ಮೇನಾಲ ಉರೂಸ್ ಸೌಹಾರ್ದ ಸಮಾರಂಭ

0


ನಮ್ಮ ಧರ್ಮವನ್ನು ಪಾಲಿಸಿ ಅದರ ಅನುಸಾರ ಜೀವಿಸಿದರೆ ಮತ್ತೊಂದು ಧರ್ಮವನ್ನು ವಿರೋಧಿಸುವ ಪ್ರಸಂಗವೇ ಬರುವುದಿಲ್ಲ : ಚಂದ್ರಶೇಖರ ಕಾಂತಮಂಗಲ


ಶುದ್ಧವಾದ ಹೃದಯದಿಂದ ಈ ಜಗತ್ತಿನ ಕಡೆ ನೋಡಿದರೆ ಯಾರು ಯಾರನ್ನೂ ಕೂಡ ದ್ವೇಷಿಸಲು ಸಾಧ್ಯವಿಲ್ಲ : ಅನೀಸ್ ಕೌಸರಿ


ನಮ್ಮ ನಮ್ಮ ಮನೆಯಿಂದಲೇ ಸೌಹಾರ್ದತೆ ಮತ್ತು ಪ್ರೀತಿಯನ್ನು ಸಮಾಜಕ್ಕೆ ಕೊಂಡೊಯ್ಯಬೇಕಾಗಿದೆ: ಗುಡ್ಡಪ್ಪ ರೈ


ಸೌಹಾರ್ದತೆಯ ಬದುಕಿನಿಂದ ಸಮಾಜ ಮತ್ತು ದೇಶವನ್ನು ಸುಭದ್ರವಾಗಿ ಕಟ್ಟಲು ಸಾಧ್ಯ. ಘರ್ಷಣೆ, ಸಂಘರ್ಷಗಳು ಯಾವುದೇ ದೇಶವನ್ನು ಅಭಿವೃದ್ಧಿಯ ಪತದತ್ತ ಕೊಂಡೊಯ್ಯಲು ಸಾಧ್ಯವಿಲ್ಲ. ಶಾಂತಿ ಮತ್ತು ಸುಂದರವಾದ ದೇಶವನ್ನು ಕಟ್ಟಲು ನಾವೆಲ್ಲರೂ ಒಂದಾಗಬೇಕು ಎಂಬ ಸಂದೇಶ ನುಡಿಗಳನ್ನು ಉರೂಸ್ ಕಾರ್ಯಕ್ರಮದ ಸೌಹಾರ್ದ ಸಮಾರಂಭದ ವೇದಿಕೆಯಲ್ಲಿ ವಿವಿಧ ಧರ್ಮಗಳ ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ.


ಇತಿಹಾಸ ಪ್ರಸಿದ್ಧ ಅಜ್ಜಾವರ ಮೇನಾಲ ಮಖಾಂ ಉರೂಸ್ ಪ್ರಯುಕ್ತ ಜೂನ್ ೨೦ ರಂದು ಮೇನಾಲದಲ್ಲಿ ಆಯೋಜಿಸಲಾಗಿದ್ದ ಸೌಹಾರ್ದ ಸಮಾರಂಭದ ವೇದಿಕೆಯಲ್ಲಿ ಮುಖ್ಯ ಭಾಷಣಗಾರರಾಗಿ ಭಾಗವಹಿಸಿದ್ದ ಬೆಳ್ಳಾರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಚಂದ್ರಶೇಖರ ಕಾಂತಮಂಗಲ ಮಾತನಾಡಿ ‘ಜನರಲ್ಲಿ ಪರಸ್ಪರ ಸ್ನೇಹ ಮಯ ಜೀವನದ ಅರಿವು ಬಾರದಿದ್ದಲ್ಲಿ ಜಾತಿ ಜಾತಿಗಳ ನಡುವೆ ಅಂತರ ಹೆಚ್ಚಾಗಲು ಕಾರಣವಾಗುತ್ತದೆ. ಬುದ್ಧಿವಂತರ ಜಿಲ್ಲೆ ಎಂದು ಹೆಸರುವಾಸಿಯಾಗಿರುವ ದಕ್ಷಿಣ ಕನ್ನಡ ಜಿಲ್ಲೆ ಕಳೆದ ಕೆಲವು ವರ್ಷಗಳಿಂದ ಕೋಮು ಸಂಘರ್ಷ,ಘರ್ಷಣೆ, ವೈಶಮ್ಯ ಮುಂತಾದ ಸಮಾಜಘಾತಕ ವಿಷಯಗಳಿಂದ ಜಿಲ್ಲೆಗೆ ಕಪ್ಪು ಚುಕ್ಕೆಗಳು ಉಂಟಾಗಲು ಕಾರಣವಾಗಿದೆ.


