ಪ್ರಾಕೃತಿಕ ವಿಕೋಪ : ಮಾಹಿತಿ ನೀಡದೇ ನ.ಪಂ. ಸಭೆ ಆಯೋಜನೆಗೆ ಆಕ್ಷೇಪ

0

ತಪ್ಫೊಪ್ಪಿಕೊಂಡು ಸಭೆ ಮುಂದೂಡಿದ ಅಧಿಕಾರಿಗಳು

ಪ್ರಾಕೃತಿಕ ವಿಕೋಪದ ಕುರಿತು ಮುಂಜಾಗ್ರತೆ ಕೈಗೊಳ್ಳಲು ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಸಭೆ ಕರೆದಿರುವ ಮಾಹಿತಿ ನ.ಪಂ. ಸದಸ್ಯರಿಗೆ ನೀಡದಿರುವ ಕುರಿತು ಸದಸ್ಯರು ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಹಾಗೂ ತಪ್ಪೊಪ್ಪಿಕೊಂಡ ಅಧಿಕಾರಿಗಳು ಸಭೆ ಮುಂದೂಡಿದ ಘಟನೆ ನಡೆದಿದೆ.

ನ.ಪಂ. ಆಡಳಿತಾಧಿಕಾರಿ, ತಹಶಿಲ್ದಾರ್ ಮಂಜುನಾಥರ ಅಧ್ಯಕ್ಷ ತೆಯಲ್ಲಿ ಸಭೆ ಆರಂಭಗೊಂಡಿತು.


ನ.ಪಂ. ಮುಖ್ಯಾಧಿಕಾರಿ ಸುಧಾಕರ್, ಸದಸ್ಯರುಗಳಾದ ವಿನಯ ಕುಮಾರ್ ಕಂದಡ್ಕ, ಡೇವಿಡ್ ಧೀರಾ ಕ್ರಾಸ್ತ, ಬಾಲಕೃಷ್ಣ ಭಟ್ ಕೊಡೆಂಕಿರಿ, ಬುದ್ದನಾಯ್ಕ, ಶಶಿಕಲಾ ನೀರಬಿದಿರೆ, ಶಿಲ್ಪಾ ಸುದೇವ್, ಪ್ರವಿತಾ ಪ್ರಶಾಂತ್, ಸುಶೀಲಾ ಜಿನ್ನಪ್ಪ, ಕಿಶೋರಿ ಶೇಟ್, ಪ್ರವೀತಾ ಪ್ರಶಾಂತ್, ಆರ್.ಎಫ್.ಒ. ಮಂಜುನಾಥ್, ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ ಪಿ.ಬಿ., ಮೆಸ್ಕಾಂ ಸುಪ್ರೀತ್, ವಿನೋದ್ ಲಸ್ರಾದೋ, ಆರೋಗ್ಯಾ ಇಲಾಖೆಯವರು ಮೊದಲಾದವರಿದ್ದರು.

ಸಭೆ ಆರಂಭಗೊಂಡು ತಹಶೀಲ್ದಾರ್ ರವರು ವಾರ್ಡ್ ವ್ಯಾಪ್ತಿಯಲ್ಲಿ ಆಗಬೇಕಾದ ಚರಂಡಿ ಸ್ವಚ್ಚತೆ ಇತ್ಯಾದಿಗಳ ವಿವರ ನೀಡುತ್ತಿದ್ದಾಗ, ಸಭೆಗೆ ಆಗಮಿಸಿದ ಸದಸ್ಯ ಎಂ.ವೆಂಕಪ್ಪ ಗೌಡರು ತಮ್ಮ ಜಾಗದಲ್ಲಿ ಕುಳಿತುಕೊಂಡರು.‌ ತಹಶೀಲ್ದಾರ್ ಮಾತು ಮುಗಿಯುತ್ತಿದ್ದಂತೆ ಸಭೆ ನಡೆಯುವ ಮಾಹಿತಿ ನೀಡದಿರುವ ಕುರಿತು ವೆಂಕಪ್ಪ ಗೌಡರು ಪ್ರಶ್ನಿಸಿದರು.

