ಆಲೆಟ್ಟಿ ಬಡ್ಡಡ್ಕ ಕಲ್ಲಪಳ್ಳಿ ಗಡಿ ಪ್ರದೇಶದಲ್ಲಿರುವ ಪನತ್ತಡಿ ಪಂಚಾಯತ್ ವ್ಯಾಪ್ತಿಯ ಪ್ರತಿಷ್ಠಿತ ಮೇಲೆ ಪೆರುಮುಂಡ ತರವಾಡು ಮನೆಯ ದೈವಸ್ಥಾನದಲ್ಲಿ ಶ್ರೀ ದೈವಗಳ ಧರ್ಮ ನಡಾವಳಿಯು ಮೇ.20 ಮತ್ತು 21 ರಂದು ಭಕ್ತಿ ಸಂಭ್ರಮದಿಂದ ಜರುಗಿತು. ಮೇ.20ರಂದು ಬೆಳಗ್ಗೆ ವೆಂಕಟರಮಣ ದೇವರ ಹರಿಸೇವೆಯಾಗಿ ರಾತ್ರಿ ಕೆಂಚಿ ರಾಯನ ಪೂಜೆಯು ನಡೆದು ಬಳಿಕ ಶ್ರೀ ದೈವಗಳ ನಡಾವಳಿಗೆ ಕೂಡಿ ಶ್ರೀ ವಿಷ್ಣುಮೂರ್ತಿ ದೈವದ ಕುಲ್ಚಾಟವಾಗಿ ಗುರುಕಾರ್ನೋರು ದ್ಯಾವತೆ ದೈವದ ಕೋಲವು ನಡೆಯಿತು.
ಮರುದಿನ ಪ್ರಾತಕಾಲ ಗಂಟೆ 2.00 ರಿಂದ
ಪೊಟ್ಟನ್ ದೈವದ ಕೋಲ ಮತ್ತು ಪಂಜುರ್ಲಿ, ರಕ್ತೇಶ್ವರೀ ದೈವಗಳ ಕೋಲವಾಗಿ, ಬೆಳಗ್ಗೆ ಶ್ರೀ ಕುಕ್ಕೆತ್ತಿ- ಬೊಲ್ಲು ದೈವದ ಕೋಲವು ಜರುಗಿತು. ಮಧ್ಯಾಹ್ನ ಶ್ರೀ ವಿಷ್ಣುಮೂರ್ತಿ ಮತ್ತು ಧರ್ಮದೈವ (ರುದ್ರ ಚಾಮುಂಡಿ) ಹಾಗೂ ಪಾಷಾಣಮೂರ್ತಿ ದೈವಗಳ ಧರ್ಮ ನಡಾವಳಿಯು ನಡೆಯಿತು.
ಬಳಿಕ ಬಟ್ಟಲು ಕಾಣಿಕೆಯಾಗಿ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಯಿತು. ಆಗಮಿಸಿದ ಎಲ್ಲರಿಗೂ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆಯಾಯಿತು.ಅಪರಾಹ್ನ ಶ್ರೀ ಗುಳಿಗ ದೈವ ಮತ್ತು ಅಂಗಾರ ದೈವದ ಕೋಲವು ನಡೆದು ರಾತ್ರಿ ಅನ್ನ ಸಂತರ್ಪಣೆಯಾಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ರಮೇಶ್ ಪಿ.ಕೆ,
ಕುಟುಂಬದ ಯಜಮಾನ ಪಿ.ಸಿ.ರಾಮಪ್ಪ ಗೌಡ ಹಾಗೂ ಮೇಲೆ ಪೆರುಮುಂಡ ಕುಟುಂಬದ ಹಿರಿಯ ಕಿರಿಯ ಸದಸ್ಯರು ಸರ್ವರನ್ನೂ ಸ್ವಾಗತಿಸಿದರು. ಊರಿನ ಪರ ಊರಿನ ಭಕ್ತಾದಿಗಳು ಆಗಮಿಸಿ ಪ್ರಸಾದ ಸ್ವೀಕರಿಸಿದರು. ಸದ್ರಿ ದಿನಗಳಲ್ಲಿ ನಿರಂತರವಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.