ವಿಶ್ವ ಪರಿಸರ ದಿನಾಚರಣೆ ವಿಶೇಷ

0

ಝೀರೋ ಆಗಿ ಮುಂಬೈ ಬಸ್ಸು ಸುಳ್ಯದ ಹತ್ತಿದ್ದ ಹುಡುಗ ಇಂದು ಗ್ರೀನ್ ಹೀರೋ ಆಫ್ ಇಂಡಿಯಾ!

ಧರೆಗುರುಳಿದ ಮರದಲ್ಲಿದ್ದ ಹಕ್ಕಿಗಳ ಆಕ್ರಂದನ ಬದುಕಿನ ದಿಕ್ಕು ಬದಲಿಸಿತು; ಕಾಡು ಕಟ್ಟುವ ಕಾಯಕವಾಯಿತು.. ಕಲ್ಲು ಮುಳ್ಳುಗಳ ಹಾದಿ ಸವೆಸಿ ನಾಡಿಗೇ ಹಸಿರು ಚೆಲ್ಲಿದ ಡಾ. ಆರ್. ಕೆ. ನಾಯರ್ ಬದುಕಿನ ರೋಚಕ ಕಥೆ…

✍️ ದುರ್ಗಾಕುಮಾರ್ ನಾಯರ್ ಕೆರೆ

ಇಂದು ವಿಶ್ವ ಪರಿಸರ ದಿನ. ಜಗತ್ತಿನ ಹಸಿರು ಹಬ್ಬ. ಸುಳ್ಯದ ವ್ಯಕ್ತಿಯೊಬ್ಬರು ಪರಿಸರ ಕ್ಷೇತ್ರದಲ್ಲಿ ಜಾಗತಿಕ ಮನ್ನಣೆಗೆ ಪಾತ್ರರಾಗಿ ಶೋಭಿಸುತ್ತಿರುವುದು ಈ ಸಂದರ್ಭದ ವಿಶೇಷತೆ. ಅದಕ್ಕಾಗಿ ಈ ವಿಶೇಷ ಲೇಖನ.

ಸುಳ್ಯದ ಜಾಲ್ಸೂರು ಮೂಲದ ಈ ಸಾಧಕ ಡಾ. ಆರ್. ಕೆ . ನಾಯರ್. ದೇಶದಲ್ಲಿಯೇ ಅಪಾರ ಪ್ರಸಿದ್ಧಿ ಪಡೆದ ಪರಿಸರ ಪ್ರೇಮಿ ಡಾ.ನಾಯರ್ ಗ್ರೀನ್ ಹೀರೋ ಆಫ್ ಇಂಡಿಯಾ ಎಂಬ ಅಭಿದಾನಕ್ಕೆ ಅಭಿಮಾನದಿಂದಲೇ ಪಾತ್ರರಾಗಿದ್ದಾರೆ. ಮಿಯಾವಕಿ ಅರಣ್ಯದ ಮೂಲಕ ಕಾಡು ಕಟ್ಟುವ ಕಾಯಕಕ್ಕೆ ಮುಂದಾದ ಹಸಿರು ಸೇವೆಯ ನಾಯಕರಾದ ಡಾ. ನಾಯರ್ ಈ ಕಾರಣಕ್ಕಾಗಿ ದೇಶದ ಹಲವು ಪ್ರತಿಷ್ಠಿತ ಸನ್ಮಾನಗಳಿಗೆ, ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಬಡತನದ ಬಾಲ್ಯ:

ಸಪ್ತ ಭಾಷೆಗಳ ಸಂಗಮ ಭೂಮಿ ಕಾಸರಗೋಡು ಜಿಲ್ಲೆಯಲ್ಲಿ ಆರ್. ಕೆ. ನಾಯರ್ ಜನನ 1. 6. 1971 ರಲ್ಲಿ. ಪೆರಿಯ ತರವಾಡಿನ ದಿ. ಕುಂಞಂಬು ನಾಯರ್ ಮತ್ತು ಪುಲ್ಲಾಯಿಕೋಡಿ ತರವಾಡಿನ ಕಮಲಾಕ್ಷಿ ಅಪ್ಪ ಅಮ್ಮ. ಈ ದಂಪತಿಯ ಆರು ಮಕ್ಕಳ ಪೈಕಿ ನಾಲ್ಕನೆಯವರು ಆರ್.ಕೆ.

ಆ ಕಾಲಕ್ಕೆ ನಾಯರ್ ಹಿರಿಯರ ಕುಟುಂಬ ಭೂಸುಧಾರಣೆಯ ಆಘಾತಕ್ಕೆ ಸಿಲುಕಿತ್ತು. ಹಾಗೆ ಇರುವುದೆಲ್ಲವೂ ಹೋಗಿ ಬಂದು ಮುಟ್ಟಿದ್ದು ಜಾಲ್ಸೂರು ಸಮೀಪದ ಎರ್ಮೆಕ್ಕಾರಿಗೆ.