ನಮ್ಮ ಧರ್ಮವನ್ನು ಪಾಲಿಸಿ ಅದರ ಅನುಸಾರ ಜೀವಿಸಿದರೆ ನಾವು ಮತ್ತೊಂದು ಧರ್ಮವನ್ನು ವಿರೋಧಿಸುವ ಮಾತೇ ಬರಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದೇ ವೇದಿಕೆಯಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಮುಖ್ಯ ಅತಿಥಿ ಕುಂಬ್ರ ಕರ್ನಾಟಕ ಇಸ್ಲಾಮಿಕ್ ಸೆಂಟರ್ ಅನೀಸ್ ಕೌಸರಿ ಮಾತನಾಡಿ ಮಾನವ ಕುಲ ಅತ್ಯಂತ ಶ್ರೇಷ್ಠ ಕುಲವಾಗಿದ್ದು ಅವರ ಹೃದಯದಿಂದ ಸರ್ವರನ್ನು ಪ್ರೀತಿಸುವ ಶಕ್ತಿಯನ್ನು ಆ ದೇವರು ಕರುಣಿಸಿರುತ್ತಾನೆ. ಆದ್ದರಿಂದ ಶುದ್ಧವಾದ ಹೃದಯದಿಂದ ಈ ಜಗತ್ತನ್ನು ನೋಡಿದರೆ ಯಾವುದೇ ವ್ಯಕ್ತಿ ಕೂಡ ಪರಸ್ಪರ ವೈರಿಗಳಾಗಲು ಅಥವಾ ಕ್ರೂರಿಗಳಾಗಲು ಸಾಧ್ಯವೇ ಇಲ್ಲ. ಎಲ್ಲಾ ಧರ್ಮದ ಪವಿತ್ರ ಗ್ರಂಥಗಳಲ್ಲಿ ಜಗತ್ತಿಗೆ ಶಾಂತಿಯನ್ನೇ ಸಾರಿದೇ ವಿನಹ ವೈಶಮ್ಯಗಳನ್ನು ಎಲ್ಲಿಯೂ ಸಾರಲಿಲ್ಲ. ಪ್ರತಿಯೊಬ್ಬ ಮನುಷ್ಯರೂ ಕೂಡ ಸಹೋದರತ್ವ ಬಾಂಧವ್ಯವನ್ನು ಬೆಳೆಸಿಕೊಂಡು ಸೌಹಾರ್ದ ಬದುಕನ್ನು ರೂಪಿಸಿ ಉತ್ತಮ ದೇಶವನ್ನು ಕಟ್ಟಬೇಕಾಗಿದೆ ಎಂದು ಹೇಳಿದರು.


ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮೇನಾಲ ದರ್ಗಾ ಶರೀಫಿನ ಸ್ಥಳ ಮೊಕ್ತೇಸರ ರಾದ ಗುಡ್ಡಪ್ಪ ರೈ ಅಧ್ಯಕ್ಷೀಯ ಸ್ಥಾನದಲ್ಲಿ ಮಾತನಾಡಿ ಸೌಹಾರ್ದ ಎಂಬುವುದು ಅವರವರ ಮನೆಯಿಂದ ಸಮಾಜಕ್ಕೆ ಬರಬೇಕಾಗಿದೆ. ನಮ್ಮ ನಮ್ಮ ಮನೆಯ ಕುಟುಂಬಸ್ಥರಲ್ಲಿ ಪರಸ್ಪರ ಪ್ರೀತಿ ಸೌಹಾರ್ದತೆಯಿಂದ ಕೂಡಿ ಬಾಳಿ ಅದೇ ಪ್ರೀತಿ ಮತ್ತು ಸೌಹಾರ್ದತೆಯನ್ನು ಸಮಾಜಕ್ಕೆ ತಂದು ಅದನ್ನು ಅಲ್ಲಿ ಪಸರಿಸಬೇಕಾಗುತ್ತದೆ. ಆವಾಗ ಮಾತ್ರ ನಾವು ಈ ಸಮಾಜದಲ್ಲಿ ಸೌಹಾರ್ದತೆಯ ಬದುಕನ್ನು ಕಟ್ಟಲು ಸಾಧ್ಯ.


