ರಾಜ್ಯಾದ್ಯಂತ ವಿದ್ಯಾರ್ಥಿಗಳು ಶಾಲಾ – ಕಾಲೇಜುಗಳಿಗೆ ದಾಖಲಾತಿ ಮಾಡಿಕೊಂಡು ಪಾಸ್ ವಿತರಣೆ ಮಾಡುವವರೆಗೂ ಅಂದರೆ ಜೂನ್ 15ರವರೆಗೆ ಹಿಂದಿನ ವರ್ಷದ ಬಸ್‌ಪಾಸ್‌ಗಳು ಹಾಗೂ ಶಾಲೆ- ಕಾಲೇಜುಗಳಲ್ಲಿ ಪ್ರವೇಶಾತಿ ಪಡೆದ ಶುಲ್ಕ ಪಾವತಿ ರಶೀದಿಯನ್ನು ತೋರಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ವಿದ್ಯಾರ್ಥಿಗಳು ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿ ಪ್ರಯಾಣ ಮಾಡಬಹುದು ಎಂದು ಕೆಎಸ್‌ಆರ್‌ಟಿಸಿ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಜೂನ್ 15ರ ತನಕ ವಿದ್ಯಾರ್ಥಿಗಳು ಉಚಿತವಾಗಿ ಅಥವಾ ರಿಯಾಯಿತಿ ದರ ಪಾವತಿಸಿ ಪ್ರಯಾಣಿಸಬಹುದು ಎಂದು ಕೆಎಸ್‌ಆರ್‌ಟಿಸಿ ಸುತ್ತೋಲೆಯನ್ನು ಹೊರಡಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರತಿ 2023-24ನೇ ಸಾಲಿನ ವಿದ್ಯಾರ್ಥಿ ಉಚಿತ / ರಿಯಾಯಿತಿ ಬಸ್ ಪಾಸು ಗಳನ್ನು ಇಡಿಸಿಎಸ್ ಇಲಾಖೆಯ ಸೇವಾ ಸಿಂಧು ತಂತ್ರಾಂಶದ ಮುಖಾಂತರ ಸಂಪೂರ್ಣ ಯಾಂತ್ರೀಕೃತವಾಗಿ ವಿತರಣೆ ಮಾಡಲು ಕ್ರಮ ತೆಗೆದುಕೊಂಡಿದೆ. ಇದಕ್ಕಾಗಿ ಇಡಿಸಿಎಸ್ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಆನ್‌ಲೈನ್ ಮೂಲಕ ವಿದ್ಯಾರ್ಥಿ ಪಾಸ್‌ಗೆ ಅರ್ಜಿ ಸಲ್ಲಿಸುವುದಕ್ಕೆ ಮತ್ತು ಪಾಸ್ ಪಡೆಯಲು ಕಾಲಾವಕಾಶಬೇಕು. ಈಗಾಗಲೇ ಶೈಕ್ಷಣಿಕ ತರಗತಿ ಶುರುವಾಗಿರುವ ಕಾರಣ, ವಿದ್ಯಾರ್ಥಿಗಳಿಗೆ ಅನಾನುಕೂಲ ಆಗದಂತೆ ನೋಡಿಕೊಳ್ಳುವ ಸಲುವಾಗಿ ಉಚಿತ/ ರಿಯಾಯಿತಿ ಬಸ್ ಪಾಸ್ ಮೂಲಕ ಬಸ್ ಪ್ರಯಾಣಕ್ಕೆ ಅವಕಾಶ ವಿಸ್ತರಿಸಲಾಗಿದೆ ಎಂದು ಸುತ್ತೋಲೆ ಮೂಲಕ ತಿಳಿಸಿದೆ.
ಶುಲ್ಕ ಪಾವತಿ ರಶೀದಿ ತೋರಿಸಿ ಪ್ರಯಾಣ ಮಾಡಿ:
ಕೆಎಸ್‌ಆರ್‌ಟಿಸಿಯ ಸಾಮಾನ್ಯ ಮತ್ತು ವೇಗದೂತ ಬಸ್‌ಗಳಲ್ಲಿ ವಿದ್ಯಾರ್ಥಿಗಳು ಜೂನ್ 15ರ ತನಕ ನಗರ ಮತ್ತು ಹೊರವಲಯಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಇನ್ನು ಜೂ.15ರೊಳಗೆ ವಿದ್ಯಾರ್ಥಿಗಳು ಸರ್ಕಾರದಿಂದ ನೀಡಲಾಗುವ ಪ್ರಸಕ್ತ ಸಾಲಿನ (2023-24) ವಿದ್ಯಾರ್ಥಿ ಬಸ್ ಪಾಸ್ ಪಡೆಯಬೇಕು. ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬೇಕಾದರೆ ಪ್ರಸಕ್ತ ವರ್ಷದಲ್ಲಿ ಶಾಲಾ / ಕಾಲೇಜುಗಳಿಗೆ ದಾಖಲಾಗಿರುವುದನ್ನು ದೃಢೀಕರಿಸುವ ಶುಲ್ಕ ಪಾವತಿ ರಸೀದಿ ಅಥವಾ ಕಳೆದ ವರ್ಷದ (2022-23ನೇ ಸಾಲಿನ) ವಿದ್ಯಾರ್ಥಿ ಬಸ್ ಪಾಸ್ ಅನ್ನು ನಿರ್ವಾಹಕರಿಗೆ ತೋರಿಸಬೇಕಾದ್ದು ಅವಶ್ಯ ಎಂದು ನಿಗಮದ ಸುತ್ತೋಲೆ ವಿವರಿಸಿದೆ.