ಶಾಲೆಯ ಮೆಟ್ಟಿಲೇನೋ ಹತ್ತಿದರು. ಆದರೆ ಕಡು ಕಷ್ಟದ ಕಾಲ. ಶಾಲೆಯ ಖರ್ಚು ಭರಿಸಬೇಕಾದರೆ ವಾರಾಂತ್ಯದಲ್ಲಿ ಉಳ್ಳವರ ಮನೆಗಳಲ್ಲಿ ದುಡಿಯಬೇಕಿತ್ತು. ಜಾಲ್ಸೂರು, ಅಡ್ಕಾರು, ಸುಳ್ಯ ಗಳಲ್ಲಿ ಹೀಗೆ ದುಡಿಮೆಯನ್ನೂ ನಡೆಸುತ್ತಾ ಹಾಗೂ ಹೀಗೂ ಪಿಯುಸಿ ಮುಗಿಸಿದರು. ತರಗತಿಯುದ್ದಕ್ಕೂ ಅಂಕಗಳು ಚೀಲ ತುಂಬುತ್ತಿದ್ದಾರೂ ಕಿಸೆ ಖಾಲಿ ಖಾಲಿ.

ಪಿಯುಸಿ ಬಳಿಕ ಮುಂದೇನು ಎಂದು ಚಿಂತಿಸಲಿಲ್ಲ. 1989ರ ಅದೊಂದು ಬೆಳಗ್ಗೆ ಕೆನರಾ ಬಸ್ ಹತ್ತಿ ಆ ಮೂಲಕ ವಾಣಿಜ್ಯ ನಗರಿ ಮುಂಬೈಯತ್ತ ಪಯಣ.

ಅಲ್ಲಿನ ಕುರ್ಲಾ ಎಂಬ ಉಪನಗರದಲ್ಲಿ ಮೆಡಿಕಲ್ ಒಂದರಲ್ಲಿ ಸೇಲ್ಸ್ ಬಾಯ್ ಆಗಿ ಕಾಯಕ ಶುರು. ಔಷಧಿ ಹೊತ್ತು ಹೋಂ ಡೆಲಿವರಿ ಕೆಲಸ. ವಾಸ್ತವ್ಯಕ್ಕೆಂದು ಪುಟ್ಟ ಬಾಡಿಗೆ ಗೂಡಿದ್ದರೂ ಬಹುತೇಕ ಮೆಡಿಕಲ್ ಎದುರಿನ ತುಂಡು ಜಗಲಿಯೇ ಮಹಲಾಗಿತ್ತು. ಅಲ್ಲಿಯೇ ಮಲಗಬೇಕಾಗಿತ್ತು. ಹೋಟೆಲ್ ಕೆಲಸದ ಆಕರ್ಷಣೆ ಜತೆಯಾಯಿತು. ಬಯಸಿದಂತೆಯೇ ಅಲ್ಲಿಗೆ ಶಿಫ್ಟ್. ವೇಟರ್, ಸಪ್ಲಾಯರ್, ಮ್ಯಾನೇಜರ್ ಹೀಗೆ ಬೇರೆ ಬೇರೆ ಪಾತ್ರಗಳಲ್ಲಿ ಕೆಲಸ ಹಚ್ಚಿಕೊಂಡರು.

ಮತ್ತೆ ಆರ್. ಕೆ. ನಾಯರ್ ಕಣ್ಣು ಬಿದ್ದದ್ದು ಗಾರ್ಮೆಂಟ್ಸ್ ಫ್ಯಾಕ್ಟರಿಗಳತ್ತ. ಗೆಳೆಯರ ಸಲಹೆ ಮೇರೆಗೆ ವೃತ್ತಿ ಬದುಕು ಅಲ್ಲಿಗೂ ಶಿಫ್ಟ್ ಆಯಿತು. ಪರಿಶ್ರಮ ಮತ್ತು ನಿಯತ್ತಿನ ಕೆಲಸದಿಂದ ಪ್ರೀತಿ ಸಂಪಾದಿಸಿದ ಅವರು ಅಲ್ಲಿಂದ ಪಯಣ ಬೆಳೆಸಿದ್ದು ಗಾರ್ಮೆಂಟ್ಸ್ ಕ್ಷೇತ್ರದ ನಗರಿ ಉಮ್ಮರ್ ಗಾವ್ ಗೆ. ಇದು ಮಹಾರಾಷ್ಟ್ರ, ಗುಜರಾತಿನ ಗಡಿ ಪ್ರದೇಶದಲ್ಲಿದೆ. ಅಲ್ಲಿ 2009 ಗಾರ್ಮೆಂಟ್ ಪ್ಯಾಕ್ಟರಿಯ ಸ್ವಂತ ಉದ್ಯಮವೊಂದನ್ನು ಆರಂಭಿಸಿದರು.

