ಲೇಖಕ ಅನಂತರಾಜ ಗೌಡರ ನೂತನ ಕೃತಿ “10 ಕುಟುಂಬ 18 ಗೋತ್ರದ ಗೌಡ ಪರಂಪರೆ” ಯು ಬೆಂಗಳೂರಿನ ರಮಣಶ್ರೀ ಹೋಟೆಲ್ ಸಭಾಂಗಣದಲ್ಲಿ ವೀರಲೋಕ ಪ್ರಕಾಶನ ದವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹನ್ನೆರಡು ಕೃತಿಗಳೊಂದಿಗೆ ಲೋಕಾರ್ಪಣೆ ಯಾಯಿತು.
“10 ಕುಟುಂಬ 18 ಗೋತ್ರದ ಗೌಡ ಪರಂಪರೆ” ಯು ಸಮುದಾಯದ ಸಂಶೋಧನಾತ್ಮಕ, ಚಾರಿತ್ರಿಕ , ಸಾಂಸ್ಕೃತಿಕ ಮತ್ತು ಪರಂಪರೆಯ ಅಧ್ಯಯನವಾಗಿದ್ದು, ಲೇಖಕರ ಕ್ಷೇತ್ರ ಶೋಧನೆಯಿಂದ, ಹಲವು ಹಿರಿಯರು, ಗಣ್ಯರೊಂದಿಗೆ ದಾಖಲಿತ ಸಂಭಾಷಣೆ ಮತ್ತು ಅನೇಕ ಗ್ರಂಥಗಳ ಆಧಾರದಿಂದ ಹಾಗೂ ಡಾ. ಹಾ.ತಿ.ಕೃಷ್ಣೇಗೌಡರ ಮಾರ್ಗದರ್ಶನದಿಂದ ಶೈಕ್ಷಣಿಕ ರೂಪವನ್ನು ಪಡೆದಿದೆ.
ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಅಧ್ಯಯನ ಸಂಸ್ಥೆಯ ಗೌರವ ಸಂಪಾದಕ
ಪ್ರೊ.ಡಾ. ಹಾ. ತಿ. ಕೃಷ್ಣೇಗೌಡರು ಈ ಕೃತಿಯನ್ನು ಆಮೂಲಾಗ್ರವಾಗಿ ತಿದ್ದುಪಡಿ ಮಾಡಿ ಅದಕ್ಕೊಂದು ಶೈಕ್ಷಣಿಕ
ರೂಪ ಕೊಟ್ಟಿದ್ದಾರೆ.
ಕೃತಿ ಬಿಡುಗಡೆಯ ಸಮಾರಂಭದಲ್ಲಿ ಡಾ. ಹಾ.ತಿ.ಕೃಷ್ಣೇಗೌಡರು ಕೃತಿ ಪರಿಚಯ ಮಾಡಿದರು. ಅನಂತರಾಜ ಗೌಡರವರ ಪರಿಚಯ ಮತ್ತು ಅವರ ಕೃತಿ ಪರಿಚಯಿಸುವ ಸಾಕ್ಷ್ಯಚಿತ್ರವನ್ನು ವೇದಿಕೆಯ ಎಲ್ಇಡಿ ಪರದೆಯಲ್ಲಿ ಪ್ರದರ್ಶಿಸಲಾಯಿತು.
ರಾಜ್ಯ ಸಭಾ ಸದಸ್ಯ ಡಾ. ಜಿ.ಸಿ. ಚಂದ್ರಶೇಖರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅಥಿತಿಗಳಾಗಿ ಖ್ಯಾತ ವೈದ್ಯ ಡಾ. ಸಿ. ಎನ್. ಮಂಜುನಾಥ, ಕಿರುತೆರೆ ನಿರ್ದೇಶಕ ಟಿ. ಎನ್. ಸೀತಾರಾಮ್, ಪ್ರಜಾವಾಣಿಯ ಪ್ರಧಾನ ಸಂಪಾದಕರಾದ ರವೀಂದ್ರ ಭಟ್, ಪತ್ರಕರ್ತ ಜೋಗಿ, ಜಿ. ಎನ್. ಮೋಹನ ಸೇರಿದಂತೆ ನಾಡಿನ ಹೆಸರಾಂತ ಲೇಖಕರು, ಪ್ರಕಾಶಕರು, ಹಿನ್ನಲೆ ಗಾಯಕಿಯರು ಹಾಜರಿದ್ದರು.