ಸುಳ್ಯ ಸೇವಾ ಭಾರತಿ ‘ಹೆಲ್ಪ್ ಲೈನ್’ ಟ್ರಸ್ಟ್ ವತಿಯಿಂದ ನೂತನ ಆಂಬುಲೆನ್ಸ್ ಲೋಕಾರ್ಪಣೆ

0

ಸೇವಾ ಭಾರತಿ ಸಂಘಟನೆಯಿಂದ ಫಲಾಪೇಕ್ಷೆಯಿಲ್ಲದ ಸೇವಾ ಕಾರ್ಯ- ಎಸ್.ಅಂಗಾರ

ಸುಳ್ಯ ಸೇವಾ ಭಾರತಿ ‘ಹೆಲ್ಪ್ ಲೈನ್’ ಟ್ರಸ್ಟ್ ಇದರ ವತಿಯಿಂದ ನೂತನ ಆಂಬುಲೆನ್ಸ್ ಲೋಕಾರ್ಪಣೆಯು ಕೇರ್ಪಳ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಜೂ.21 ರಂದು ನಡೆಯಿತು.

ಮಾಜಿ ಸಚಿವ ಎಸ್.ಅಂಗಾರ ರವರು ದೀಪ ಪ್ರಜ್ವಲಿಸಿ ಆಂಬುಲೆನ್ಸ್ ಮೇಲಿನ ಬಟ್ಟೆಯನ್ನು ಸರಿಸಿ ಆಂಬುಲೆನ್ಸ್ ಕೀಯನ್ನು ಟ್ರಸ್ಟ್ ಅಧ್ಯಕ್ಷ ಡಾ. ಮನೋಜ್ ಕುಮಾರ್ ಅಡ್ಡಂತಡ್ಕ ರವರಿಗೆ ಹಸ್ತಾಂತರಿಸಿದರು.

ಬಳಿಕ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ವಹಿಸಿ ಮಾತನಾಡಿ ” ಶಿಸ್ತು ಬದ್ಧತೆ ಎಂಬುದು ಸಂಘದಿಂದ ಪ್ರಾಪ್ತವಾಗುವುದು. ನಿಸ್ವಾರ್ಥ ಸೇವೆಗೆ ಸದಾ ಪಣತೊಟ್ಟಿರುವ ಸೇವಾ ಭಾರತಿ ಟ್ರಸ್ಟಿನ ಮೂಲಕ ಸಮಾಜಮುಖಿ ಕೆಲಸ ನಡೆಯುತ್ತಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ದಿಂದ ಬೆಳೆದು ಬಂದಿರುತ್ತೇನೆ. ತುರ್ತು ಸಮಯದಲ್ಲಿ ಸ್ಪಂದಿಸುವ ಸಂಘಟನೆಯ ಜನೋಪಯೋಗಿ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಮುಖ್ಯ ಅಭ್ಯಾಗತರಾಗಿ ಮಾಜಿ ಸಚಿವ ಎಸ್.ಅಂಗಾರ ರವರು ಮಾತನಾಡಿ ” ನಮ್ಮ ದೇಶದ ಸೇವೆಯ ಪದ್ಧತಿ ಜಗತ್ತಿನಲ್ಲಿ ಅತ್ಯಂತ ಪವಿತ್ರವಾದುದು.ಬದುಕಿನಲ್ಲಿ ಸ್ಥಾನ ಮಾನಗಳು ಮುಕ್ತಿ ಕೊಡುವುದಿಲ್ಲ. ಫಲಾಪೇಕ್ಷೆಯಿಲ್ಲದ ಸೇವೆ ಅತ್ಯಂತ ಪುಣ್ಯದ ಕಾರ್ಯ ಇದರಿಂದ ಮುಕ್ತಿ ಲಭಿಸುವುದು. ಸಂಘಟನೆಯ ಮೂಲಕ ಸ್ವಾರ್ಥ ಇಲ್ಲದ ತ್ಯಾಗ ಸೇವೆಯ ಕಾರ್ಯಗಳು ಶ್ರೇಷ್ಠವಾಗಿದೆ ಎಂದು ಹೇಳಿದರು.

ಮಣಿಪಾಲ ಎಂ.ಐ.ಟಿ ಪ್ರಾಚಾರ್ಯರು, ಮಂಗಳೂರು ವಿಭಾಗ ಸೇವಾ ಭಾರತಿ ಪ್ರಮುಖ್
ಡಾ.ನಾರಾಯಣ ಶೆಣೈ ಯವರು ಮಾತನಾಡಿ “ಸೇವೆಯ ಹಿಂದೆ ಸಂಘಟನೆಯ ಪ್ರೇರಣೆ ಇರುವುದು. ಸಮಾಜ ಸುವ್ಯವಸ್ಥೆಯಲ್ಲಿರಬೇಕಾದರೆ ಸೇವಾ ಕಾರ್ಯ ಪ್ರಾಮುಖ್ಯವಾಗಿದೆ. ಸೇವೆಯೆಂಬುದು ಶೋಷಿತರಿಗೆ, ಪೀಡಿತರಿಗೆ ಮತ್ತು ಅಶಕ್ತರಿಗೆ ಸಮರ್ಪಕವಾಗಿ ಲಭಿಸುವಂತಾಗಬೇಕು. ಸಂಘಟನೆಯ ಕಾರ್ಯಕ್ಕೆ ಸಮರ್ಪಣೆಯ ಮನೋಭಾವನೆಯಿಂದ ಕೈ ಜೋಡಿಸಿದಾಗ ಸಮಾಜ ಸೇವಕರಾಗಲು ಸಾಧ್ಯವಿದೆ ಎಂದು ವಿಷಯ ಮಂಡಿಸಿದರು.

ವೇದಿಕೆಯಲ್ಲಿ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಕರುಣಾಕರ ಕೆ.ವಿ, ಪುಟ್ಟಪ್ಪ ಜೋಷಿ ಮೆಮೊರಿಯಲ್ ಟ್ರಸ್ಟ್ ಅಧ್ಯಕ್ಷ ಸುಧಾಕರ ಕಾಮತ್,ಸುಳ್ಯ ಬಾಲಾವಲಿಕಾರ್ ರಾಜಾಪುರ ಸಾರಸ್ವತ ಸಮಾಜ ಅಧ್ಯಕ್ಷ ಹೇಮಂತ್ ಕುಮಾರ್ ಕಂದಡ್ಕ, ತಾಲೂಕು ಆರ್.ಎಸ್.ಎಸ್. ಸಂಘ ಚಾಲಕ ಚಂದ್ರಶೇಖರ ತಳೂರು, ಸೇವಾ ಭಾರತಿ ಟ್ರಸ್ಟ್ ಅಧ್ಯಕ್ಷ ಡಾ.ಮನೋಜ್ ಕುಮಾರ್ ಅಡ್ಡಂತಡ್ಕ ಉಪಸ್ಥಿತರಿದ್ದರು.

ಸುಮಿತ್ ರಾಜ್ ನಾವೂರು ವೈಯುಕ್ತಿಕ ಗೀತೆ ಹಾಡಿದರು. ಡಾ.ಮನೋಜ್ ಕುಮಾರ್ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ರಾಜೇಶ್ ಶೆಟ್ಟಿ ಮೇನಾಲ ವಂದಿಸಿದರು. ಎ.ಟಿ.ಕುಸುಮಾಧರ ಕಾರ್ಯಕ್ರಮ ನಿರೂಪಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಈ ಸಂದರ್ಭದಲ್ಲಿ ಸಂಘ ದ ಕಾರ್ಯಕರ್ತರು, ಟ್ರಸ್ಟಿನ ಪದಾಧಿಕಾರಿಗಳು ಮತ್ತು ಸದಸ್ಯರು, ಬಿಜೆಪಿ ನಾಯಕರುಗಳು ಭಾಗವಹಿಸಿದರು.