ಗಾರ್ಮೆಂಟ್ಸ್ ಕ್ಷೇತ್ರದ ಸರದಾರ:

ಆ ಬಳಿಕ ಸಂಭವಿಸಿದ್ದು ಮಾತ್ರ ಇತಿಹಾಸ. ಉದ್ಯಮದಲ್ಲಿ ಅವರು ಹಿಂತಿರುಗಿ ನೋಡಲಿಲ್ಲ. ಹಣ, ಕೀರ್ತಿ, ಯಶಸ್ಸು ಸಂಪಾದಿಸಿದರು. ಮತ್ತಷ್ಟು ಗಾರ್ಮೆಂಟ್ಸ್‌ ಫ್ಯಾಕ್ಟರಿಗಳ ಮಾಲಕರಾದರು. 600 ಕ್ಕೂ ಅಧಿಕ ಮಂದಿಗೆ ಉದ್ಯೋಗ ದಾತರಾಗಿ ಅವರ ಬದುಕಿನ ಮುನ್ನಡೆಗೆ ಮುನ್ನುಡಿ ಬರೆದರು. ನಾಯರ್ ಅವರ ಗಾರ್ಮೆಂಟ್ಸ್‌ ಫ್ಯಾಕ್ಟರಿಗಳ ಉತ್ಪನ್ನಗಳು ದೇಶವಿದೇಶಗಳಲ್ಲೂ ಜನಪ್ರಿಯವಾಯಿತು. ಈ ಉದ್ಯಮದ ಸಂಘಟನೆಗಳ ಸಾರಥ್ಯ ವಹಿಸಿ ಸಂಘಟನಾತ್ಮಕ ಆಯಾಮವನ್ನೂ ನೀಡಿದರು.

ಬಾಲ್ಯದ ಕಷ್ಟದ ದಿನಗಳ ಅನುಭವವಿದ್ದ ನಾಯರ್ ಅವರಿಗೆ ಸಮಾಜ ಸ್ಪಂದನೆಯ ತುಡಿತ ಜತೆಯಲ್ಲಿಯೇ ಇತ್ತು. ನೂರಾರು ಬುಡಕಟ್ಟು ಹೆಣ್ಣು ಮಕ್ಕಳಿಗೆ ಸರಕಾರದ ವಿವಿಧ ಯೋಜನೆಗಳಲ್ಲಿ ಟೈಲರಿಂಗ್ ತರಬೇತಿಯನ್ನು ನೀಡಿ ಅವರ ಭವಿಷ್ಯ ಬೆಳಗಲು ಕಾರಣರಾದರು.

ಅಪ್ರತಿಮ ದೈವ ಭಕ್ತ:

ಅಪ್ರತಿಮ ದೈವಭಕ್ತರಾದ ಆರ್.ಕೆ.ನಾಯರ್ ಅವರು ಹತ್ತು ಹಲವು ಧಾರ್ಮಿಕ ಕೈಂಕರ್ಯಗಳ ಮುಂಚೂಣಿ ಸೇವೆ ಸಲ್ಲಿಸಿದರು. ಜನ್ಮ ಸ್ಥಳವಾದ ಸುಳ್ಯದಲ್ಲೂ ಕರ್ಮಸ್ಥಳವಾದ ಉಮರ್ ಗಾವ್ ನಲ್ಲೂ ಧಾರ್ಮಿಕ ಕಾರ್ಯಗಳಿಗೆ ಆರ್ಥಿಕ ಸಹಾಯಹಸ್ತ ಚಾಚಿದರು. ಕಾಸರಗೋಡಿನಲ್ಲೂ ಈ ಕಾರ್ಯ ಮುಂದುವರೆಸಿದರು. ಅಲ್ಲೂ ಇಲ್ಲೂ ಉನ್ನತ ನಾಯಕರ, ಅಧಿಕಾರಿಗಳ ಸಂಪರ್ಕವನ್ನೂ ಸಾಧಿಸಿದರು.

ಮಗ್ಗುಲು ಬದಲಾಯಿಸಿತು ಆ ಒಂದು ಘಟನೆ:

ನಾಯರ್ ಬದುಕಿನ ಮತ್ತೊಂದು ಮಗ್ಗಲು ಹೊರಳಿದ್ದು ಅದೊಂದು ಮಧ್ಯಾಹ್ನ. ಫ್ಯಾಕ್ಟರಿಯಿಂದ ಊಟಕ್ಕೆ ತೆರಳಿದ್ದ ಸಮಯ. ಯಾವುದೋ ಅಭಿವೃದ್ಧಿ ಕೆಲಸದ ಕಾರಣಕ್ಕೆ ಕಡಿದು ಧರೆಗುರುಳಿಸಲಾಗಿದ್ದ ಮರದಲ್ಲಿ ನೂರಾರು ಪಕ್ಷಿಗಳಿದ್ದವು. ಅವುಗಳ ಮೊಟ್ಟೆಗಳಿತ್ತು, ಮರಿಗಳಿತ್ತು. ಮೊಟ್ಟೆಗಳು ಒಡೆದು ಹೋಗಿ ಪಕ್ಷಿಗಳು ಚೀರಾಡುವ, ಕೊಕ್ಕು ಬಡಿಯುವ ದೃಶ್ಯ ಕಂಡ ಡಾ. ಆರ್.ಕೆ. ನಾಯರ್ ಮನ ಕಲಕಿತು.‌ ಇಂತಹ ಹಕ್ಕಿಗಳಿಗಾಗಿ, ಹಸಿರಿಗಾಗಿ ಏನಾದರೂ ಮಾಡಲು ಸಾಧ್ಯವೇ ಎಂದು ಯೋಚಿಸಿದರು. ಆಗ ಹುಟ್ಟಿದ ಕನಸಿನ ಹೆಸರು “ಫಾರೆಸ್ಟ್ ಕ್ರಿಯೇಟರ್ಸ್”. ಆರಂಭಕ್ಕೆ ಹೆಚ್ಚು ದಿನ ಬೇಕಾಗಲಿಲ್ಲ.

