ನೂತನ ಶಾಸಕಿ ಭಾಗೀರಥಿ ಮುರುಳ್ಯರಿಗೆ ಅಭಿನಂದನೆ ಸಲ್ಲಿಸಿದ ಕಾಂಗ್ರೆಸ್

0


ಅಭಿವೃದ್ಧಿಗಿಂತ ಭಾವನೆಗೆ ಬೆಲೆ : ಕಾಂಗ್ರೆಸ್ ಸೋಲಿಗೆ ನಾಯಕರ ವಿಶ್ಲೇಷಣೆ


ಸುಳ್ಯ ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಬದ್ಧ


ಸುಳ್ಯದ ಸೋಲಿನಿಂದ ಬೇಸರವಾಗಿಲ್ಲ, ಸೋತರೂ ಕ್ಷೇತ್ರದಲ್ಲಿದ್ದುಕೊಂಡು ಕೆಲಸ ಮಾಡುವೆ ಎಂದು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಜಿ. ಕೃಷ್ಣಪ್ಪ ಹೇಳಿದರೆ, ಇಲ್ಲಿ ಸೋತರೂ ರಾಜ್ಯದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದಿದೆ. ಸುಳ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಪೂರ್ಣ ಪ್ರಮಾಣದಲ್ಲಿ ಸಹಕರಿಸುತ್ತೇವೆ ಎಂದು ಸುಳ್ಯದ ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಸುಳ್ಯದ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಪರಾಜಿತ ಅಭ್ಯರ್ಥಿ ಜಿ. ಕೃಷ್ಣಪ್ಪ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ನೂತನ ಶಾಸಕಿ ಭಾಗೀರಥಿ ಮುರುಳ್ಯರಿಗೆ ಅಭಿನಂದನೆ ಸಲ್ಲಿಸಿದರು.
ನನಗೆ ಇಲ್ಲಿ ಸ್ಪರ್ಧೆ ಮಾಡಲು ಅವಕಾಶ ಮಾಡಿಕೊಟ್ಟ ಕಾಂಗ್ರೆಸ್ ನಾಯಕರಿಗೆ ಹಾಗೂ ಬೆಂಬಲಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಸೋತದ್ದಕ್ಕೆ ಬೇಸರವಿಲ್ಲ. ಇನ್ನೂ ಕ್ಷೇತ್ರದಲ್ಲಿದ್ದುಕೊಂಡು ಜನರಿಗೆ ಸ್ಪಂದಿಸುತ್ತೇನೆ ಎಂದು ಜಿ. ಕೃಷ್ಣಪ್ಪ ಹೇಳಿದರು.


