ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ವಾರ್ಷಿಕ ಮಹಾಸಭೆ

0


ಶ್ರೀ ಶಾಸ್ತಾವು ದೇವಸ್ಥಾನದ ವಾರ್ಷಿಕ ಮಹಾಸಭೆಯು ಜುಲೈ ೦೨ ರಂದು ದೇವಸ್ಥಾನದ ಸಭಾಭವನದಲ್ಲಿ ಆಡಳಿತ ಮೊಕ್ತೇಸರರಾದ ಜಿತೇಂದ್ರ ನಿಡ್ಯಮಲೆ ಯವರ ಅಧ್ಯಕ್ಷತೆಯಲ್ಲಿ ಜರುಗಿತು, ದೇವತಕ್ಕರು, ಮಾಜಿ ಮೊಕ್ತೇಸರರುಗಳು, ಮಾಜಿ ಜೀರ್ಣೋದ್ದಾರ ಅಧ್ಯಕ್ಷರುಗಳು, ಆಡಳಿತ ಸಮಿತಿ ಸದಸ್ಯರು, ಗ್ರಾಮದ ಜನ ಪ್ರತಿನಿಧಿಗಳು, ಚಾಕರಿ ವರ್ಗದವರು, ಗ್ರಾಮಸ್ಥರು ಉಪಸ್ಥಿತರಿದ್ದರು.


ಆಡಳಿತ ಸಮಿತಿ ಕಾರ್ಯದರ್ಶಿ ತೇಜಪ್ರಸಾದ್ ಆಮೆಚೂರು ರವರು ವಾರ್ಷಿಕ ಲೆಕ್ಕ ಪತ್ರವನ್ನು ಸಭೆಯಲ್ಲಿ ಮಂಡಿಸಿದರು. ಹಾಗೂ ಕಳೆದ ಸಾಲಿನಲ್ಲಿ ದೇವಸ್ಥಾನದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಮತ್ತು ಇತರ ಕಾರ್ಯಕ್ರಮಗಳ ಕುರಿತು ವಾರ್ಷಿಕ ವರದಿಯನ್ನು ಸಭೆಗೆ ನೀಡಿದರು.


ಮುಂದಿನ ಸಾಲಿನ ಆಡಳಿತ ಮೊಕ್ತೇಸರರಾಗಿ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿಯಾಗಿ ತೇಜಪ್ರಸಾದ್ ಅಮೆಚೂರು ರವರನ್ನು ಸಭೆಯು ಸರ್ವಾನುಮತದಿಂದ ಪುನರಾಯ್ಕೆ ಮಾಡಿತು. ನೂತನವಾಗಿ ಅಡ್ಕದ ಚಿನ್ನಪ್ಪರವರನ್ನು ಸಹಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು. ೯೦ ಜನರು ಆಡಳಿತ ಸಮಿತಿಗೆ ಸದಸ್ಯರಾಗಿ ಸೇರ್ಪಡೆಗೊಂಡರು. ಆಡಳಿತ ಸಮಿತಿಗೆ ಹೊಸದಾಗಿ ಮಹಿಳಾ ಸದಸ್ಯರನ್ನು ಸೇರಿಸಿಕೊಳ್ಳುವಂತೆ ತೀರ್ಮಾನಿಸಲಾಯಿತು.
ಬಣ್ಣ ಸಮುದಾಯದವರ ಕೋರಿಕೆಯಂತೆ ಅವರ ಕುಟುಂಬ ದೈವಸ್ಥಾನಕ್ಕೆ ಊರವರಿಂದ ಧನ ಸಂಗ್ರಹಿಸಿ ನೀಡುವಂತೆ ತೀರ್ಮಾನಿಸಲಾಯಿತು.

ದೇವಸ್ಥಾನದ ಮುಂಬಾಗದ ಜಾಗದ ಕುರಿತು ಸುಬ್ರಮಣ್ಯ ಮೂಲೆಮಜಲುರವರು ತಮ್ಮ ಅಭಿಪ್ರಾಯವನ್ನು ಸಭೆಯ ಮುಂದಿಟ್ಟರು. ನೂತನ ಕಾಮಗಾರಿಯಾಗಿ ಅಂದಾಜು ರೂ. ೪೦ ಲಕ್ಷ ವೆಚ್ಚದಲ್ಲಿ ದೇವಸ್ಥಾನದ ಅಡಿಗೆ ಕೋಣೆ ನವೀಕರಣ ಮತ್ತು ಪಡಿಪ್ಪಿರೆ ಮತ್ತು ಮುಖದ್ವಾರವನ್ನು ನೂತನವಾಗಿ ಪುನರ್ ನಿರ್ಮಾಣ ಮಾಡುವಂತೆ ತೀರ್ಮಾನಿಸಲಾಯಿತು. ಈ ಕುರಿತು ಕ್ಷೇತ್ರದ ತಂತ್ರಿಯವರು ಹಾಗೂ ಶಿಲ್ಪಿಗಳ ಸಲಹೆ ಪಡೆದು ಮುಂದುವರಿಯುವಂತೆ ಅಭಿಪ್ರಾಯ ವ್ಯಕ್ತವಾಯಿತು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಡಿಯಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಮೂರು ಜನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮಹಾಸಭೆಯಲ್ಲಿ ಗೌರವಿಸಲಾಯಿತು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ಜ್ಯೋತಿ ಪ್ರೌಢಶಾಲೆ ಪೆರಾಜೆಯ ಕುದ್ಕುಳಿ ಭಾಗ್ಯಶ್ರೀ ಕೆ. ಡಿ., ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅನುಜ್ಞ ನಿಡ್ಯಮಲೆ, ಬೆಂಗಳೂರಿನ ಚೈತನ್ಯ ಪಿಯು ಕಾಲೇಜ್‌ನ ವಿದ್ಯಾರ್ಥಿನಿ ಕುಂಬಳಚೇರಿಯ ಹಿಮಶ್ರೀ ಕೆ. ಬಿ.ಯವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ದೇವತಕ್ಕರಾದ ರಾಮಕಜೆ ರಾಜಗೋಪಾಲ ತಕ್ಕರುಗಳಾದ ಕೋಡಿ ಭಾಸ್ಕರ, ಗಣಪತಿ ಕುಂಬಳಚೇರಿ, ಭವಾನಿ ಶಂಕರ ಕೋಡಿ, ವಿಶ್ವನಾಥ ಮೂಲೆ ಮಜಲು ಉಪಸ್ಥಿತರಿದ್ದರು.
ಕದಿಕಡ್ಕ ಸೀತಾರಾಮರವರು ಪ್ರಾರ್ಥಿಸಿದರು. ಸಹ ಕಾರ್ಯದರ್ಶಿ ಅಡ್ಕದ ಚಿನ್ನಪ್ಪ ವಂದಿಸಿದರು.