ಬೃಹತ್ ಮರಗಳ ಕಾಡುಗಳನ್ನು ನಿರ್ಮಾಣ ಮಾಡುವುದು ಕಷ್ಟ ಸಾಧ್ಯವೆಂದು ಅವರಿಗೂ ಅನ್ನಿಸಿತ್ತು. ಆಗ ಹೊಳೆದದ್ದು ಜಪಾನ್ ತಂತ್ರಜ್ಞಾನದ ಮಿಯಾವಕಿ ಅರಣ್ಯ. ಅದರ ಕುರಿತು ಸಂಶೋಧನೆ ನಡೆಸಿದರು. ಅನ್ವೇಷಣೆ ನಡೆಸಿದರು. ಗುಜರಾತ್‌ನಲ್ಲಿ ಅದರ ನಿರ್ಮಾಣ ಕಾರ್ಯ ಆರಂಭಿಸಿದರು.

2011 ರಲ್ಲಿ ಗುಜರಾತಿನ ಉಮರ್ ಗಾವ್ ನಗರ ಮಧ್ಯೆ ಒಂದು ಎಕರೆ ಜಾಗ ಖರೀದಿಸಿ ಅಲ್ಲಿ ವೈವಿಧ್ಯಮಯ ಮಿಯಾವಕಿ ಅರಣ್ಯ ಬೆಳೆಸಿದರು.‌ ಬಳಿಕ ರಸ್ತೆ ಬದಿಯಲ್ಲಿ, ಶಾಲೆಗಳ ಪರಿಸರದಲ್ಲಿ, ಕಚೇರಿ ಆವರಣಗಳಲ್ಲಿ, ಖಾಲಿ ಬಿದ್ದ ಸ್ಥಳಗಳಲ್ಲಿ ಸಸಿ ನೆಟ್ಟು ಬೆಳೆಸಿ ವನ ನಿರ್ಮಾಣ ಮಾಡಿದರು. ಕಾರ್ಪೊರೇಟ್ ಕಂಪೆನಿಗಳ ಸಿ.ಎಸ್.ಆರ್. ಫಂಡ್, ವಿವಿಧ ಬ್ಯಾಂಕ್ ಗಳ ಪ್ರಾಯೋಜಕತ್ವದೊಂದಿಗೆ ಆಧುನಿಕ ಹಸಿರು ಕ್ರಾಂತಿ ಸೃಷ್ಟಿಯಾಯಿತು.

ಗ್ರೀನ್ ಹೀರೋ ಆಫ್ ಇಂಡಿಯಾ:

ಹಾಗೆ ಆರಂಭಗೊಂಡ ಕಾಡು ಕಟ್ಟುವ ಕಾಯಕ ಇಂದು ದೇಶದಲ್ಲಿ ವಿಸ್ತಾರವಾಗಿ ಬೆಳೆದಿದ್ದು ಡಾ. ನಾಯರ್ ಅವರಿಗೆ ಗ್ರೀನ್ ಹೀರೋ ಆಫ್ ಇಂಡಿಯಾ ಎಂಬ ಗೌರವವನ್ನು ತಂದುಕೊಟ್ಟಿದೆ. ದೇಶದ 15 ಕ್ಕೂ ಹೆಚ್ಚು ರಾಜ್ಯಗಳಲ್ಲಿ 115 ಕ್ಕೂ ಹೆಚ್ಚು ಕಡೆ ಮಿಯಾವಕಿ ವನ ನಿರ್ಮಿಸಿದ್ದು, ತನ್ಮೂಲಕ ಲಕ್ಷಾಂತರ ಗಿಡಗಳನ್ನು ಬೆಳೆಸಿದ್ದು, ಒಂದು ಕೋಟಿ ಗಿಡ ಬೆಳೆಸುವ ಗುರಿ ಹೊಂದಿದ್ದಾರೆ.

