ಸುಳ್ಯ : ಬಿದ್ದು ಸಿಕ್ಕಿದ್ದ ಚಿನ್ನಕ್ಕೆ ಬಹುಮಾನವಾಗಿ ಕೇವಲ ಹತ್ತು ಸಾವಿರ ರೂ. ಮಾತ್ರ ನೀಡಿ 1 ಲಕ್ಷ ನೀಡಿರುವುದಾಗಿ ಪ್ರಚಾರ

0

ಸತ್ಯ ಪ್ರಮಾಣಕ್ಕೆ ಬರಲಿ – ಕಾನತ್ತೂರಿನ ಕುಟುಂಬದ ಸದಸ್ಯರಿಂದ ಸುಳ್ಯದಲ್ಲಿ ಪತ್ರಿಕಾಗೋಷ್ಠಿ

ಎರಡು ತಿಂಗಳ ಹಿಂದೆ ಕನಕಮಜಲಿನ ಭಜನಾ ಮಂದಿರದಲ್ಲಿ ನಡೆದಿದ್ದ ಮದುವೆ ಸಮಾರಂಭದಲ್ಲಿ ಅಡ್ತಲೆಯ ಭೋಜಪ್ಪ ಅಜಿಲ ಎಂಬವರು ಕಳೆದುಕೊಂಡಿದ್ದ ಸುಮಾರು 6 ಪವನ್ ಚಿನ್ನದ ಬ್ರಾಸ್ಲೈಟ್ ಅನ್ನು ಅದು ಬಿದ್ದು ಸಿಕ್ಕಿದ್ದ ನಾನು ಹಿಂತಿರುಗಿ ಅವರಿಗೆ ಕೊಟ್ಟಾಗ 10 ಸಾವಿರ ರೂ. ನಗದು ಮತ್ತು 1 ಉಂಗುರ ಮಾತ್ರ ನನಗೆ ಕೊಟ್ಟಿದ್ದು, ನಮಗೆ ಒಂದು ಲಕ್ಷ ರೂಪಾಯಿ ಮತ್ತು ಒಂದು ಚಿನ್ನದ ಉಂಗುರವನ್ನು ನೀಡಿದ್ದೇನೆ ಎಂದು ಭೋಜಪ್ಪ ಅಜಿಲರು ಮಾಧ್ಯಮಗಳ ಮೂಲಕ ಸುಳ್ಳು ಹೇಳಿಕೆಯನ್ನು ನೀಡಿದ್ದಾರೆ ಎಂದು ಕಾನತ್ತೂರಿನ ಕುಟುಂಬ ಒಂದರ ಸದಸ್ಯರು ಜುಲೈ 29 ರಂದು ಸುಳ್ಯ ದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ.

ಬ್ರಾಸ್ಲೈಟ್ ಬಿದ್ದು ಸಿಕ್ಕಿದ್ದ ಯುವತಿ ಕಾನತ್ತೂರಿನ ನಿವಾಸಿ ರೆಂಜಿನಾ ಎಂಬವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಮಂಡೆಕೋಲಿನಲ್ಲಿ ನಡೆದ ನಮ್ಮ ಕುಟುಂಬದ ಸದಸ್ಯರೋರ್ವರ ಮದುವೆ ಸಮಾರಂಭಕ್ಕೆ ಕನಕಮಜಲಿಗೆ ಬಂದಿದ್ದ ನನಗೆ‌ ಮಂದಿರದ ಹೊರಗಡೆ ವಾಹನ ಪಾರ್ಕಿಂಗ್ ಮಾಡುವ ಜಾಗದಲ್ಲಿ ಬ್ರಾಸ್ಲೈಟ್ ಬಿದ್ದು ಸಿಕ್ಕಿತ್ತು. ಆದರೆ ಅದು ಚಿನ್ನ ಎಂಬ ಬಗ್ಗೆ ನಮಗೆ ಖಚಿತ ಮಾಹಿತಿ ಇರಲಿಲ್ಲ. ಆದರೆ ಯಾರಾದರೂ ಕೇಳಿದರೆ ಕೊಡಬಹುದು ಎಂಬ ನಿಟ್ಟಿನಲ್ಲಿ ಅದನ್ನು ನಾವು ತೆಗೆದು ನಮ್ಮ ಬಳಿ ಇರಿಸಿಕೊಂಡಿದ್ದೆವು.‌ ಮದುವೆ ಸಮಾರಂಭ ಕಳೆದ ಬಳಿಕ ನಾವು ಮಂಡಕೊಲಿಗೆ ಕುಟುಂಬದ ಮನೆಗೆ ಹೋಗಿದ್ದು ಅಲ್ಲಿ ಇದ್ದ ಕೆಲವು ಮಂದಿ ಅಡ್ತಲೆಯವರೊಬ್ಬರು ಚಿನ್ನ ಕಳೆದುಕೊಂಡಿರುವ ವಿಷಯದ ಕುರಿತು ಮಾತನಾಡಿಕೊಳ್ಳುತ್ತಿದ್ದರು.