ಇಲ್ಲಿ ನಡೆಯುವಂತಹ ಊರೂಸ್ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಎಲ್ಲರೂ ಸೇರಿ ಸೌಹಾರ್ದತೆ ಯಿಂದ ನಡೆಸುವಂತೆ ಆಗಲಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಮಾರಂಭದ ವೇದಿಕೆಯನ್ನು ಸ್ಥಳೀಯ ಮಸೀದಿ ಕತೀಬರಾದ ಅಬ್ದುಲ್ ಖಾದರ್ ಮುನವ್ವರಿ ದುವಾ ನೆರವೇರಿಸಿ ಉದ್ಘಾಟಿಸಿದರು.


ವೇದಿಕೆಯಲ್ಲಿ ಅಜ್ಜಾವರ ಮೇನಾಲ ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ,ಉಪಾಧ್ಯಕ್ಷ ಅಂದ ಹಾಜಿ ಪ್ರಗತಿ, ಪ್ರ ಕಾರ್ಯದರ್ಶಿ ಶಾಫಿ ಮುಕ್ರಿ, ಕೋಶಾಧಿಕಾರಿ ಶರೀಫ್ ರಿಲಾಕ್ಸ್,ಕಾರ್ಯದರ್ಶಿ ಅಬೂಬಕ್ಕರ್,ಗ್ರಾ ಪಂ ಸದಸ್ಯ ಎ ಅಬ್ದುಲ್ಲಾ,ಹಿರಿಯರಾದ ಹಾಜಿ ಇಶಾಕ್ ಸಾಹೇಬ್ ಪಾಜಪಳ್ಳ,ಪಳ್ಳಿಕೆರೆ ಅಬ್ದುಲ್ಲಾ ಕುಂಞಿ ಹಾಜಿ,ಮೊದಲಾದವರು ಉಪಸ್ಥಿತರಿದ್ದರು.


ಸೌಹಾರ್ದ ಸಂಗಮದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ರೈ,ಹಿರಿಯರಾದ ಮಂಜುನಾಥ್ ರೈ ಬೇಲ್ಯ, ರಂಜಿತ್ ರೈ, ರವೀಂದ್ರ ನಾಥ್,ಕೃಷ್ಣಾ ಮೇನಾಲ,ಇನ್ನಿತರ ಮುಖಂಡರುಗಳು ಭಾಗವಹಿಸಿದ್ದರು.


ಸ್ಥಳೀಯ ಸರ್ಕಾರಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಶೌಕತ್ ಅಲಿ ಮುಖ್ಯಸರಾದ ಗುಡ್ಡಪ್ಪ ರೈ ಅವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.
ಮದರಸ ಕಟ್ಟಡ ಸಮಿತಿ ಕಾರ್ಯದರ್ಶಿ ಅಬ್ದುಲ್ ಖಾದರ್ ಬಯಂಬು ಸ್ವಾಗತಿಸಿ ಮೊಹಮ್ಮದ್ ರಾಫಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಅಬ್ದುಲ್ ರಜ್ಜಾಕ್ಕ್ ಮುಸ್ಲಿಯರ್ ಸಹಕರಿಸಿದರು.


ಈ ಸಂದರ್ಭದಲ್ಲಿ ಊರೂಸ್ ಸಮಿತಿ ವತಿಯಿಂದ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರಿಗೆ, ಹಾಗೂ ಉರೂಸ್ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ವಾಲಂಟಿಯರ್ಸ್ ಗ್ರೂಪಿನ ಮುಖ್ಯಸ್ಥರು, ದೀಪಾಲಂಕಾರ,ಧ್ವನಿ, ಶಾಮಿಯಾನ,ವ್ಯವಸ್ಥೆಗಳನ್ನು ಕಲ್ಪಿಸಿದ್ದ ಸಂಸ್ಥೆಯವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.