ಪ್ರಧಾನಿ ಮೋದಿಯವರಿಂದ ಉದ್ಘಾಟನೆ:

ಡಾ. ಆರ್.ಕೆ.ನಾಯರ್ ಗುಜರಾತ್‌ನ ಭುಜ್ ಪ್ರದೇಶದಲ್ಲಿ ಅರಣ್ಯ ಬೆಳೆಸಿದ್ದು, ಇದು ವಿಶ್ವದ ಅತ್ಯಂತ ದೊಡ್ಡ ಮಿಯಾವಾಕಿ ಅರಣ್ಯವಾಗಿದೆ.
ಇಲ್ಲಿ ಅರಣ್ಯ ಸಹಿತವಾದ ಸ್ಮೃತಿ ವನ್ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದಲೇ ಗಿಡ ನೆಡುವ ಮೂಲಕ ಉದ್ಘಾಟನೆಯಾಗಿದೆ.

ಗುಜರಾತ್ ರಾಜ್ಯದ ಕಛ್ ಭಾರತದ ಅತಿ ದೊಡ್ಡ ಜಿಲ್ಲೆಗಳಲ್ಲೊಂದಾಗಿದ್ದು, ಇಂತಹ ಕಛ್ ಜಿಲ್ಲೆಯ ಭುಜಂಗ ಪರ್ವತದ ಶ್ರೇಣಿಯಲ್ಲಿ 2001 ರಲ್ಲಿ ಘಟಿಸಿದ ಭೂಕಂಪವು ಅತ್ಯಂತ ದೊಡ್ಡ ನಾಶ ನಷ್ಟವನ್ನು ಉಂಟುಮಾಡಿತು. ಅಂಜಾರ್, ಭುಜ್ ಮತ್ತು ಬಚಾವ್ ತಾಲೂಕಿನಲ್ಲಿ ನೂರಾರು ಹಳ್ಳಿಗಳು ನೆಲಸಮಗೊಂಡಿತ್ತು. ಅನೇಕ ಐತಿಹಾಸಿಕ ಕಟ್ಟಡಗಳು ಸೇರಿದಂತೆ ಒಂದು ದಶಲಕ್ಷಕ್ಕೂ ಹೆಚ್ಚು ಹಾನಿಗೊಳಗಾಗಿತ್ತು.
ಹೀಗೆ ಭೂಕಂಪದಿಂದ ಸಾವಿಗೀಡಾದವರ ನೆನಪಿನಲ್ಲಿ ಗುಜರಾತ್ ಸರಕಾರವು ಬೃಹತ್ತಾದ ಸ್ಮೃತಿ ವನ್ ಮೆಮೋರಿಯಲ್ ಪ್ರಾಜೆಕ್ಟ್‌ಗೆ ಮುಂದಾಯಿತು.
ಗುಜರಾತ್ ಸ್ಟೇಟ್ ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಅಥೋರಿಟಿ (ಜಿ.ಎಸ್.ಡಿ.ಎಂ.ಎ.) ಮುಖಾಂತರ ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಫಂಡ್ ಮುಖಾಂತರ ಈ ಕಾರ್ಯ ಕಾರ್ಯಗತಗೊಂಡಿದ್ದು ಇಲ್ಲಿ ಈಗಾಗಲೇ ಒಟ್ಟು 2,23,533 ಗಿಡಗಳನ್ನು ನೆಡಲಾಗಿದೆ. ಕಳೆದ ಒಂದು ವರ್ಷದಿಂದ ಈ ಕಾರ್ಯ ಮತ್ತೆ ಪ್ರಗತಿಯಲ್ಲಿದ್ದು, ಸುಮಾರು 117 ಜಾತಿಯ ಗಿಡಗಳನ್ನು ನೆಡಲಾಗಿದೆ. ಒಂದು ವರ್ಷದಲ್ಲಿಯೇ ಹಸಿರು ವನ ಇಲ್ಲಿ ಕಂಗೊಳಿಸಿದೆ.

ಗುಜರಾತ್ – ಪಾಕ್ ಗಡಿಗೆ ಹತ್ತಿರವಿರುವ ರಣ್ ಆಫ್ ಕಛ್ ನಲ್ಲಿ ಅವರು ಬೆಳೆಸಿದ ವನ ರಾಷ್ಟ್ರೀಯ ಆಕರ್ಷಣೆಯಾಗಿದೆ. ಇದೀಗ ಪ್ರಧಾನಿ ಕಾರ್ಯಾಲಯದಿಂದ ಹತ್ತು ಹಲವು ರಾಜ್ಯಗಳ ವನ ನಿರ್ಮಾಣದ ಜವಾಬ್ದಾರಿಯನ್ನೂ ಡಾ. ನಾಯರ್ ಅವರಿಗೆ ವಹಿಸಲಾಗಿದೆ.

ಏನಿದು ಮಿಯಾವಕಿ?:

ಜಪಾನಿನ ಆಕಿರೋ ಮಿಯಾವಕಿ ತನ್ನ ಅರಣ್ಯ ತಂತ್ರಜ್ಞಾನದಲ್ಲಿ ಅಳವಡಿಸಿದ್ದು ಒಂದರ್ಥದಲ್ಲಿ ಭಾರತದ ಸಾಂಪ್ರದಾಯಿಕ ಪದ್ಧತಿಯನ್ನೇ . ಅತ್ತಿ, ಇತ್ತಿ, ಆಲ, ಅರಳಿ ಎಂಬ ಸಹಜ ಅರಣ್ಯದ ಪದ್ಧತಿಯನ್ನೇ . ಆರ್. ಕೆ. ನಾಯರ್ ಕೂಡಾ ಇದೇ ಪದ್ಧತಿಯನ್ನೇ ಅನುಸರಿಸುತ್ತಾರೆ. ಪ್ರತಿ ವನದಲ್ಲೂ ನೂರಾರು ಜಾತಿಯ ಗಿಡ ಮರಗಳಿರುತ್ತದೆ. ಮಣ್ಣಿನ ಮಾದರಿಯನ್ನು ಪರೀಕ್ಷಿಸಿ ಅದರ ಗುಣಲಕ್ಷಣ ನೋಡಿ ಅದರಂತೆ ನೈಸರ್ಗಿಕ ಪೋಷಕಾಂಶ ನೀಡಿ, ಸಮರ್ಪಕ ನೀರು ಪೂರೈಕೆಯನ್ನೂ ಮಾಡಿ ಹಸಿರು ವನ ಸೃಷ್ಠಿಸುತ್ತಾರೆ.

ಬಹುತೇಕವಾಗಿ ಕಾರ್ಪೊರೇಟ್ ಅಥವಾ ಸಾರ್ವಜನಿಕ ಪ್ರಾಯೋಜಕತ್ವದ ಅರಣ್ಯ ನಿರ್ಮಾಣ ಬಿಒಟಿ ಮಾದರಿಯಲ್ಲಿರುತ್ತದೆ. ಉಮರ್ ಗಾವ್ ನ ನಾರ್ಕೋಲ್ ಬೀಚ್ ನಲ್ಲಿ ಹಿನ್ನೀರನ್ನು ಒಳ ಹಾಯಿಸಿ ಸಮುದ್ರ ದಂಡೆಯಲ್ಲಿ ವನ ನಿರ್ಮಾಣ ಒಂದು ಅಪರೂಪದ ಮತ್ತು ಅಪೂರ್ವ ಮಾದರಿ.

ಡಾ. ಆರ್.ಕೆ. ನಾಯರ್ ನಿರ್ಮಾಣದ ಅರಣ್ಯಗಳು ಇಂದು ಸಂಶೋಧಕರ, ವಿದ್ಯಾರ್ಥಿಗಳ ಅಧ್ಯಯನದ ತಾಣಗಳೂ ಆಗಿವೆ. ಅವರಿಗೆಲ್ಲ ನಾಯರ್ ಆಸಕ್ತಿಯಿಂದ ಮಾಹಿತಿ ನೀಡುತ್ತಾರೆ.

ತಾನಿದ್ದ ಊರನ್ನು ಝೀರೋ ಕಾಂಪೋಸ್ಟ್ ಊರನ್ನಾಗಿಸಿದ ಕೀರ್ತಿಯಲ್ಲೂ ನಾಯರ್ ಪಾಲಿದೆ.

ಬಹುತೇಕ ಪ್ರವಾಸಗಳಲ್ಲೇ, ಅದರಲ್ಲೂ ಆಕಾಶ ಮಾರ್ಗದಲ್ಲೇ ದೇಶ ವಿದೇಶ ಸುತ್ತುವ ನಾಯರ್ ಹೊಸ ಹೊಸ ಪ್ರಾಜೆಕ್ಟ್ ಗಳ ಕುರಿತು ಚಿಂತಿಸುತ್ತಲೇ ಇರುತ್ತಾರೆ.

ಬಹು ಭಾಷಾ ವಿಶಾರದ

ಮಾತೃಭಾಷೆ ಮಲಯಾಳಂ, ವ್ಯವಹಾರ ಭಾಷೆ ಕನ್ನಡ, ಊರ ಭಾಷೆ ತುಳುವಿನೊಂದಿಗೆ ವಾಣಿಜ್ಯ ನಗರಿಗೆ ಲಗ್ಗೆಯಿಟ್ಟಿದ್ದ ನಾಯರ್ ಅವರಿಗೆ ಈಗ ಭಾರತದ ಬಹುತೇಕ ಭಾಷೆಗಳು ಕರತಲಾಮಲಕ. ಹಿಂದಿ, ಇಂಗ್ಲೀಷ್, ಗುಜರಾತಿ, ಮರಾಠಿ, ಗುಜರಾತಿ, ತಮಿಳು ಅಲ್ಲದೆ ಕೆಲವು ಬುಡಕಟ್ಟು ಭಾಷೆಗಳಲ್ಲಿ ಪ್ರಾವೀಣ್ಯತೆ ಸಾಧಿಸಿದ್ದಾರೆ.

