ಪುತ್ತೂರಿನಲ್ಲಿ ಕೇಂದ್ರ ಕಛೇರಿ ಹೊಂದಿರುವ ದ. ಕ. ಜೇನು ವ್ಯವಸಾಯಗಾರರ ಸಹಕಾರಿ ಸಂಘದ ವ್ಯವಸ್ಥಾಪನಾ ನಿರ್ದೇಶಕರಾದ ತಿಮ್ಮಯ್ಯ ಪಿಂಡಿಮನೆ ಯವರು ನ.30 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
ಇವರು 1995 ಜೂ.06ರಿಂದ 2025 ನ.29ರ ತನಕ 30 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಇವರು ನಿವೃತ್ತರಾಗಲಿದ್ದಾರೆ. ಅರಂತೋಡು ಗ್ರಾಮದ ಪಿಂಡಿಮನೆಯ ಪ್ರಗತಿಪರ ಕೃಷಿಕರಾಗಿದ್ದ ಕೃಷ್ಣಪ್ಪ ಗೌಡ ಮತ್ತು ಶ್ರೀಮತಿ ನೀಲಮ್ಮ ದಂಪತಿಯ ಒಂಬತ್ತು ಜನ ಮಕ್ಕಳಲ್ಲಿ ಐದನೆ ಪುತ್ರರಾಗಿ ಜನಿಸಿದರು. ತಂದೆ ತಾಯಿಯವರಿಂದ ಕೃಷಿ ಸಂಸ್ಕೃತಿ, ಮಾನವೀಯ ಮೌಲ್ಯಗಳನ್ನು ಕರಗತ ಮಾಡಿಕೊಂಡ ತಿಮ್ಮಯ್ಯ ಪಿಂಡಿಮನೆಯವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಶಾಲೆ ಅಡ್ತಲೆ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಂತೋಡು ಇಲ್ಲಿ ಪೂರ್ಣಗೊಳಿಸಿ, ಸುಳ್ಯ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಪ್ರೌಢಶಿಕ್ಷಣ ಮತ್ತು ಪಿ. ಯು. ಸಿ. ಮುಗಿಸಿ, ಸುಳ್ಯ ನೆಹರೂ ಸ್ಮಾರಕ ಮಹಾ ವಿದ್ಯಾಲಯದಲ್ಲಿ 1988ರಲ್ಲಿ ಬಿಕಾಂ ಪದವೀಧರರಾದರು. ಮುಂದೆ ಕಂಪ್ಯೂಟರ್ ಮ್ಯಾನೇಜ್ಮೆಂಟ್ ನಲ್ಲಿ ಡಿಪ್ಲೋಮ ಪಡೆದ ನಂತರ ಉದ್ಯೋಗ ಅರಸಿ ನಾಲ್ಕು ವರ್ಷ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗ ಮಾಡಿದರು. ಬಳಿಕ ಎರಡು ವರ್ಷ ಸ್ವಯಂ ಉದ್ಯೋಗ ಮಾಡಿ, ಸುಳ್ಯ ಕೆವಿಜಿ ಪಾಲಿಟೆಕ್ನಿಕ್ ನಲ್ಲಿ ಕಛೇರಿ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಿದ ಇವರು ಅಲ್ಲಿಂದ ಬಿಡುಗಡೆ ಹೊಂದಿ, 1995 ಜೂನ್ 6ರಂದು, ಪ್ರತಿಷ್ಠಿತ ದ.ಕ ಜಿಲ್ಲಾ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಪುತ್ತೂರು ಶಾಖೆಯಲ್ಲಿ ಶಾಖಾ ಮ್ಯಾನೇಜರ್ ಆಗಿ ವೃತ್ತಿ ಜೀವನ ಆರಂಭಿಸಿದರು.









2015ರಲ್ಲಿ ತನ್ನ ಪ್ರಾಮಾಣಿಕ ಸೇವೆಯೊಂದಿಗೆ ಇವರು ಸುಳ್ಯದ ಶಾಖೆಯಲ್ಲಿ 19 ವರ್ಷ ಶಾಖಾ ಮೆನೇಜರ್ ಆಗಿ ಬಳಿಕ ಅಕೌಂಟೆಂಟ್ ಆಗಿ ಮುಂಭಡ್ತಿ ಹೊಂದಿ, ಮುಂದೆ 2018 ಎಪ್ರಿಲ್ ನಿಂದ, ಸಂಘದ ವ್ಯವಸ್ಥಾಪನಾ ನಿರ್ದೇಶಕರಾಗಿ ಪದೋನ್ನತಿ ಪಡೆದರು. ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ ಮೊದಲ್ಗೊಂಡು,ಹಿಂದಿನ ಅಧ್ಯಕ್ಷರ ಆಡಳಿತ ನಿರ್ದೇಶಕರ, ಪ್ರೋತ್ಸಾಹ ಪ್ರೀತಿಯೊಂದಿಗೆ ಸಂಘದ ಎಲ್ಲಾ ಅಭಿವೃದ್ಧಿ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿ ಕೊಂಡು, ಜೇನು ಕೃಪಿಕರ, ರೈತರ ಭಾವೀ ಕೃಷಿಕರ ಮಧುಪ್ರೇಮಿಗಳ ಮುಖದಲ್ಲಿ ಮಂದಹಾಸ ಬೀರಲು ಕಾರಣರಾದರು. ತನ್ನ ಸೇವಾವಧಿಯಲ್ಲಿ 2014ರಲ್ಲಿ ಸಂಘದ ಸುಳ್ಯ ಶಾಖೆಯ ಕಟ್ಟಡ ಕಾಮಗಾರಿಯಲ್ಲಿ ಆಡಳಿತ ಮಂಡಳಿಯ ಜೊತೆ ಸಹಕರಿಸಿದರು.