ಈ ಸಂದರ್ಭದಲ್ಲಿ ನಾವು ನಮಗೆ ಅದು ಸಿಕ್ಕಿರುವ ಮಾಹಿತಿಯನ್ನು ನೀಡಿದ್ದು ಅದನ್ನು ನಮ್ಮದೇ ಕುಟುಂಬದ ಸದಸ್ಯರು ಅವರಿಗೆ ಹೇಳಿದರು. ಚಿನ್ನ ಕಳೆದುಕೊಂಡಿದ್ದ ಭೋಜಪ್ಪ ಅಜಿಲರವರು ಮಾರನೆಯ ದಿನ ಮಂಡೆಕೋಲಿಗೆ ಬಂದು ಈ ಚಿನ್ನವನ್ನು ನಮ್ಮ ಕೈಯಿಂದ ಪಡೆದುಕೊಂಡಿದ್ದು, ಈ ಸಂದರ್ಭದಲ್ಲಿ ಅವರು ನಮಗೆ 10 ಸಾವಿರ ರೂ. ಮತ್ತು ಒಂದು ಚಿನ್ನದ ಉಂಗುರವನ್ನು ನೀಡಲು ಬಂದಾಗ ನಾವು ಬೇಡ ಎಂದು ನಿರಾಕರಿಸಿದೆವು. ಆದರೆ ಅವರು ಒತ್ತಾಯ ಮಾಡಿ 10 ಸಾವಿರ ರೂ. ಮತ್ತು ಒಂದು ಚಿನ್ನದ ಉಂಗುರವನ್ನು ನಮಗೆ ನೀಡಿ, ನಾನು ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದೆ. ಉಳಿದ ಮೊತ್ತವನ್ನು ಒಂದೆರಡು ದಿನಗಳ ಬಳಿಕ ನಿಮ್ಮ ಬ್ಯಾಂಕ್‌ ಖಾತೆಗೆ ಹಾಕುವುದಾಗಿ ಹೇಳಿ ಹೋಗಿದ್ದರು.