ಹೆಚ್ಚಿದ ಖ್ಯಾತಿ; ಮರೆಯಾಗದ ಸರಳತೆ

ಕಛ್ ನ ಬೃಹತ್ತಾದ ಮತ್ತು ಮಹತ್ತಾದ ಪ್ರಾಜೆಕ್ಟ್‌ನ ಬಳಿಕ ಆರ್.ಕೆ. ನಾಯರ್ ದೇಶಮಟ್ಟದಲ್ಲಿಯೇ ಖ್ಯಾತಿಯನ್ನು ಹೆಚ್ಚಿಸಿಕೊಂಡರು.
ಇವೆಲ್ಲದರ ಫಲವಾಗಿ ಇಡೀ ದೇಶವೇ ಡಾ. ನಾಯರ್ ಅವರನ್ನು ಗೌರವದಿಂದ ಕಾಣುತ್ತಿದೆ. ವಿವಿಧ ರಾಜ್ಯಗಳ ಸಚಿವರು, ಉನ್ನತ ಮಟ್ಟದ ಜನಪ್ರತಿನಿಧಿಗಳು, ಅನೇಕ ರಾಜ್ಯಗಳ ಐಎಎಸ್ ಅಧಿಕಾರಿಗಳ ಸಂಪರ್ಕ, ಒಡನಾಟ ಸಾಧಿಸಿದ್ದಾರೆ. ದೇಶದ ಹಲವು ರಾಜ್ಯಗಳ ಪ್ರತಿಷ್ಠಿತ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿದೆ. ಗೌರವ ಡಾಕ್ಟರೇಟ್ ಒಲಿದುಬಂದಿದೆ. ಬಹುತೇಕ ಮಾಧ್ಯಮ ಸಂಸ್ಥೆಗಳು ಪ್ರಶಸ್ತಿ ನೀಡಿ ಅವರನ್ನು ಗೌರವಿಸಿದೆ.

ಯಾವ ಕೀರ್ತಿ, ಅಧಿಕಾರಗಳು ಕೂಡಾ ಡಾ. ನಾಯರ್ ಅವರ ಸರಳತೆಯನ್ನು ಬಾಧಿಸಿಲ್ಲ. ಅವರೆಂದೂ ನಿಂತ ನೆಲವನ್ನು, ಪಟ್ಟ ಕಷ್ಟವನ್ನು ಮರೆತವರಲ್ಲ. ಅದಮ್ಯವಾದ ಕೌಟುಂಬಿಕ ಪ್ರೀತಿ, ಮೇರೆ ಮೀರಿದ ಮಾನವೀಯ ಮೌಲ್ಯ, ನೊಂದವರಿಗಾಗಿ ಸಹಾಯ ಹಸ್ತ, ಧಾರ್ಮಿಕ ಕಾರ್ಯದೆಡೆ ಅಗಾಧವಾದ ಆತ್ಮ ಸಮರ್ಪಣೆ… ನಾಯರ್ ಅವರ ಬದುಕಿನ ಶ್ರೇಷ್ಠ ತತ್ವಾದರ್ಶಗಳು.

ಜಗತ್ತಿನ ಎಲ್ಲಿಯೇ ಇದ್ದರೂ ತಿಂಗಳಿಗೊಮ್ಮೆಯಾದರೂ ಮನೆಗೆ ಬಂದು ವಯೋವೃದ್ಧ ತಾಯಿಯನ್ನು, ಬಂಧು ಬಳಗವನ್ನು ಕಾಣುತ್ತಾರೆ. ಕೌಟುಂಬಿಕ ಸಂಭ್ರಮದ ಆಚರಣೆ ಮತ್ತು ಕ್ಷಣಗಳನ್ನು ಅದೆಷ್ಟು ಬ್ಯುಸಿ ಶೆಡ್ಯೂಲ್ ಇದ್ದರೂ ತಪ್ಪಿಸಿಕೊಂಡವರಲ್ಲ. ತರವಾಡಿನ ಧಾರ್ಮಿಕ ಆಚರಣೆಗಳಿಗೆ ಅವರ ಉಪಸ್ಥಿತಿ ಇದ್ದೇ ಇರುತ್ತದೆ.

ತನ್ನ ಪ್ರತಿಯೊಂದು ವನ ನಿರ್ಮಾಣದ ಆರಂಭದಲ್ಲೂ ಮಣ್ಣು ಪೂಜಾ ಪ್ರಾರ್ಥನೆಯನ್ನು ನಾಯರ್ ತುಳುವಿನ ದೈವಾರಾಧನಾ ಸಂಪ್ರದಾಯದಂತೆ ನಡೆಸುತ್ತಾರೆ. ಪ್ರತಿ ವರ್ಷವೂ ನವರಾತ್ರಿಗಳಲ್ಲಿ ಉಪವಾಸ ಆಚರಿಸುತ್ತಾರೆ.