ಕಾಂಗ್ರೆಸ್ ಅಭ್ಯರ್ಥಿಯ ವಿಜಯಕ್ಕಾಗಿ ಎಲ್ಲಾ ನಾಯಕರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ದುಡಿದಿದ್ದೇವೆ. ನಮಗೆ ಪೂರಕವಾದ ವಾತಾವರಣವೂ ಇತ್ತು. ಆದರೆ ನಿರೀಕ್ಷಿಸದ ರೀತಿಯಲ್ಲಿ ಫಲಿತಾಂಶ ಬಂದಿದೆ. ಜನಾಭಿಪ್ರಾಯಕ್ಕೆ ತಲೆಬಾಗುತ್ತೇವೆ. ನಾವು ಎಡವಿದ್ದೆಲ್ಲಿ ಎಂದು ಯೋಚಿಸಿ ತಿದ್ದಿಕೊಂಡು ಮುಂದಿನ ಚುನಾವಣೆಗೆ ಸಿದ್ಧರಾಗುತ್ತೇವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ್ ಹೇಳಿದರು. ರಾಜ್ಯದಲ್ಲಿ ಜನತೆ ಭ್ರಷ್ಟ ಬಿಜೆಪಿ ಸರಕಾರವನ್ನು ತೊಲಗಿಸಿದ್ದಾರೆ. ನಮ್ಮ ಸರಕಾರ ನೀಡಿರುವ ಗ್ಯಾರಂಟಿಯನ್ನು ಮನೆ ಮನೆಗೆ ತಲುಪಿಸಲು ನಾವು ಬದ್ಧರಾಗಿದ್ದೇವೆ ಎಂದು ಪಿ.ಸಿ.ಜಯರಾಮ್ ಹೇಳಿದರು.
ರಾಜ್ಯದಲ್ಲಿ ಮತದಾರರು ಬಿಜೆಪಿಯನ್ನು ಕಿತ್ತೊಗೆದಿದ್ದರೂ ಜಿಲ್ಲೆಯಲ್ಲಿ ಮತ್ತು ನಮ್ಮ ಕ್ಷೇತ್ರದಲ್ಲಿ ವ್ಯತಿರಿಕ್ತ ಫಲಿತಾಂಶ ಬಂದಿದೆ. ಇದರಿಂದ ಧೃತಿಗೆಡುವ ಪ್ರಶ್ನೆಯೇ ಇಲ್ಲ. ಬದುಕು ಮತ್ತು ಅಭಿವೃದ್ಧಿಯ ಬಗ್ಗೆ ಯೋಚಿಸದೆ ಭಾವನಾತ್ಮಕ ವಿಷಯಗಳಿಗೆ ಬೆಲೆ ನೀಡಿದ ಪರಿಣಾಮ ಇಂತಹ ಸೋಲಾಗಿದೆ. ಈ ಕುರಿತು ಅವಲೋಕಿಸಿ ಮತ್ತೆ ಮತದಾರರ ವಿಶ್ವಾಸ ಗಳಿಸುವ ಪ್ರಯತ್ನ ಮಾಡುತ್ತೇವೆ. ವಾಸ್ತವವನ್ನು ಯುವ ಮತದಾರರಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡುತ್ತೇವೆ ಎಂದು ಭರತ್ ಮುಂಡೋಡಿ ಹೇಳಿದರು.
ಕ್ಷೇತ್ರದಲ್ಲಿ ಯಾವುದೇ ರೀತಿಯ ಕಳಪೆ ಕಾಮಗಾರಿ ಆಗದಂತೆ, ಭ್ರಷ್ಟಾಚಾರ ನಡೆಯದಂತೆ ವಾಚ್‌ಗಾರ್ಡ್‌ಗಳಾಗಿ ಮುಂದಿನ ೫ ವರ್ಷ ನಾವು ಇಲಾಖೆಗಳ ಮೇಲೆ ನಿಗಾ ಇರಿಸುತ್ತೇವೆ ಎಂದವರು ಹೇಳಿದರು.


ಸುಳ್ಯದ ೧೧೦ ಕೆವಿ ಸಬ್‌ಸ್ಟೇಷನ್ ಕಾಮಗಾರಿ, ಅಡಿಕೆ ಬೆಳೆಗಾರರಿಗೆ ಸ್ಪಂದನೆ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ನಾವು ಬದ್ಧರಿದ್ದೇವೆ ಎಂದು ಅವರು ಹೇಳಿದರು.
ಕಾಂಗ್ರೆಸ್ ರಾಜ್ಯ ವಕ್ತಾರ ಟಿ.ಎಂ.ಶಹೀದ್, ತಾಲೂಕು ಪ್ರಚಾರ ಸಮಿತಿ ಸಂಚಾಲಕ ಸದಾನಂದ ಮಾವಜಿ, ಕಾಂಗ್ರೆಸ್ ಮುಖಂಡರಾದ ಎಸ್.ಸಂಶುದ್ದೀನ್, ರಾಜೀವಿ ಆರ್. ರೈ, ಪಿ.ಎಸ್.ಗಂಗಾಧರ್, ಕಳಂಜ ವಿಶ್ವನಾಥ ರೈ, ಕೆ.ಎಂ. ಮುಸ್ತಫಾ, ಸಿದ್ದೀಕ್ ಕೊಕ್ಕೋ, ಕೀರ್ತನ್ ಕೊಡಪಾಲ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.