ಆದರೆ ಅವರು ಪಡೆದುಕೊಂಡು ಹೋದ ಮಾರನೆಯ ದಿನ ಯೂಟ್ಯೂಬ್ ಚಾನಲ್ ಒಂದರಲ್ಲಿ ಚಿನ್ನವನ್ನು ಮರಳಿಸಿದ ಮನೆಯವರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಒಂದು ಚಿನ್ನದ ಉಂಗುರವನ್ನು ನೀಡಿರುವುದಾಗಿ ಅವರು ಸುಳ್ಳು ಹೇಳಿಕೆಯನ್ನು ನೀಡಿದ್ದು ಇದರಿಂದ ನನಗೆ ಮತ್ತು ನಮ್ಮ ಮನೆಯವರಿಗೆ ತುಂಬಾ ಮಾನಸಿಕ ತೊಂದರೆ ಉಂಟಾಗಿದೆ. ಅಲ್ಲದೆ ಊರಿನವರು ನನ್ನಲ್ಲಿ ಅವರು ಒಂದು ಲಕ್ಷ ರೂಪಾಯಿ ನೀಡಿರುವುದಾಗಿ ಮತ್ತು ನಾನು ಸುಳ್ಳು ಹೇಳುವುದಾಗಿ ಜನರು ಮಾತನಾಡಿಕೊಳ್ಳುತ್ತಿದ್ದು ಇದರಿಂದ ನನಗೆ ಮಾನಸಿಕವಾಗಿ ತುಂಬಾ ನೋವು ಉಂಟಾಗಿದೆ. ನಮಗೆ ಹಣ ಮುಖ್ಯವಲ್ಲ. ನಾವು ಅವರಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟವರೂ ಅಲ್ಲ. ಆದರೆ ಅವರೇ ನನಗೆ ಒತ್ತಾಯ ಪೂರ್ವಕವಾಗಿ ಕೊಟ್ಟು ಮಾಧ್ಯಮ ಹೇಳಿಕೆಯ ಮೂಲಕ ಒಂದು ಲಕ್ಷ ನೀಡಿರುವ ಬಗ್ಗೆ ತಪ್ಪು ಸಂದೇಶವನ್ನು ನೀಡಿರುವುದು ಸರಿಯಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ತಮ್ಮ ನೋವನ್ನು ಹಂಚಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಯುವತಿಯ ತಾಯಿ ಓಮನ ಎಂಬವರು ಮಾತನಾಡಿ ‘ಕೇವಲ ಹತ್ತು ಸಾವಿರ ರೂಪಾಯಿ ಮತ್ತು ಚಿನ್ನದ ಉಂಗುರ ನೀಡಿದ್ದ ಅವರು ಮಾಧ್ಯಮದ ಮುಂದೆ ಕುಳಿತು ಒಂದು ಲಕ್ಷ ರೂಪಾಯಿ ಮತ್ತು ಚಿನ್ನದ ಉಂಗುರ ನೀಡಿರುತ್ತೇನೆ ಎಂದು ಸಮಾಜಕ್ಕೆ ತಪ್ಪು ಸಂದೇಶವನ್ನು ನೀಡಿದ್ದಾರೆ. ಇದು ಸರಿಯಲ್ಲ. ಅವರು ಕೊಟ್ಟಿರುವ ಚಿನ್ನದ ಉಂಗುರ ಮತ್ತು 10 ಸಾವಿರ ರೂ. ಈಗಲೂ ಕೂಡ ನಮ್ಮ ಕೈಯಲ್ಲೇ ಇದೆ. ಅದನ್ನು ನಾವು ಅವರಿಗೆ ಹಿಂತಿರುಗಿಸಲು ಸಿದ್ಧರಿದ್ದೇವೆ. ಆದರೆ ಅವರು ಇದೀಗ ಒಂದು ಲಕ್ಷ ನೀಡಿರುವುದಾಗಿ ಎಲ್ಲರ ಬಳಿಯಲ್ಲಿಯೂ ಹೇಳಿಕೊಳ್ಳುತ್ತಿದ್ದು, ಅವರು ನಾವು ಹೇಳುವ ಜಾಗದಲ್ಲಿ ಅಥವಾ ಅವರು ಹೇಳುವ ಜಾಗದಲ್ಲಿ ಸತ್ಯ ಪ್ರಮಾಣಕ್ಕೆ ಬರಲಿ ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಯುವತಿಯ ಅಜ್ಜಿ ಭಾಗೀರಥಿ ಕಲ್ಮಡ್ಕ, ಹಿರಿಯ ಸಹೋದರಿ ರೇವತಿ, ಹಾಗೂ ಸಹೋದರ ರಂಜಿತ್ ಉಪಸ್ಥಿತರಿದ್ದರು.