಿಸುವ ಮುಖ್ಯ ರಸ್ತೆ ಹದಗೆಟ್ಟು ಸಾರ್ವಜನಿಕರು ಸಂಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಇಂದು ಊರಿನ ಸಾರ್ವಜನಿಕರಾದ ನಾವೆಲ್ಲರೂ ಒಟ್ಟು ಸೇರಿ ಈ ಪತ್ರಿಕಾಗೋಷ್ಠಿ ಕರೆದು ನಮ್ಮ ಬೇಡಿಕೆಯನ್ನು ಮುಂದಿಡಲು ಪ್ರಯತ್ನವನ್ನು ಮಾಡಿದ್ದೇವೆ.ಇದಕ್ಕೆ ನಮಗೆ ಸರಿಯಾದ ರೀತಿಯಲ್ಲಿ ಸ್ಪಂದನೆ ಸಿಗದೇ ಹೋದರೆ ನಗರ ಪಂಚಾಯತ್ ಕಚೇರಿಯ ಮುಂಭಾಗ ಬಂದು ಉಗ್ರ ರೀತಿಯಲ್ಲಿ ಪ್ರತಿಭಟಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆಯನ್ನು ನೀಡಿದರು. ಆಟೋ ಚಾಲಕರಾದ ಉಸ್ಮಾನ್ ರವರು ರಸ್ತೆ ಅವ್ಯವಸ್ಥೆಯಿಂದ ಆಟೋ ಚಾಲಕರಿಗೆ ಆಗುವ ಸಮಸ್ಯೆಯ ಬಗ್ಗೆ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸ್ಥಳೀಯ ನಿವಾಸಿಗಳಾದ ದಯಾನಂದ ಕುದ್ಪಾಜೆ, ಸಚಿನ್ ಕೊಯಿಂಗೋಡಿ, ಮುದ್ದಪ್ಪ ಜಯನಗರ, ಸುಂದರ ಕುದ್ಪಾಜೆ, ಯತಿನ್ ರಾವ್ ಹಳೆಗೇಟು, ಗೋಪಾಲ ನಾರಾಜೆ, ಧನಂಜಯ ಜಯನಗರ ಉಪಸ್ಥಿತರಿದ್ದರು.