ಸಭೆ ನಡೆಯುತ್ತಿದೆ ಎಂದು ನನಗೆ ಈಗಷ್ಡೇ ತಿಳಿದು ನಾನು ಬಂದಿದ್ದೇನೆ. ಯಾಕೆ ಮಾಹಿತಿ ನೀಡಿಲ್ಲ ಎಂದು ತರಾಟೆಗೆತ್ತಿಕೊಂಡರಲ್ಲದೆ ಸರಕಾರ ಬದಲಾಗುತ್ತಿದ್ದಂತೆ ಏನು ಮಾಡುತ್ತಿದ್ದಿರಿ. ಈ ವಿಷಯವನ್ನು ಸರಕಾರದ ಗಮನಕ್ಕೆ ತರುತ್ತೇನೆ. ವಾರ್ಡ್ ಸದಸ್ಯರಿಗೇ ತಿಳಿಸದೇ ಕಾಟಾಚಾರಕ್ಕೆ ಯಾಕೆ ಸಭೆ ಎಂದು ಪ್ರಶ್ನಿಸಿದರು. ಈ‌ವೇಳೆ ಇತರ ಸದಸ್ಯರು ವೆಂಕಪ್ಪ ಗೌಡರ ಮಾತನ್ನು ಬೆಂಬಲಿಸಿದರು.

ಸದಸ್ಯ ವಿನಯ ಕಂದಡ್ಕರು ಕೂಡಾ ಮಾಹಿತಿ ನೀಡದಿರುವ ಬಗ್ಗೆ ಪ್ರಶ್ನಿಸಿದರು. ಸದಸ್ಯರಿಂದ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ತಹಶೀಲ್ದಾರ್ ಮಂಜುನಾಥರು ವಿಷಾದ ವ್ಯಕ್ತಪಡಿಸಿದರು. ‌ಮುಖ್ಯಾಧಿಕಾರಿ ಸುಧಾಕರ್ ಈ ತಪ್ಪು ನನ್ನದೇ ಎಂದು‌ಹೇಳಿದರು. ಬಳಿಕ ಜೂ.12 ಸೋಮವಾರ ಸಭೆ ನಡೆಸಲು ಆಡಳಿತಾಧಿಕಾರಿ ತಹಶಿಲ್ದಾರ್ ಮಂಜುನಾಥ್ ಮುಖ್ಯಾಧಿಕಾರಿ ಸುಧಾಕರ್ ರಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಪಂಚಾಯತ್ ಸದಸ್ಯರಿಗೆ ಮೀಸಲಿಟ್ಟ ಜಾಗದಲ್ಲಿ ಆರೋಗ್ಯ ಇಲಾಖೆಯವರು ಹಾಗೂ ಇತರ ಅಧಿಕಾರಿಗಳು ಕುಳಿತಿದ್ದರು. ಇದನ್ನು ಆಕ್ಷೇಪಿಸಿದ ಸದಸ್ಯರು ಸದಸ್ಯರ ಜಾಗ ಅವರಿಗೇ‌ ಮೀಸಲಿಡಬೇಕು. ಇತರರಿಗೆ ಬೇರೆ ವ್ಯವಸ್ಥೆ ಮಾಡಿ ಎಂದು ವೆಂಕಪ್ಪ ಗೌಡರು ಹೇಳಿದರೆ, ಸದಸ್ಯರ ಜಾಗದಲ್ಲಿ ಇಟ್ಟಿದ್ದ ನಾಮಫಲಕವನ್ನು ತೆಗೆದದ್ದು ಯಾಕೆ ಎಂದು ವಿನಯ ಕಂದಡ್ಕ ಅಧಿಕಾರಿಗಳನ್ನು ಪ್ರಶ್ನಿಸಿದರು.