ಅಡಿಕೆ ಬೆಳೆಗಾರರು ಈ ಬಾರಿ ಹವಾಮಾನ ಆಧಾರಿತ ಬೆಳೆ ವಿಮೆ ಬಗ್ಗೆ ಗೊಂದಲಕ್ಕೆ ಸಿಲುಕಿದ್ದರು. ಈ ಬಗ್ಗೆ ಸಹಕಾರಿ ಸಂಘ ಪ್ರಮುಖರು ಸಮಸ್ಯೆ ನಿವಾರಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು. ಸರ್ಕಾರ ಹಾಗೂ ವಿಮೆ ಕಂಪೆನಿಗಳ ಗೊಂದಲಗಳ ನಡುವೆ ವಿಮೆ ಕಟ್ಟಲು ಜೂನ್ ಅವಧಿ ಕೊನೆಗೊಂಡಿದ್ದರೂ ಸರ್ಕಾರದಿಂದ ಆದೇಶ ಬಂದಿರಲಿಲ್ಲ.
ಆದರೆ ಈಗ ಅಡಿಕೆ,ಕಾಳು ಮೆಣಸು ಬೆಳೆಗಳನ್ನು ವಿಮೆಯಲ್ಲಿ ಸೇರ್ಪಡೆಗೊಳಿಸಿ ತೋಟಗಾರಿಕಾ ಇಲಾಖೆ ಆದೇಶ ಹೊರಡಿಸಿದೆ. ಕೆಲವು ಜಿಲ್ಲೆಯ ಸಹಕಾರಿ ಸಂಸ್ಥೆಗಳಿಗೆ ಆದೇಶ ಬಂದಿದ್ದು, ಮುಂದಿನ ವಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಮೆ ಕಂತು ಕಟ್ಟಲು ಸಮಯ ನಿಗದಿಯಾಗುವ ಸಂಭವವಿದೆ ಎಂದು ತಿಳಿದುಬಂದಿದೆ. ವಿಮೆ ಕಂತು ಕಟ್ಟಲು ಕನಿಷ್ಠ ಸಮಯ ನಿಗದಿಯಾಗುವುದರಿಂದ ಸಹಕಾರ ಸಂಘಗಳಲ್ಲಿ ಕೆಲಸದ ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ.