ಜ್ಞಾನದ ಜಗತ್ತನ್ನು ಏರುವ ಮೊದಲ ಮೆಟ್ಟಿಲು ಪೂರ್ವ ಪ್ರಾಥಮಿಕ ಶಿಕ್ಷಣ. ಮನೆಗಳಿಂದ ಶಿಕ್ಷಣ ಪ್ರಪಂಚದೆಡೆ ಹೊರ ಬರುತ್ತಿರುವ ಪುಟಾಣಿಗಳಿಗೆ ಶಿಕ್ಷಣ ನೀಡುವ ಕಾಯಕವನ್ನು ಮೊಂಟೆಸ್ಸರಿ / ನರ್ಸರಿ ಶಿಕ್ಷಕಿಯರೇ ಮಾಡಬೇಕಿದೆ. ಸದ್ದಿಲ್ಲದೆ ನಡೆಯುತ್ತಿರುವ ಶಿಕ್ಷಣ ಸೇವೆಯೊಂದಿಗೆ ತನ್ನ ಉತ್ಕೃಷ್ಟ ತರಬೇತಿಯೊಂದಿಗೆ ಇಂತಹ ಅನೇಕ ಮೊಂಟೆಸ್ಸರಿ ಶಿಕ್ಷಕಿಯರನ್ನು ಬೆಳ್ಳಾರೆ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆ ಸಮಾಜಕ್ಕೆ ನೀಡುತ್ತಿದೆ.
ಶಿಕ್ಷಕಿಯರ ತರಬೇತಿಯನ್ನು ವಿಭಿನ್ನವಾಗಿ ನಡೆಸುತ್ತಿರುವ ಜ್ಞಾನದೀಪ ಮಗುವಿಗೆ ಗುರುತಿಸಿ ಕಲಿಯಲು ಅವಕಾಶ ಮಾಡಿಕೊಡುವ ಕಲಿಕಾ ಪದ್ದತಿಯಾದ ಮೊಂಟೆಸ್ಸರಿ ವಿಧಾನದ ವಿವಿಧ ಅಧ್ಯಯನ ಮಾದರಿಗಳನ್ನು ತಯಾರಿಸುವುದು ಅವುಗಳನ್ನು ಉಪಯೋಗಿಸಿಕೊಂಡು ಮಗುವಿಗೆ ಪರಿಣಾಮಕಾರಿಯಾಗಿ ಬೋಧಿಸುವ ವಿಧಾನಗಳನ್ನು ಕಲಿಸಿಕೊಡಲಾಗುತ್ತಿದೆ.
ಕೇಂದ್ರ ಸರ್ಕಾರದ ನಿರುದ್ಯೋಗ ನಿರ್ಮೂಲನ ಏಜೆನ್ಸಿಯಾದ ಭಾರತ್ ಸೇವಕ್ ಸಮಾಜದ ವತಿಯಿಂದ ಈ ತರಬೇತಿಯನ್ನು ನಡೆಸಲಾಗುತ್ತಿದ್ದು , ಸಂಸ್ಥೆಯ ಮೂಲಕ ತರಬೇತಿ ಪಡೆದ ತರಬೇತಿ ಶಿಕ್ಷಕಿಯರು ಒಂದು ವರ್ಷದಲ್ಲಿ ನಡೆಸಿದ ಶೈಕ್ಷಣಿಕ ಚಟುವಟಿಕೆಗಳು ,ದಾಖಲೆಗಳು ,ಪ್ರಾಜೆಕ್ಟ್ಗಳು ಸೇರಿದಂತೆ ಮಗುವಿಗೆ ಕಲಿಸಲು ಸಹಕಾರಿಯಾದ ಅಧ್ಯಯನ ಪರಿಕರಗಳನ್ನು ತಾವೇ ತಯಾರಿಸಿ ಪ್ರದರ್ಶನದ ಮೂಲಕ ವಿವರಿಸುತ್ತಾರೆ. ನಲಿಕಲಿ ಮಾದರಿಯಲ್ಲಿ ಮಕ್ಕಳಿಗೆ ಕಥೆ ಹೇಳಿ ಕೊಡುವುದು ,ಪದ್ಯಗಳನ್ನು ರಚಿಸಿ ಹಾಡುವುದನ್ನು ಇಲ್ಲಿ ಕಲಿಸಲಾಗುತ್ತದೆ . ಪ್ರತಿ ವರ್ಷವೂ ಇಲ್ಲಿ ತರಬೇತಿ ಶಿಕ್ಷಕಿಯರು ಪ್ರದರ್ಶಿಸುವ ಪಾರಂಪರಿಕ ವಸ್ತುಗಳು ಗಮನ ಸೆಳೆಯುತ್ತದೆ . ಪರಿಸರವನ್ನು ಗುರುತಿಸಿ ಕಲಿಯಲು ವಿವಿಧ ಸಸ್ಯಗಳ ಬೇರು , ಬೀಜ, ವಿವಿಧ ಮಣ್ಣಿನ ಮಾದರಿ ಗಳನ್ನು ಸಂಗ್ರಹಿಸಿ ಗುರುತಿಸುವುದುನ್ನು ಕಲಿಯುತ್ತಾರೆ .ಅಲಂಕಾರಿಕ ವಸ್ತುಗಳ ತಯಾರಿ, ಪೇಪರ್ ಕ್ರಾಫ್ಟ್, ಚಿತ್ರಕಲೆ, ಕಸದಿಂದ ರಸ ಸೇರಿದಂತೆ ವಿವಿಧ ಕೌಶಲ್ಯ ತರಬೇತಿಗಳನ್ನು, ವಿಶೇಷ ಕಾರ್ಯಾಗಾರ,ವಿಚಾರಗೋಷ್ಠಿಗಳನ್ನು ನಡೆಸಲಾಗುತ್ತಿದೆ. ತರಬೇತಿ ಜೊತೆಗೆ ಉಚಿತ ಇಂಗ್ಲಿಷ್ ಸಂವಹನ ಮತ್ತು ಕಂಪ್ಯೂಟರ್ ಶಿಕ್ಷಣವನ್ನು ನೀಡಲಾಗುತ್ತಿದೆ.
ಒಟ್ಟಿನಲ್ಲಿ ಮಗುವಿನ ಎಲ್ಲಾ ಅಂಶಗಳನ್ನು ಪೂರ್ವ ಪ್ರಾಥಮಿಕ ಹಂತದಲ್ಲಿ ಬೆಳೆಸಲು ಸಹಕಾರಿಯಾಗಬಲ್ಲ ಶಿಕ್ಷಣವನ್ನು ಹೇಗೆ ನೀಡಬಹುದು ಎಂಬುದನ್ನು ಕಲಿಸಿಕೊಡುವ ಮೂಲಕ ಉತ್ತಮ ಶಿಕ್ಷಕಿಯರನ್ನು ಸಂಸ್ಥೆ ರೂಪಿಸುತ್ತಿದೆ. ನಿರುದ್ಯೋಗ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಗ್ರಾಮೀಣ ಭಾಗದ ನಿರುದ್ಯೋಗಿ ಯುವತಿಯರಿಗೆ ಈ ತರಬೇತಿ ಪಡೆದು ಶಿಕ್ಷಕಿಯಾಗಿ ಅಥವಾ ಸ್ವತಃ ನರ್ಸರಿ ಶಾಲೆಗಳನ್ನು ತೆರೆದು ಭವಿಷ್ಯ ರೂಪಿಸಲು ಈ ತರಬೇತಿ ಸಹಕಾರಿಯಾಗಿದೆ.
ತರಬೇತಿ ಸೇರಲಿಚ್ಛಿಸುವವರು ಬೆಳ್ಳಾರೆಯ ದೇವಿ ಹೈಟ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಜ್ಞಾನದೀಪ ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಬಹುದೆಂದು ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.