ಐವರ್ನಾಡು : ಕಸ್ತೂರಿ ರಂಗನ್ ವರದಿ ವಿರುದ್ಧ ಗ್ರಾಮಸ್ಥರ ಸಭೆ

0

ಸ್ಪಷ್ಟಮಾಹಿತಿ ಪಡೆದು ಒಗ್ಗಟ್ಟಿನ ಹೋರಾಟಕ್ಕೆ ಗ್ರಾಮಸ್ಥರ ನಿರ್ಧಾರ

ಕಸ್ತೂರಿರಂಗನ್ ವರದಿ ವ್ಯಾಪ್ತಿಗೆ ಐವರ್ನಾಡು ಸಹಿತ 5 ಗ್ರಾಮಗಳನ್ನು ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಲಾಗಿದೆ ಎಂಬ ಸುದ್ದಿಗಳ ಹಿನ್ನೆಲೆಯಲ್ಲಿ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಗ್ರಾಮಸ್ಥರ ಸಭೆಯು ಅ.09 ರಂದು ನಡೆಯಿತು.
ಮಾಹಿತಿ ಹಕ್ಕಿನ ಮೂಲಕ ಸರಿಯಾದ ಮಾಹಿತಿ ಪಡೆದು ಸಂಘಟಿತ ವಿರೋಧಕ್ಕೆ ನಿರ್ಧರಿಸಲಾಯಿತು.


ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್‌ ಶಿರಾಡಿ ಮಾತನಾಡಿ, ಐವರ್ನಾಡು ಸಹಿತ ಐದು ಗ್ರಾಮಗಳನ್ನು ಕಸ್ತೂರಿರಂಗನ್ ವರದಿ ವ್ಯಾಪ್ತಿಗೆ ಹೆಚ್ಚುವರಿಯಾಗಿ ಸೇರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಈ ಕುರಿತು ಅಧಿಕೃತ ದಾಖಲೆಗಳ ಮೂಲಕ ಖಚಿತಪಡಿಸಿಕೊಳ್ಳುವ ಅಗತ್ಯವಿದೆ. ಈ ಉದ್ದೇಶದಿಂದ ಮಾಹಿತಿ ಹಕ್ಕು ಕಾಯಿದೆಯಡಿ ಅರ್ಜಿ ಸಲ್ಲಿಸಲಾಗಿದೆ. ಆನೆ ಕಾರಿಡಾರ್‌ ಸೇರಿದಂತೆ ವಿವಿಧ ನಿರ್ಬಂಧಗಳ ವಿಚಾರದಲ್ಲಿಯೂ ಗ್ರಾಮಸ್ಥರು ಜಾಗರೂಕರಾಗಿರಬೇಕು ಎಂದು ತಿಳಿಸಿದರು.
ಗ್ರಾಮಗಳ ಭೌಗೋಳಿಕ ವ್ಯಾಪ್ತಿ, ಕೃಷಿ ಹಾಗೂ ಇತರ ಚಟುವಟಿಕೆಗಳ ಮೇಲೆ ನಿರ್ಬಂಧಗಳು ಬೀರುವ ಸಾಧ್ಯತೆ ಮತ್ತು ಸ್ಥಳೀಯರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಹೆಜ್ಜೆ ಇಡಬೇಕು. ಯಾವುದೇ ನಿರ್ಧಾರದಿಂದ ಜನರಿಗೆ ತೊಂದರೆಯಾಗುವ ಸಾಧ್ಯತೆ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಸಬೇಕು. ಅಗತ್ಯಬಿದ್ದರೆ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಲು ಸಿದ್ಧರಾಗಬೇಕು ಎಂದು ಕರೆ ನೀಡಿದರು.

ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್. ಎನ್. ಮನ್ಮಥ ಮಾತನಾಡಿ, ಐವರ್ನಾಡು ಗ್ರಾಮವೂ ಕಸ್ತೂರಿರಂಗನ್ ವರದಿ ವ್ಯಾಪ್ತಿಗೆ ಸೇರ್ಪಡೆಯಾಗಿದೆ ಎಂಬ ಮಾಹಿತಿ ಇದೆ. ಆದರೆ, ಈ ಕುರಿತು ಅಧಿಕೃತ ಸ್ಪಷ್ಟತೆ ದೊರೆಯಬೇಕಿದೆ. ಈಗಾಗಲೇ ಫಾರೆಸ್ಟ್ ಕಾಯಿದೆಯಿಂದಲೂ ಗ್ರಾಮ ಸಮಸ್ಯೆ ಎದುರಿಸುತ್ತಿದ್ದು ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಗೆ ಸೇರಿದರೆ ಭವಿಷ್ಯದ ಪೀಳಿಗೆ ಇಲ್ಲಿ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಕಸ್ತೂರಿರಂಗನ್ ವರದಿ ಅನುಷ್ಠಾನಕ್ಕೆ ಸಂಬಂಧಿಸಿದ ಬೆಳವಣಿಗೆಗಳು, ಪುಷ್ಪಗಿರಿ ವನ್ಯಧಾಮದ ವ್ಯಾಪ್ತಿಯಿಂದ ತೊಡಗಿ ಈಗಾಗಲೇ ಜಾರಿಯಲ್ಲಿ ರುವ ಅರಣ್ಯ ಕಾಯಿದೆಗಳಿಂದ ಗ್ರಾಮೀಣ ಪ್ರದೇಶಗಳ ಜನರು ಎದುರಿಸಬಹುದಾದ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ವರದಿ ವ್ಯಾಪ್ತಿಗೆ ಗ್ರಾಮಗಳ ಸೇರ್ಪಡೆ ಕುರಿತಂತೆ ಹರಿದಾಡುತ್ತಿರುವ ಮಾಹಿತಿಯ ಬಗ್ಗೆ ಸ್ಪಷ್ಟತೆ ಪಡೆಯುವುದು ಮತ್ತು ಜನರಿಗೆ ತೊಂದರೆಯಾಗುವ ಸಾಧ್ಯತೆಗಳಿದ್ದರೆ ಒಗ್ಗಟ್ಟಿನಿಂದ ಪ್ರತಿಕ್ರಿಯಿಸಲು ಸಭೆ ನಿರ್ಧರಿಸಿತು.
ಈಗಾಗಲೇ ಇಂತಹ ನಿರ್ಬಂಧಗಳಿಂದ ಬಾಧಿತವಾಗಿರುವ ಇತರ ಗ್ರಾಮಗಳ ಜನರ ಸಮಸ್ಯೆಗಳನ್ನು ಕಡೆಗಣಿಸಬಾರದು. ಅವರ ಹೋರಾಟಕ್ಕೆ ಬೆಂಬಲ ನೀಡಬೇಕು. ಇಂದು ಮತ್ತೊಂದು ಗ್ರಾಮ ಎದುರಿಸುತ್ತಿರುವ ಸಮಸ್ಯೆ ನಾಳೆ ನಮ್ಮ ಗ್ರಾಮಕ್ಕೂ ಎದುರಾಗಬಹುದು. ಆದ್ದರಿಂದ ಇಂತಹ ವಿಚಾರಗಳಲ್ಲಿ ಗ್ರಾಮಸ್ಥರು ಮೊದಲಿನಿಂದಲೇ ಜಾಗೃತರಾಗಿರಬೇಕು ಎಂದು ತಿಳಿಸಿದರು.
ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘ ಪುತ್ತೂರು ಇದರ ಅಧ್ಯಕ್ಷ ಚಂದ್ರ ಕೋಲ್ಚಾರ್ ಮಾತನಾಡಿ ಕಸ್ತೂರಿ ರಂಗನ್ ಹೋರಾಟಕ್ಕೆ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದು ಹೇಳಿದರು.
ಗ್ರಾಮಸ್ಥರ ಒಗ್ಗಟ್ಟಿಗೆ ಒತ್ತು: ಕಸ್ತೂರಿರಂಗನ್ ವರದಿ ವ್ಯಾಪ್ತಿಗೆ ಗ್ರಾಮಗಳ ಸೇರ್ಪಡೆ ಕುರಿತು ಸ್ಪಷ್ಟ ಮಾಹಿತಿ ಪಡೆಯುವುದು, ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಜಾರಿಯಾಗಬಹುದಾದ ನಿರ್ಬಂಧಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಹಾಗೂ ಜನರ ಹಿತಾಸಕ್ತಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟರು.
ಕಸ್ತೂರಿ ರಂಗನ್ ಬಗ್ಗೆ ಸಮಿತಿ ರಚನೆ
ಕಸ್ತೂರಿ ರಂಗನ್ ಹೋರಾಟಕ್ಕೆ ಸಂಬಂಧಿಸಿ ಸಮಿತಿಯನ್ನು ರಚಿಸಲಾಯಿತು.
ಸತೀಶ ಎಡಮಲೆ,ಶಿವರಾಮ ನೆಕ್ರೆಪ್ಪಾಡಿ,ರಮೇಶ ಮಿತ್ತಮೂಲೆ,ರಂಜನ್ ಮೂಲೆತೋಟ,ಚಂದ್ರಕಾಂತ ಕೋಡ್ತೀಲು 5 ಜನರ ಸಮಿತಿಯನ್ನು ರಚಿಸಲಾಯಿತು.
ಮುಂದೆ ಅಗತ್ಯ ಇದ್ದರೆ ಹೋರಾಟವನ್ನು ಬಲಪಡಿಸಲು ಸಮಿತಿಗೆ ಮತ್ತಷ್ಟು ಜನರನ್ನು ಸೇರಿಸಿಕೊಳ್ಳುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಜಯಪ್ರಕಾಶ್‌ ಕೂಜುಗೋಡು, ಲೀಲಾವತಿ ಕುತ್ಯಾಡಿ, ಮಾಧವ ಭಟ್ ಶೃಂಗೇರಿ , ಕರುಣಾಕರ ಮಡ್ತಿಲ ಹಾಗೂ ಶಿವರಾಮ ನೆಕ್ರಪ್ಪಾಡಿ, ಮನೋಜ್ ಮಡ್ತಿಲ, ರಾಜೇಶ್
ಭಟ್, ನವೀನ್ ಚಾತುಬಾಯಿ, ಬಾಲಕೃಷ್ಣ ಕೀಲಾಡಿ, ಬಾಲಕೃಷ್ಣ ಮಡ್ತಿಲ, ಮಹೇಶ್ ಹುಲಿಮನೆ, ಸತೀಶ್ ಎಡಮಲೆ, ರವಿನಾಥ ಮಡ್ತಿಲ, ರಮೇಶ್ ಮಿತ್ತಮೂಲೆ, ರಂಜನ್ ಮೂಲೆತೋಟ, ಮಹೇಶ್‌ ಜಬಳೆ, ಸಚಿನ್ ಕೊಚ್ಚಿ ಭಾಗವಹಿಸಿದ್ದರು.
ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ ಸ್ವಾಗತಿಸಿ,ಸಹಕಾರಿ ಸಂಘದ ನಿರ್ದೇಶಕ ಸತೀಶ್ ಎಡಮಲೆ ವಂದಿಸಿದರು.
ಸಭೆಯಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ತಿಳಿಸಿದರು.