ಹುಟ್ಟೂರಿನ ಅದಮ್ಯ ಪ್ರೀತಿ:

ಸುಳ್ಯದಲ್ಲಾದರೂ ಅಷ್ಟೇ. ಹಲವು ದೇಗುಲಗಳಿಗೆ ಸಹಾಯ ಹಸ್ತ ಚಾಚಿದ್ದಾರೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವ ತತ್ವದಂತೆ ಗಳಿಸಿದ್ದನ್ನು ಸಮಾಜಕ್ಕೆ ಅರ್ಪಿಸುವಲ್ಲಿ‌ ಮುಂಚೂಣಿಯಲ್ಲಿರುತ್ತಾರೆ.

ಮುಟ್ಟಾಳೆಯ ಸೊಬಗು:

ಅತ್ಯಂತ ಸರಳ ಜೀವನ ನಡೆಸುವ ನಾಯರ್ ಕಳೆದ ಕೆಲವು ವರ್ಷದವರೆಗೂ ಬರಿಗಾಲಲ್ಲಿಯೇ ನಡೆಯುತ್ತಿದ್ದರು. ಉಮರ್ ಗಾವ್ ನಲ್ಲಂತೂ ಬರಿಗಾಲ ಸಂತ ಎಂದೇ ಜನಜನಿತರಾಗಿದ್ದರು.‌ ಅಂದೂ ಇಂದೂ ಶ್ವೇತ ವರ್ಣದ ಧಿರಿಸು ಧರಿಸುತ್ತಾರೆ. ಅವರ ತಲೆಯಲ್ಲಿ ಮುಟ್ಟಾಳೆ ಕಳೆದ ಕೆಲವು ವರ್ಷಗಳಿಂದ ರಾರಾಜಿಸುತ್ತಿದೆ. ಅವರೇ ಹೇಳಿಕೊಳ್ಳುವಂತೆ ಅವರ ದಿರಿಸು ಅವರ ಹಿರಿಯರ ಸಂಸ್ಕೃತಿಯ ಪ್ರತೀಕ. ತಲೆಗೆ ಹಾಕುವ ಮುಟ್ಟಾಳೆ ತುಳುನಾಡಿನ ಪ್ರತೀಕ. ತಾನು ಬಾಲ್ಯದಲ್ಲಿ ಹೊತ್ತ ಮಣ್ಣು, ಗೊಬ್ಬರದ ಶ್ರಮ ಸಂಸ್ಕೃತಿ ಮತ್ತು ಮಣ್ಣ ಘಮದ ಕಾರಣವೂ ಇರಬಹುದೇನೋ? ಮುಟ್ಟಾಳೆಯ ಎದುರು ಭಾಗದಲ್ಲಿ ರಾಷ್ಟ್ರ ಧ್ವಜದ ಸಿಂಬಲ್ ಇದ್ದು ಇದು ಭಾರತೀಯತೆಯ ದ್ಯೋತಕ.

ಕುಟುಂಬದ ಬೆಂಬಲ:

ಡಾ. ಆರ್.ಕೆ. ನಾಯರ್‌ರವರ ಪತ್ನಿ ಗುಜರಾತಿ ಮೂಲದ ಅನಘ ಅವರು ಆದರ್ಶ ಗೃಹಿಣಿ. ಆರ್.ಕೆ. ನಾಯರ್‌ರವರ ಎಲ್ಲಾ ಒಳ್ಳೆಯ ಕೆಲಸಗಳ ಹಿಂದಿನ ಶಕ್ತಿ. ಪುತ್ರ ದೀಪಕ್ ತಂದೆಯ ವ್ಯವಹಾ ಕ್ಷೇತ್ರವನ್ನು ನೋಡಿಕೊಳ್ಳುತ್ತಾರೆ. ಪುತ್ರಿ ಶ್ರುತಿ ತನ್ನ ಉದ್ಯೋಗದ ಜತೆ ತಂದೆಯ ಉದ್ಯಮಕ್ಕೆ ಸಹಕಾರ ನೀಡುತ್ತಿದ್ದಾರೆ. ಆರ್.ಕೆ. ನಾಯರ್ ಈಗ ಪೂರ್ಣಪ್ರಮಾಣದಲ್ಲಿ ಅರಣ್ಯ ಬೆಳೆಸುವ ಉದ್ದೇಶಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.

ದೇಶದಲ್ಲಿಯೇ ವನ ನಿರ್ಮಾಣದ ಮೂಲಕ ” ಹಸಿರು ಕ್ರಾಂತಿ” ಸೃಷ್ಟಿಸುತ್ತಿರುವ ಡಾ. ಆರ್.ಕೆ. ನಾಯರ್ ಸುಳ್ಯ ತಾಲೂಕಿನವರೆನ್ನುವುದು ಸುಳ್ಯದ ಹೆಮ್ಮೆ. ವಿಶ್ವ ಪರಿಸರದ ದಿನವನ್ನೂ ಅವರು ಕಛ್ ನಲ್ಲಿ ಅರ್ಥಪೂರ್ಣವಾಗಿ ಕೊಂಡಾಡುತ್ತಿದ್ದಾರೆ.