ಸುಳ್ಯ ನಗರ ಪಂಚಾಯತ್ ಇದರ ಪ್ರಥಮ ಎರಡೂವರೆ ವರ್ಷದ ಅಧ್ಯಕ್ಷ – ಉಪಾಧ್ಯಕ್ಷರ ಅಧಿಕಾರ ಅವಧಿ ಮೇ.5 ಕ್ಕೆ ಮುಕ್ತಾಯಗೊಂಡಿದೆ.
ನಗರ ಪಂಚಾಯತ್ ನ ಅಧ್ಯಕ್ಷ – ಉಪಾಧ್ಯಕ್ಷರ ಪ್ರಥಮ ಅವಧಿ ಎರಡೂವರೆ ವರ್ಷಕ್ಕೆ ಸರಕಾರ ನಿಗಧಿ ಮಾಡಿತ್ತಲ್ಲದೆ, ಸುಳ್ಯದ ನ.ಪಂ. ನ ಅಧ್ಯಕ್ಷತೆ ಸಾಮಾನ್ಯಕ್ಕೆ ಹಾಗೂ ಉಪಾಧ್ಯಕ್ಷ ಸಾಮಾನ್ಯ ಮಹಿಳೆಗೆ ನೀಡಿತ್ತು.
ಈ ಎರಡೂವರೆ ವರ್ಷದಲ್ಲಿ ವಿನಯಕುಮಾರ್ ಕಂದಡ್ಕ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಸರೋಜಿನಿ ಪೆಲತಡ್ಕ ಕಾರ್ಯನಿರ್ವಹಿಸಿದ್ದರು. ಇವರ ಅಧಿಕಾರವಧಿ ಮೇ.5 ಕ್ಕೆ ಮುಕ್ತಾಯಗೊಂಡಿದೆ. ಮುಂದಿನ ನ.ಪಂ. ನ ಅಧ್ಯಕ್ಷ -ಉಪಾಧ್ಯಕ್ಷ ರ ಆಯ್ಕೆ ಆಗುವಲ್ಲಿವರೆಗೆ ಆಡಳಿತ ನೋಡಿಕೊಳ್ಳಲು ಆಡಳಿತಾಧಿಕಾರಿ ನೇಮಕವಾಗಬೇಕಿದೆ. ಈ ಬಗ್ಗೆ ನ.ಪಂ. ನಿಂದ ಸರಕಾರಕ್ಕೆ ವರದಿ ನೀಡಲಾಗಿದೆ ಎಂದು ತಿಳಿದುಬಂದಿದೆ.
ಸುಳ್ಯ ನ.ಪಂ. ನ 20 ಸ್ಥಾನಗಳಿಗೆ 2019 ರಲ್ಲಿ ಚುನಾವಣೆ ನಡೆಸಲಾಗಿತ್ತು. ಚುನಾವಣೆಯಲ್ಲಿ 14 ಬಿಜೆಪಿ, 4 ಕಾಂಗ್ರೆಸ್ ಹಾಗೂ ಇಬ್ಬರು ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರು. 2020 ರ ನವೆಂಬರ್ ನಲ್ಲಿ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ ನಡೆದಿತ್ತು.