ಅದು ರಿಯಲ್ ಸ್ಟೋರಿ ಆಗಿದ್ದರೆ ಕೇಂದ್ರ ಸರಕಾರ ಯಾಕೆ ಸುಮ್ಮನಿದೆ ?
ಕೇರಳ ಸ್ಟೋರಿ ಚಿತ್ರದಿಂದ ಸಮಾಜಕ್ಕೆ ತಪ್ಪು ಸಂದೇಶ ನೀಡಲಾಗುತ್ತಿದೆ. ಮುಸ್ಲಿಮರ ಬಗೆಗಿನ ಈ ರೀತಿಯ ಅಪಪ್ರಚಾರದಿಂದ ಬೇಸರವಾಗಿದೆ. ಒಂದು ವೇಳೆ ಅದು ರಿಯಲ್ ಸ್ಟೋರಿಯೇ ಆಗಿದ್ದರೆ ಕೇಂದ್ರ ಸರಕಾರ ಯಾಕೆ ಸುಮ್ಮನಿದೆ ಎಂದು ಎಂದು ಕರ್ನಾಟಕ ರಾಜ್ಯ ಮುಸ್ಲಿಂ ಯುವಜನ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ತೆಕ್ಕಿಲ್ ಟಿ.ಎಂ.ಶಾಹಿದ್ ಹೇಳಿದ್ದಾರೆ.
ಜೂ. ೧೦ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಕೇರಳ ಸ್ಟೋರಿ ಚಿತ್ರದಿಂದ ತಪ್ಪು ಸಂದೇಶ ಹರಡಲಾಗುತ್ತಿದೆ. ಇದರಿಂದ ಹಿಂದುಗಳ ಭಾವನೆಯನ್ನು ಕೆರಳಿಸುವ ಕೆಲಸ ಮಾಡಲಾಗುತ್ತಿದೆ. ಮುಸ್ಲಿಮರು ಎಂದರೇ ಭಯೋತ್ಪಾದಕರು ಎಂಬ ಭಾವನೆಯಿಂದ ನೋಡಲಾಗುತ್ತಿದೆ. ಈ ರೀತಿಯ ಅಪಪ್ರಚಾರ ಸರಿಯಲ್ಲ. ಈ ಭಾಗದ ಜನರು ಕೇರಳದ ಜತೆಗೆ ಉತ್ತಮ ಭಾಂದವ್ಯ ಇಟ್ಟುಕೊಂಡಿzವೆ. ಇಲ್ಲಿಯ ಜನರಿಗೆ ಕೇರಳ ಹೇಗೆ ಎಂದು ಗೊತ್ತಿದೆ. ಅಲ್ಲಿಯ ಮುಸ್ಲಿಮರು ಹೇಗಿದ್ದಾರೆ ಎನ್ನುವುದು ಗೊತ್ತಿದೆ. ಅಲ್ಲಿ ಹಿಂದೂ – ಮುಸ್ಲಿಮರು ಶಾಂತಿ, ಸೌಹಾರ್ದತೆಯಿಂದ ಇದ್ದಾರೆ. ಸೌಹಾರ್ದವಾಗಿ ಕೆಲಸ ಕಾರ್ಯಗಳು ನಡೆಯುತ್ತಿದೆ. ಒಬ್ಬರಿಗೊಬ್ಬರು ಸಹಾಯ ಮಾಡುತ್ತ ಜೀವನ ನಡೆಸುತ್ತಿದ್ದಾರೆ ಎಂದ ಅವರು, ಎಲ್ಲರೂ ಒಳ್ಳೆಯವರೆಂದು ನಾನು ಹೇಳುವುದಿಲ್ಲ. ಕೆಟ್ಟವರೂ ಇರುತ್ತಾರೆ. ಯಾರೇ ತಪ್ಪು ಮಾಡಿದರೂ ಅದು ತಪ್ಪೇ. ಅಂತವರಿಗೆ ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷೆ ಆಗಿಯೇ ಆಗಬೇಕು. ಕೇರಳ ಸ್ಟೋರಿಯಂತ ಸಿನಿಮಾಗೆ ಸರಕಾರಗಳು ಕುಮ್ಮಕ್ಕು ನೀಡಬಾರದು. ಅದು ರಿಯಲ್ ಆಗಿದ್ದರೆ ಕೇಂದ್ರ ಸರಕಾರ ಯಾಕೆ ಸುಮ್ಮನಿದೆ? ಕೇಂದ್ರ ಗೃಹ ಸಚಿವರು ಯಾಕೆ ಮಾತನಾಡುತ್ತಿಲ್ಲ ಎಂದು ಶಹೀದ್ ಪ್ರಶ್ನಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಇಲ್ಲ ಸಲ್ಲದನ್ನು ಮಾತನಾಡಲು ಆರಂಭಿಸಿದ್ದಾರೆ. ದೇವಸ್ಥಾನಗಳಿಗೆ ಹಿಂದಿನ ಸರಕಾರ ನೀಡಿದ ಅನುದಾನಕ್ಕೆ ತಡೆ ಎಂದು ಹೇಳುತ್ತಿದ್ದಾರೆ. ಹೊಸ ಸರಕಾರಗಳು ಬಂದಾಗ ಹಿಂದಿನ ಸರಕಾರದ ಅನುದಾನವನ್ನು ತಡೆ ಹಿಡಿಯುವುದು ಸಾಮಾನ್ಯ. ರಾಜ್ಯದಲ್ಲಿ ದೇವಸ್ಥಾನ, ಮಸೀದಿ, ಚರ್ಚ್‌ಗಳಿಗೆ ಬಂದ ಎಲ್ಲ ಅನುದಾನವನ್ನು ತಡೆಹಿಡಿಯಲಾಗಿದೆ. ಅದನ್ನು ಎಲ್ಲರೂ ಅರಿತುಕೊಳ್ಳಬೇಕು. ಶಾಂತಿ, ಸೌಹಾರ್ದತೆಯಿಂದ ಎಲ್ಲರೂ ಜೀವನ ನಡೆಸಬೇಕು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸೌತ್ ಕರ್ನಾಟಕ ಸೋಶಿಯಲ್ ಮೂವ್‌ಮೆಂಟ್‌ನ ಸುಳ್ಯ ಯುನಿಟ್ ಪ್ರಧಾನ ಕಾರ್ಯದರ್ಶಿ ಸಲೀಂ ಪೆರುಂಗೋಡಿ, ಕರ್ನಾಟಕ ಮುಸ್ಲಿಂ ಜಮಾತ್‌ನ ಉಪಾಧ್ಯಕ್ಷ ಮೂಸಾ ಕುಂಞಿ ಪೈಂಬೆಚ್ಚಾಲು, ಜಿಲ್ಲಾ ಎಸ್‌ಎಸ್‌ಎಫ್ ನ ಅಕ್ಬರ್ ಕರಾವಳಿ, ಆಲ್ ಇಂಡಿಯಾ ಕೇರಳ ಮುಸ್ಲಿಂ ಕಲ್ಚರಲ್ ಸೆಂಟರ್‌ನ ಉಪಾಧ್ಯಕ್ಷ ಅಶ್ರಫ್, ಸುಳ್ಯ ಮುಸ್ಲಿಂ ಒಕ್ಕೂಟದ ಸದಸ್ಯ ಹನೀಫ್ ಬೀಜಕೊಚ್ಚಿ, ಯದ್ಯಮಿ ಸಿದ್ದೀಕ್ ಕೊಕ್ಕೊ ಇದ್ದರು.