













ಸಂಪಾಜೆ ಗ್ರಾಮದ ಕಡಪಾಲದಲ್ಲಿ ಸೊಸೆಗೆ ಹಿಂಸೆ ನೀಡಿ ಆಕೆಯ ಮಾವ, ಅತ್ತೆ, ನಾದಿನಿ ಕೊಲೆಗೈದಿದ್ದಾರೆಂಬ ಆರೋಪದಲ್ಲಿ ಜೈಲು ಸೇರಿದ್ದ ಮೂವರಿಗೂ ಜಾಮೀನು ದೊರೆತಿರುವುದಾಗಿ ತಿಳಿದುಬಂದಿದೆ.
ಕಡಪಾಲ ಎಂಬಲ್ಲಿನ ಅನ್ಸಾರ್ ಎಂಬವರ ಪತ್ನಿ ಫಾತಿಮಾ ನಿಶಾನ ರವರನ್ನು 2026 ಜು.18ರಂದು ರಾತ್ರಿ ಸಮಯ ಆಕೆಯ ಮಾವ, ಅತ್ತೆ ಮತ್ತು ನಾದಿನಿ ಸೇರಿ ಒಟ್ಟಾಗಿ ಸೇರಿಕೊಂಡು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಕೊಲೆ ಮಾಡಿದ್ದಾರೆಂದು ಆರೋಪಿಸಿ ಮೃತಳ ತಾಯಿ ಜುಬೈದ ಎಂಬವರು ನೀಡಿದ ದೂರಿನ ಮೇರೆಗೆ ಸುಳ್ಯ ಪೊಲೀಸರು ಸಂಪಾಜೆ ಯ ಕಡಪಾಲ ಎಂಬಲ್ಲಿನ ಅಲವಿ, ಆಯಿಷಾ ಮತ್ತು ಫಸೀಲಾ ಎಂಬವರ ವಿರುದ್ಧ ಕೊಲೆ ಆರೋಪದ ಪ್ರಕರಣವನ್ನು ದಾಖಲಿಸಿದ್ದರು. ಈ ದೂರಿನ ಮೇರೆಗೆ ಎಲ್ಲಾ ಮೂರು ಆರೋಪಿಗಳನ್ನು 2026 ಜು.22ರಂದು ಸುಳ್ಯ ಪೊಲೀಸ್ ಠಾಣೆಗೆ ಕರೆಸಿ ಕೊಂಡು ಅವರು ನೀಡಿದ್ದಾರೆ ಎನ್ನಲಾದ ತಪ್ಪು ಒಪ್ಪಿಗೆ ಆಧಾರದ ಮೇರೆಗೆ ಸುಳ್ಯ ಪೊಲೀಸ್ ವೃತ ನಿರೀಕ್ಷಕರು ಆರೋಪಿಗಳನ್ನು ದಸ್ತಗಿರಿ ಮಾಡಿ 2026 ಜು.23ರಂದು ಸುಳ್ಯ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್. ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ತದನಂತರ ಆರೋಪಿ ಆಯಿಷ ಮತ್ತು ಫಸೀಲಾ ರವರ ಪರವಾಗಿ ಜಾಮೀನಿಗಾಗಿ ಪುತ್ತೂರು ಐದನೇ ಹೆಚ್ಚುವರಿ ಸತ್ರ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಲಾಗಿ ಜಾಮೀನಿನ ಮೇಲೆ ಬಿಡುಗಡೆ ಗೊಳಿಸಿ 2026 ಆ.31ರಂದು ಆದೇಶವನ್ನು ಮಾಡಿರುತ್ತಾರೆ. ಆದರೆ ಒಂದನೇ ಆರೋಪಿಯಾದ ಅಲವಿ ಜೈಲಿನಲ್ಲೇ ಇದ್ದು ಅವರ ಪರವಾಗಿ ಜಾಮೀನಿಗಾಗಿ ಪುತ್ತೂರು ಐದನೇ ಹೆಚ್ಚುವರಿ ಸತ್ರ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಲಾಗಿತ್ತು. ಸದರಿ ಜಾಮೀನು ಅರ್ಜಿಯ ಮೇಲೆ ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯದ ನ್ಯಾಯಧೀಶರಾದ ಸದಾನಂದ ನಾಗಪ್ಪ ನಾಯ್ಕ್ ರವರು ಆರೋಪಿ ಅಲವಿ ರವರನ್ನು ಶರ್ತ ಬದ್ಧ ಜಾಮೀನಿನ ಮೇಲೆ ಬಿಡುಗಡೆ ಗೊಳಿಸಿ 2026ಅ.5ರಂದು ಆದೇಶವನ್ನು ಮಾಡಿರುತ್ತಾರೆ. ಹಾಗಾಗಿ ಈ ಪ್ರಕರಣದ ಎಲ್ಲಾ ಆರೋಪಿಗಳು ಜಾಮೀನಿನಲ್ಲಿ ಬಿಡುಗಡೆ ಆದಂತಾಗಿದೆ.
ಆರೋಪಿಯ ಪರವಾಗಿ ಸುಳ್ಯದ ಹಿರಿಯ ನ್ಯಾಯವಾದಿಯಾದ ಎಮ್.ವೆಂಕಪ್ಪ ಗೌಡ, ಚಂಪಾ.ವಿ ಗೌಡ, ರಾಜೇಶ್ ಬಿ.ಜಿ,ಶ್ಯಾಮ್ ಪ್ರಸಾದ್ ಎನ್.ಕೆ ಹಾಗೂ ವಿಮಲೇಶ್ ಆರ್.ಗೌಡ ರವರು ವಾದಿಸಿದ್ದರು.







