ಮಹೇಶ್ ಕರಿಕ್ಕಳ, ಸಚಿನ್‌ರಾಜ್ ಶೆಟ್ಟಿ, ಶಶಿಧರ್ ಎಂ.ಜೆ. ಸಹಿತ ಐವರ ಅಮಾನತು
ಪಕ್ಷ ವಿರೋಧಿ ಚಟುವಟಿಕೆ ಆರೋಪ
2023 ರ ವಿಧಾನಸಭಾ ಚುನಾವಣೆಯ ಸಂದರ್ಭ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿದ್ದಾರೆಂಬ ಕಾರಣಕ್ಕೆ ಕೆಪಿಸಿಸಿ ಸಂಯೋಜಕ ನಂದಕುಮಾರ್‌ರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಶಿಫಾರಸ್ಸು ಮಾಡಿದೆ. ಹಾಗೂ ಐವರನ್ನು ಅಮಾನತುಗೊಳಿಸಿ ಬ್ಲಾಕ್ ಕಾಂಗ್ರೆಸ್ ಆದೇಶ ಮಾಡಿದೆ.
ಸುಳ್ಯ ಬ್ಲಾಕ್ ಕಾಂಗ್ರೆಸ್ ಪತ್ರಿಕಾ ಹೇಳಿಕೆಯ ಮೂಲಕ ಈ ಮಾಹಿತಿ ನೀಡಿದೆ. 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿ ಪಕ್ಷದ ಅಭ್ಯರ್ಥಿಯ ಮತ್ತು ಪಕ್ಷದ ಸ್ಥಳೀಯ ನಾಯಕರ ವಿರುದ್ಧ ಅವಹೇಳನಕಾರಿ ಬರಹಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಸುಳ್ಯಕ್ಕೆ ಬಂದಾಗ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ ಜನರು ಬರದಂತೆ ಪ್ರಯತ್ನಿಸಿ ಸಭೆ ಸಮಾರಂಭಕ್ಕೆ ಗೈರು ಹಾಜರಾಗಿ ರಾಷ್ಟ್ರೀಯ ಅಧ್ಯಕ್ಷರಿಗೆ ಅಗೌರವ ತೋರಿದ ಹಾಗೂ ನಂದಕುಮಾರ್ ಅಭಿಮಾನಿ ಬಳಗದೊಂದಿಗೆ ಸೇರಿ ನಂದಕುಮಾರ್ ವಾಟ್ಸಾಪ್ ಮೆಸೇಜ್ ನಿರ್ದೇಶನದಂತೆ ಮತದಾರರನ್ನು ತಟಸ್ಥರಾಗಿರುವಂತೆ ಪ್ರೇರೇಪಿಸಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದು ಸಾಬೀತಾಗಿರುವುದರಿಂದ ಮಹೇಶ್ ಕುಮಾರ್ ಕರಿಕ್ಕಳ, ಸಚಿನ್‌ರಾಜ್ ಶೆಟ್ಟಿ ಪೆರುವಾಜೆ, ಭವಾನಿಶಂಕರ ಕಲ್ಮಡ್ಕ, ಶಶಿಧರ ಎಂ.ಜೆ, ಚೇತನ್ ಕಜೆಗದ್ದೆಯವರನ್ನು ಪಕ್ಷದ ಕಾರ್ಯ ಚಟುವಟಿಕೆಯಿಂದ ಅಮಾನತುಗೊಳಿಸಲಾಗಿದೆ. ಹಾಗೂ ಈ ಎಲ್ಲಾ ಗೊಂದಲಗಳಿಗೆ ಮುಖ್ಯ ಕಾರಣಕರ್ತರಾದ ಪಕ್ಷದ ಸೋಲಿಗೆ ಕಾರಣರಾದ ನಂದಕುಮಾರ್‌ರವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಜಿಲ್ಲಾ ಕಾಂಗ್ರೆಸ್ ಮೂಲಕ ಪ್ರದೇಶ ಕಾಂಗ್ರೆಸ್‌ಗೆ ಮತ್ತು ಶಿಸ್ತು ಪಾಲನಾ ಸಮಿತಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ್ ಹೇಳಿಕೆ ನೀಡಿದ್ದಾರೆ.