2020ರಲ್ಲಿ ಪುತ್ತೂರಿನ ಪ್ರಧಾನ ಕಛೇರಿಯ ವಿಸ್ತೃತ ಕಟ್ಟಡಕ್ಕೆ ಹೊಸ ರೂಪ ಕೊಡಿಸುವಲ್ಲಿ ಅಧ್ಯಕ್ಷರು, ಆಡಳಿತ ಸಮಿತಿಯವರಿಗೆ ಬೆನ್ನೆಲುಬಾಗಿ ನಿಂತರು.
2025ರಲ್ಲಿ ಸುಳ್ಯದ ನೂತನ ಸಂಸ್ಕರಣ ಘಟಕ ನಿರ್ಮಾಣ ಕಾರ್ಯದಲ್ಲಿ ಆಡಳಿತ ಮಂಡಳಿಯ ಜೊತೆ ಸಹಕರಿಸಿದರು. ಕಾಲೇಜು ದಿನಗಳಲ್ಲಿ ಜ್ಯೂನಿಯರ್ ಜೇಸಿ ಮತ್ತು ರಾಷ್ಟ್ರೀಯ ಸೇವಾಯೋಜನೆಯ ವಿಶ್ವ ವಿದ್ಯಾನಿಲಯದ ಶಿಬಿರಗಳಲ್ಲಿ ಭಾಗವಹಿಸಿ ನಾಯಕತ್ವ ಮತ್ತು ಸಂಘಟನಾ ಕೌಶಲ್ಯಗಳನ್ನು ರೂಢಿಸಿಕೊಂಡರು, ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆಯಲ್ಲೂ ಸಕ್ರಿಯರಾದರು. ಸಮಾಜ ಸೇವಾ ಮನೋಭಾವ ಹೊಂದಿದ್ದ, ತಿಮ್ಮಯ್ಯ ಪಿಂಡಿ ಮನೆಯವರು ಲಯನ್ಸ್ ಸೇವಾಸಂಸ್ಥೆಯ ಸದಸ್ಯರಾಗಿ, ಕೆವಿಜಿ ಸುಳ್ಯ ಹಬ್ಬದ ಸದಸ್ಯರಾಗಿ, ಗೌಡ ಯುವ ಸೇವಾ ಸಂಘದ ಕಾರ್ಯದರ್ಶಿಯಾಗಿ ತನ್ನನ್ನು ತಾನು ತೊಡಗಿಸಿಕೊಂಡ ಇವರು,ಹವ್ಯಾಸಕ್ಕಾಗಿ ಜೇನು ಕೃಷಿ ಮತ್ತಿತರ ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಮಧುಪ್ರಪಂಚ ತ್ರೈಮಾಸಿಕ ಪತ್ರಿಕೆಯ ಬೆಳವಣಿಗೆಯಲ್ಲಿ ಸ್ವತಃ ಲೇಖಕರಾಗಿ ತಮ್ಮ ನುಡಿಯ ಮೂಲಕ ಎಲ್ಲರ ಗಮನ ಸೆಳೆದರು. ಇವರ ಅವಧಿಯಲ್ಲಿ ದ.ಕ ಜೇನು ವ್ಯವಸಾಯಗಾರರ ಸಹಕಾರಿ ಸಂಘಕ್ಕೆ ಜಿಲ್ಲೆ, ರಾಜ್ಯ,ರಾಷ್ಟ್ರೀಯ ಅನೇಕ ಪ್ರತಿಷ್ಠಿತ ಪುರಸ್ಕಾರಗಳೂ ಸಂದಿವೆ.
ಇವರ ಪತ್ನಿ ಶ್ರೀಮತಿ ಚಂದ್ರಿಕಾ ಪಿಂಡಿಮನೆಯವರು ಎಂ. ಎಸ್ಸಿ ಸೈಕಾಲಜಿ ಪದವೀಧರೆಯಾಗಿದ್ದು, ಪುತ್ತೂರು ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ನರ್ಸಿಂಗ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಗ ಚಿರಂತ್ ಪಿಂಡಿಮನೆ, ಮೆರೈನ್ ಇಂಜಿನಿಯರ್ ಆಗಿ, ಮರ್ಚೆಂಟ್ ನೇವಿ ಮುಂಬೈಯಲ್ಲಿ ಉದ್ಯೋಗದಲ್ಲಿದ್ದಾರೆ. ಕೃಷಿ ಆಸಕ್ತರಾಗಿರುವ ಪಿಂಡಿಮನೆಯವರಿಗೆ ಪುಸ್ತಕ ಓದುವ, ಸಂಗೀತ ಕೇಳುವ ಹಾಗೂ ಭಾವಗೀತೆ ಹಾಡುವ ಹವ್ಯಾಸಗಳಿವೆ. ಪ್ರಸ್ತುತ ಇವರು ಸುಳ್ಯದ ಕಾಂತಮಂಗಲದ “ಚಿರಂತನ” ಮನೆಯಲ್ಲಿ ವಾಸವಾಗಿದ್ದಾರೆ.










